Advertisement

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ

06:36 PM Nov 18, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಸರ್ಕಾರ ಕೇವಲ ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಿದೆ, ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಇರುವಾಗ ಗ್ಯಾರಂಟಿ ಯೋಜನೆಗಳ ಕೊಟ್ಟಿದ್ದರೆ? ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಕನಕ ಜಯಂತಿ ಅಂಗವಾಗಿ ಸೋಮವಾರ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆಗೈದು ಸಿಎಂ ಸಿದ್ದರಾಮಯ್ಯ ಮಾತನಾಡಿ  ರಾಜ್ಯದಿಂದ ಕೇಂದ್ರಕ್ಕೆ ₹4.50 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ವಾಪಸ್‌ ಬರುವುದು ₹59 ಸಾವಿರ ಕೋಟಿ ಮಾತ್ರ. ಉಳಿದ ದುಡ್ಡು ಕೇಂದ್ರದ ಬಳಿ ಇದೆ. ಅದನ್ನು ರಾಜ್ಯಕ್ಕೆ ಕೊಡಿಸಲಿ. ಬರೀ ಮಾತನಾಡಿದರೆ ಪ್ರಯೋಜನವೇನು? ಎಚ್.ಡಿ.ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಮಾತನಾಡಿದ್ದರೆಯೇ? ಎಂದು ಕೇಳಿದರು.

ಕೇಂದ್ರ ಮಂತ್ರಿಗಳಾಗಿ ಏನು ಮಾಡಿದ್ದಾರೆ?:
ನಬಾರ್ಡ್ ವತಿಯಿಂದ ಕಳೆದ ವರ್ಷ ₹5,600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಗಿತ್ತು. ಈ ವರ್ಷ ₹2,340 ಕೋಟಿ ನೀಡಿದ್ದಾರೆ ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣ  ಶೇ. 58ರಷ್ಟು ಕಡಿಮೆ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ? ರೈತರಿಗೆ ಅನ್ಯಾಯ ಮಾಡಬೇಡಿ, ಇದು ದ್ರೋಹದ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದೇನೆ ಎಂದರು.

2023-24ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಈ ಬಗ್ಗೆ ಏನು ಕೇಳಿದ್ದಾರೆ? 15ನೇ ಹಣಕಾಸು ಆಯೋಗದಡಿ ₹11,595 ಕೋಟಿ ಘೋಷಣೆ ಮಾಡಿದ್ದರು. ಎಲ್ಲಿ ಕೊಟ್ಟರು? ಇದನ್ನು ನೀವು ಕೇಳುವುದಿಲ್ಲ. ₹56,000 ಕೋಟಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರವಿರುವಲ್ಲಿ ಏಕಿಲ್ಲ:
ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ. ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ನೀಡಿಲ್ಲ. ಅನ್ನಭಾಗ್ಯ ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017ರಲ್ಲಿ 1 ರೂಪಾಯಿಗೆ ನೀಡುತ್ತಿದ್ದ ಅಕ್ಕಿ ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂತಹ ಯೋಜನೆ ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣದಲ್ಲಿ ಎಲ್ಲಿ ಮಾಡಿದ್ದಾರೆ? ಎಂದರು.

Advertisement

ಮಹಾರಾಷ್ಟ್ರ ಸರಕಾರದ ವಿರುದ್ಧ ಮೊಕದ್ದಮೆಗೆ ಚಿಂತನೆ:
ಕಾಂಗ್ರೆಸ್‌ ಸರಕಾರದ ಪ್ರಮುಖ ಐದು ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಮಹಾಯುತಿ ಸರ್ಕಾರದ ವಿರುದ್ಧ ಕಾನೂನು ಕ್ರಮದ ಕುರಿತು ಪರಿಶೀಲಿಸಲಾಗುತ್ತಿದೆ. ‘ಮತ ಪಡೆಯುವ ಸಲುವಾಗಿ ಮಹಾರಾಷ್ಟ್ರದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಅವರು(ಪ್ರಧಾನಿ) ಸುಳ್ಳು ಹೇಳುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಸುಳ್ಳು ಜಾಹೀರಾತು ನೀಡುತ್ತಿದೆ’ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next