ನಿರ್ದೇಶಕ ಸುಧೀರ್ ಅತ್ತಾವರ್ ಅವರು ನಿರ್ದೇಶಿಸಿರುವ “ಮಡಿ’ ಎಂಬ ಅದ್ಭುತ ಕಿರುಚಿತ್ರಕ್ಕೆ ಈಗಾಗಲೇ ಹಲವು ಪ್ರಶಸ್ತಿ, ಪ್ರಶಂಸೆಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಹಾಗಾಗಿ ಇದೊಂದು ವಿಭಿನ್ನ ಪ್ರಯೋಗದ ಕಿರುಚಿತ್ರ ಎನ್ನಲ್ಲಡ್ಡಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ ಹಲವು ವಿಶೇಷತೆಗಳಿವೆ.
ಮೊದಲ ವಿಶೇಷವೆಂದರೆ, ಇದೊಂದು ಕರಾವಳಿ ಜನಪದ ಕಲೆಯಾಗಿರುವ “ಆಟಿ ಕಳಂಜ’ ಎಂಬ ಒಂದು ಸೂಕ್ಷ್ಮ ವಿಚಾರದ ಕುರಿತು ಗಹನವಾಗಿ ಬೆಳಕು ಚೆಲ್ಲುವಂತಹ ಕಥೆ ಹೆಣೆದು ಮಾಡಿರುವ ಚಿತ್ರವಾಗಿದೆ. ಇನ್ನೊಂದು ವಿಶೇಷವೆಂದರೆ, ಈ ಸಿನಮಾ ಕೂಡ ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಸುಮಾರು 25 ನಿಮಿಷಗಳ ಈ “ಮಡಿ’ ಎಂಬ ಕಿರುಚಿತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಶೇಷ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.
ಕಥೆ ಹಾಗು ಪಾತ್ರ ಕೇಳಿದೊಡನೆ ತುಂಬಾನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಕಿರುಚಿತ್ರ ಇದಾಗಿದ್ದು, ಎಂ.ಡಿ.ಪಲ್ಲವಿ ಅವರಿಗೆ ಹೊಸ ಬಗೆಯ ಪಾತ್ರ, ಕಥೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ “ಮಡಿ’ ಚಿತ್ರದ ಮೂಲಕ ಈಡೇರಿದೆ. ಅಂದಹಾಗೆ, ಈ ಚಿತ್ರ ಇತ್ತೀಚೆಗೆ ಆನ್‌ಲೈನ್ ಪ್ರೀಮಿಯರ್ ಆಗಿದ್ದು ವಿಶೇಷತೆಗಳಲ್ಲೊಂದು. ನಿರ್ದೇಶಕ ಸುಧೀರ್ ಅತ್ತಾವರ್ ಅವರು ಈ ವಿಶೇಷ ಆನ್‌ಲೈನ್ ಪ್ರೀಮಿಯರ್ ಎಂಬ ಹೊಸ ಕಾನ್ಸೆಪ್ಟ್ನೊಂದಿಗೆ “ಮಡಿ’ ಚಿತ್ರದೊಳಗಿನ ಆಶಯ ಅದರಲ್ಲಿರುವ ತವಕ, ತಲ್ಲಣ ವಾಸ್ತವ ಅಂಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಈಗಾಗಲೇ ಸಿನಿಮಾ ನೋಡಿದವರು ಕಲಾವಿದರು ಮತ್ತು ಖ್ಯಾತ ಗಾಯಕ, ಕಲಾವಿದರಾದ ಶರೂನ್ ಪ್ರಭಾಕರ್ ಅವರಂತಹವರ ಜೊತೆ ಸಂವಾದ-ಚರ್ಚೆ ಕೂಡ ಮಾಡಿದ್ದಾರೆ. ಹಲವರು ಆನ್‌ಲೈನ್ ಪ್ರೀಮಿಯರ್‌ನಲ್ಲಿ “ಮಡಿ’ ಸಿನಿಮಾ ಕುರಿತು ಶರೂನ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಇನ್ನು “ಮಡಿ’ ಚಿತ್ರದ ಶೀರ್ಷಿಕೆ ಕೆಳಗೆ ಮಲಿನ ಮನಗಳ ಕ್ರೌರ್ಯ ಎಂಬ ಅಡಿಬರಹವೂ ಇದೆ. ಅಲ್ಬರ್ಟ್ ಜೋಸ್ಸಿ ರೇಗೋ ಅರ್ಪಿಸಿರುವ ಈ ಚಿತ್ರ ಸಕ್ಸಸ್ ಫಿಲ್ಮ್ ಮತ್ತು ಸೂರಜ್ ವಿಷ್ಯುವಲ್ಸ್ ಪ್ರೊಡಕ್ಷನ್‌ನಲ್ಲಿ ತಯಾರಾಗಿದೆ. ವಿದ್ಯಾದರ್ ಅವರ ಸಂಕಲನವಿರುವ “ಮಡಿ’ ಸಿನಿಮಾ ಇಂಗ್ಲೀಷ್ ಸಬ್‌ಟೈಟಲ್‌ನಲ್ಲೂ ಮೂಡಿ ಬಂದಿದೆ.
ಅದೇನೆ ಇರಲಿ, ಆನ್‌ಲೈನ್ ಪ್ರೀಮಿಯರ್ ಎಂಬ ಹೊಸ ಬಗೆಯ ವಿಷಯದೊಂದಿಗೆ ಚಿತ್ರವನ್ನು ತೋರಿಸಿ, ಆ ಕುರಿತು ಮಾತನಾಡಲು ಹಲವು ಸೆಲಿಬ್ರಿಟಿಗಳನ್ನು ಕಲೆಹಾಕಿ, ಸಂವಾದ ನಡೆಸಿದ್ದು ವಿಶೇಷತೆಗಳಲ್ಲೊಂದು. ಈ ಪ್ರೀಮಿಯರ್ ಸಂವಾದದಲ್ಲಿ ಶ್ರೀನಿವಾಸ ಪ್ರಭು, ಎಂ.ಡಿ.ಪಲ್ಲವಿ, ವಿನೋದ್ ತ್ರಿವೇದಿ, ಹಿಮಾಂಗಿನಿ,ಡಾ.ಡಿ.ವಿ.ಗುರುಪ್ರಸಾದ್, ನಂದಿನಿ ಮೆಹ್ತಾ, ಸುರೇಶ್, ಸಾ.ನಾ.ರವಿಕುಮಾರ್,ನೀಲಂ ಗುಪ್ತ ಲೂನ್ಕರ್, ಜಾನ್ ವರ್ಗೀಸ್ ಚೆರಿಯನ್, ಪ್ರಕಾಶ್ ಶೆಟ್ಟಿ, ಸೂರಜನ್ ಸೇರಿದಂತೆ ಹಲವರು ಸೆಲಿಬ್ರಿಟಿಗಳು ಇತ್ತೀಚೆಗೆ “ಮಡಿ’ ಚಿತ್ರದ ಪ್ರೀಮಿಯರ್ ಜೊತೆ ಮಾತುಕತೆಯಲ್ಲೂ ತೊಡಗಿದ್ದು ವಿಶೇಷ.