ಬೆಂಗಳೂರು: ಹಿಂದಿನ ಸರ್ಕಾರದಲ್ಲಿ ಶೇ.20 ರಿಂದ 30ರಷ್ಟು ಕಮಿಷನ್‌ಗಾಗಿ ಪ್ಯಾಕೇಜ್ ಗುತ್ತಿಗೆ ನೀಡಿ ಎಲ್ಲ ವ್ಯವಸ್ಥೆಯನ್ನು ಔಟ್‌ಸೋರ್ಸ್ ಮಾಡಿದೆ. ವಿಧಾನಸೌಧವನ್ನೂ ಔಟ್‌ಸೋರ್ಸ್ ಮಾಡಿದರೆ ನಾವೂ ಅವರ ಕೆಳಗೆ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯ ಮಾಧುಸ್ವಾಮಿ ಗಂಭೀರ ಆರೋಪ ಮಾಡಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಭರವಸೆಯಿಲ್ಲ.
ಅನಿವಾರ್ಯವಾಗಿ ಪೋಸ್ಟ್‌ಮಾರ್ಟ್‌ಂ ಮಾಡಬೇಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡು ಈಗ ಸಾಂದರ್ಭಿಕ ಶಿಶು ಎಂದು ಆನಾರೋಗ್ಯದ ಕಾರಣ ಹೇಳಿದ್ದಾರೆ. ನಾವಿಕನೇ ಆನಾರೋಗ್ಯ ಎಂದರೆ ನಾವೆಲ್ಲ ಎಲ್ಲಿ ಹೋಗುವುದು ಎಂದರು. ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ಬಂದಿದ್ದ ಎಸಿಬಿ ಮುಚ್ಚಿಸುವುದು, ಕಲಬೆರೆಕೆ ಎಣ್ಣೆ ನಿಯಂತ್ರಣ ಮಾಡುವುದು.
ರಾಜಕೀಯ ಪ್ರೇರಿತ ಕೊಲೆಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಈಗ ಅವರೊಂದಿಗೆ ಸರ್ಕಾರ ರಚನೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಿ.ಟಿ. ರವಿ ಸರ್ಕಾರವೇ ಕಲಬೆರಕೆಯಾಗಿದೆ ಎಂದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಹಿಂದೆ ನೀವು ಜೆಡಿಎಸ್ ಜತೆ ಕೈ ಜೋಡಿಸಿದಾಗ ಕಲಬೆರಕೆಯಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಮತ್ತೆ ಮಾತು ಮುಂದುವರಿಸಿದ ಮಾಧುಸ್ವಾಮಿ, ಶಾಸಕರಿಗೆ ಗೊತ್ತಿಲ್ಲದೆಯೇ ಬೆಂಗಳೂರಿನಲ್ಲಿಯೇ ಎಲ್ಲ ಯೋಜನೆಗಳನ್ನು ಟೆಂಡರ್ ಕರೆಯದೆ ಕ್ರೆಡೆಲ್, ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗುತ್ತಿದೆ. ಇದರ ಹಿಂದಿನ ಉದ್ದೇಶವೇನು? ಎಪಿಎಂಸಿಗಳನ್ನು ಆನ್‌ಲೈನ್ ಮಾಡಿದ್ದೇವೆಂದು ಹೇಳಿದ್ದಾರೆ. ಅದನ್ನು ಔಟ್‌ಸೋರ್ಸ್ ಮಾಡಿ ರೈತರಿಗೆ ಯಾವುದೇ ಅನುಕೂಲವಾಗದಂತಾಗಿದೆ.
ಕೇವಲ ಮೂರು ನಾಲ್ಕು ಕಂಟ್ರಾಕ್ಟರ್‌ಗಳನ್ನು ಇಟ್ಟುಕೊಂಡು ಹಿಂದಿನ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಆರೋಪಿಸಿದರು. ಅಂಗನವಾಡಿಗೆ ಆಹಾರ ಸರಬರಾಜು ಯಾರಿಗೆ ಕೊಟ್ಟಿದ್ದೀರಿ ? ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆ ತುಂಬಿಸಲು ಕಾಲುವೆ ನಿರ್ಮಿಸಲು ಜಮೀನು ವಶ ಪಡಿಸಿಕೊಳ್ಳದೇ ಯೋಜನೆ ಪೂರ್ಣಗೊಳಿಸಿರುವುದಾಗಿ ಬೋರ್ಡ್ ಹಾಕಿಕೊಂಡಿದ್ದಾರೆ.
ನೆಂಟರಿಗೆ ಸಹಾಯ ಮಾಡಲು ಯೋಜನೆಗಳ ಗುತ್ತಿಗೆ ನೀಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಎಸ್‌ಟಿಪಿ, ಟಿಎಸ್‌ಪಿ ಯೋಜನೆ ಜಾರಿಗೆ ತಂದು ದಲಿತರ ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ, ಬಿಟ್ಟರೆ ಅವರ ಆರ್ಥಿಕ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಅವರ ಆರೋಪಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ಆಕ್ಷೇಪ ಎತ್ತಿ ಹಿಂದಿನ ಅವಧಿಯಲ್ಲಿದ್ದ ಎಲ್ಲ ಶಾಸಕರು ಭ್ರಷ್ಟರು ಎನ್ನುವುದು ಸರಿಯಲ್ಲ. ನಮ್ಮ ಕ್ಷೇತ್ರಗಳಿಗೆ ಬನ್ನಿ ಸಾಕಷ್ಟು ಕೆಲಸ ಮಾಡಿದ್ದೇವೆಂದು ಸವಾಲು ಹಾಕಿದರು. ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಕೂಡ ಅವರ ಬೆಂಬಲಕ್ಕೆ ನಿಂತು ಹಿಂದಿನ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ ಎಂದು ಸಮರ್ಥಿಸಿಕೊಂಡರು.