Advertisement

Madikeri: ವಿವಿಧ ಪ್ರಕರಣಗಳ ಆರೋಪಿಗಳ ಬಂಧನ: 8 ಬೈಕ್ ಸೇರಿ ಹಲವು ಸೊತ್ತುಗಳು ವಶ

05:00 PM Aug 24, 2024 | |

ಮಡಿಕೇರಿ: ಕಟ್ಟಡ ಕಾಮಗಾರಿಗಾಗಿ ಬಳಸುವ ಯಂತ್ರಗಳನ್ನು ಕಳ್ಳತನ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ ಯಂತ್ರಗಳು ಸೇರಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ 8 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಕುಶಾಲನಗರದ ಗೋಪಾಲ ಸರ್ಕಲ್ ನ ಮಹಮ್ಮದ್ ಆಸೀಫ್ (19), ಹೆಚ್.ಆರ್.ಪಿ ಕಾಲೋನಿಯ ಕೀರ್ತನ್ ವಿ.ಬಿ (26), ಚೌಡೇಶ್ವರಿ ಬಡಾವಣೆಯ ವಿಶ್ವತ್ (18) ಹಾಗೂ ಟೌನ್ ಕಾಲೋನಿಯ ಜಯಪ್ರಕಾಶ್ ಹೆಚ್.(22) ಬಂಧಿತ ಆರೋಪಿಗಳು.

ಬಂಧಿತರ ಬಳಿಯಿಂದ ಕಟ್ಟಡ ಕಾಮಗಾರಿಯ ಯಂತ್ರಗಳು ಹಾಗೂ 8 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ:
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಆರ್.ಕೆ ಲೇಔಟ್ ನಲ್ಲಿರುವ ಈಶ್ವರ್ ಎಂಬುವವರ ಹೊಸ ಮನೆ ಕಟ್ಟಡ ಕಾಮಗಾರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಇಡಲಾಗಿದ್ದ ವಿವಿಧ ಮಾದರಿಯ ಕಟ್ಟಿಂಗ್ ಮಿಷನ್, ಡೀಲಿಂಗ್ ಮಿಷನ್, ಏರ್‌ಬೋವರ್, ವ್ಯಾಕ್ಯೂಮ್ ಕ್ಲೀನರ್, ಗ್ರೇಂಡಿಂಗ್ ಮಿಷನ್ ಸೇರಿದಂತೆ ಒಟ್ಟು 11 ಯಂತ್ರಗಳು ಕಳ್ಳತನವಾಗಿರುವ ಕುರಿತು ಆ.20 ರಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಠಾಣೆಯ ಸಿಪಿಐ ಪ್ರಕಾಶ್.ಬಿ.ಜೆ, ಪಿಎಸ್‌ಐ ಗೀತಾ ಹೆಚ್.ಟಿ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದರು.

Advertisement

ವಿವಿಧ ಪ್ರಕರಣಗಳ ಆರೋಪ:
ಆರೋಪಿಗಳ ವಿಚಾರಣೆಯ ಸಂದರ್ಭ 2022 ಮತ್ತು 2023 ನೇ ಸಾಲಿನಲ್ಲಿ ಅರಕಲಗೂಡು, ಬೆಟ್ಟದಪುರ, ಪಿರಿಯಾಪಟ್ಟಣ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿ-ಚಕ್ರ ವಾಹನ ಕಳವು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹಮ್ಮದ್ ಆಸೀಪ್, ಕೀರ್ತನ್ ಹಾಗೂ ವಿಶ್ವತ್ ವಿರುದ್ಧ ಈ ಹಿಂದೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಕಳವು ಪ್ರಕರಣ ದಾಖಲಾಗಿತ್ತು. ಬಂಧನವಾದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ತನಿಖೆ ಸಂದರ್ಭ ತಿಳಿದುಬಂದಿದೆ. ಆರೋಪಿಗಳಾದ ಕೀರ್ತನ್ ಹಾಗೂ ಜಯಪ್ರಕಾಶ್ ವಿರುದ್ಧ ಈ ಹಿಂದೆ ಸೋಮವಾರಪೇಟೆ, ಕುಶಾಲನಗರ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್, ಕಳವು, ದರೋಡೆ, ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Hubli; ಶಾಸಕರ ಪರೇಡ್‌ ಮೂಲಕ ಮುಡಾ ಹಗರಣ ಮರೆಮಾಚಲು ಸಿಎಂ ಯತ್ನ: ಬಸವರಾಜ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next