ಏ ಸಖೀ, ನಿನ್ನ ಹಳೆ ಕಥೆಗಳು ಬೇಜಾರು, ದೀಪಾವಳಿಯ ಕಥೆಯೇ ಬೇಕು ಎಂದೆ, ಅದನ್ನು ಹೇಳಲೆಂದೆ ನಾ ಓಡಿ ಬಂದೆ. ಆದರೆ ಕಥೆಯು ಮುಗಿಯುವ ತನಕ ನಾನು ಕರೆದುಕೊಂಡೋದಲ್ಲಿ ನೀನು ಬರಬೇಕು ಅಷ್ಟೆ ಎಂದೆ. ಸರಿ ಎಂದು ತಲೆ ಆಡಿಸಿದಳು ಆರು ವರುಷದ ಪುಟಾಣಿ ಸಖೀ. ಕಿವಿಗಳೆರಡು ನೆಟ್ಟಗೆ ಮಾಡಿಕೊಂಡು, ಬಾ ಎಂದು ಕರೆದೊಯ್ದಿದ್ದು ದೇವಲೋಕಕ್ಕೆ, ಕಲ್ಪನಾಲೋಕದ ಕಥಾಯಾನ ಶುರು. ಹೀಗೊಂದು ಕಥೆ ಪ್ರಾರಂಭವಾಯಿತು.
ಒಂದೊಮ್ಮೆ ದೇವಲೋಕದಲ್ಲಿ ಸಭೆಯೊಂದ ಏರ್ಪಡಿಸಲಾಗುತ್ತದೆ. ಆ ಸಭೆಯಲ್ಲಿ ಬೆಳಕಿನ ಕಿಡಿಗಳು ನಮ್ಮ ನಿಜವಾದ ಬದುಕಿನ ಅರ್ಥ ಎನ್ನುವುದು ಎಂದು ಮಾತನಾಡುತ್ತಿರುತ್ತವೆ. ಮಾತು ವಾದವಾಗಿ, ವಾದ ಜಗಳವಾಗಿ ಘರ್ಷಣೆ ಆಗುತ್ತದೆ. ಬೆಳಕಿನ ಕಿಡಿಗಳೆಲ್ಲ ಒಂದೊಂದು ರೀತಿಯಲ್ಲಿ ವಾದ ಮಾಡುತ್ತಿರಲು ಬದುಕನ್ನು ಹೇಗೆ ಎಲ್ಲಿ ಬೆಳಗಬೇಕು ಎನ್ನುವುದನ್ನು ಕುರಿತು ಚರ್ಚೆ ಏರ್ಪಟಿತ್ತು. ಅಲ್ಲಿದ್ದ ಸೋಮಾರಿ ಬೆಳಕಿನ ಕಿಡಿಯೊಂದು ಕಿಡಿ ತನ್ನ ಕಾರ್ಯದ ಶ್ರೇಣಿಯಲ್ಲಾಗಲಿ ಅಥವಾ ಯಾವುದೇ ಜವಾಬ್ದಾರಿಯಲ್ಲಾದರೂ ಸೋಮಾರಿಯಾಗಿ ಹಿಂದೆಯೇ ಇರುತ್ತಿತ್ತು. ದೇವಲೋಕದಲ್ಲಿ ಹಾಕಲಾದ ಶ್ರೇಣಿಯಲ್ಲಿ ಕೊನೆಯ ಬೆಳಕಿನ ಕಿಡಿಯಾಗಿ ಅದರ ಸ್ಥಾನ ಗಟ್ಟಿಯಾಗಿತ್ತು. ಈ ರೀತಿಯಾದ ಬೆಳಗಿನ ಕಿಡಿಗೆ ಈ ವಾದ-ವಿವಾದಗಳಿಂದ ಹೆದರಿಕೆಯಾಗಿತ್ತು. ತನ್ನ ಬಾಲ್ಯದಿಂದ ಪ್ರಸ್ತುತದವರೆಗೂ ಸುಖವನ್ನೇ ಕಂಡ ಬೆಳಕಿನ ಕಿಡಿಗೆ ನಿಜವಾಗಲೂ ಬದುಕಿನ ಅರ್ಥವೇ ಗೊತ್ತಿರಲಿಲ್ಲ, ತಿಳಿದುಕೊಳ್ಳಬೇಕೆಂಬ ಅವಶ್ಯಕತೆ ಅಥವಾ ಯಾವುದೇ ಆಸಕ್ತಿಯೂ ಆ ಬೆಳಕಿನ ಕಿಡಿಗೆ ಇರಲಿಲ್ಲ. ಬದುಕಿನಲ್ಲಿ ಅದಕ್ಕೆ ಬೇಕಾಗಿದ್ದ ಎಲ್ಲ ಆಡಂಬರವೂ ಸುಖವು ದೇವಲೋಕದಲ್ಲಿ ಐಷಾರಾಮಿ ಜೀವನದಲ್ಲಿ ಸಿಗುತ್ತಿತ್ತು. ಆದರೆ ದೇವಲೋಕದಲ್ಲಿದ್ದ ಬೆಳಕಿನ ಕಿಡಿಗಳಿಗೆ ತಮ್ಮ ಜೀವನದ ನಿಜವಾದ ಅರ್ಥ ತಿಳಿಯದ ಕಾರಣದಿಂದ ಅವುಗಳಲ್ಲಿ ದೈವೀಶಕ್ತಿ ಪ್ರಾಪ್ತಿ ಆಗಿರಲಿಲ್ಲ. ಈ ಶಕ್ತಿಗಳನ್ನು ಪ್ರಾಪ್ತಿ ಮಾಡಿಕೊಳ್ಳಲು ಜೀವನದ ನಿಜವಾದ ಅರ್ಥವನ್ನು ಹುಡುಕುವುದು ಅವಶ್ಯವಾಗಿತ್ತು. ಇದನ್ನು ತಿಳಿಯದೆ ಹಿರಿಯ ಬೆಳಕಿನ ಕಿಡಿಗಳು ವಾದ-ವಿವಾದ ಮಾಡುವಾಗ ಈ ಸೋಮಾರಿ ಪುಟಾಣಿ ಬೆಳಕಿನ ಕಿಡಿಯೊಂದು ಶ್ರೀಮಂತಿಕೆ ಇಂದ ಮಾತ್ರ ಬದುಕಿಗೊಂದು ಅರ್ಥವೆನ್ನುತ್ತದೆ. ಈ ಮಾತನ್ನು ಕೇಳಿ ಬೇಸರಗೊಂಡ ಅಲ್ಲಿನ ಮುಖ್ಯ ದೇವತೆ ಆ ಬೆಳಕಿನ ಕಿಡಿಯನ್ನು ಭುವಿಯಲ್ಲಿ ಹೋಗಿ ನಿನ್ನ ಬದುಕಿನ ಅರ್ಥವನ್ನು ಹುಡುಕಿಕೊಂಡು ಬಾ ಎಂದು ಕಳುಹಿಸುತ್ತಾರೆ. ನಿನ್ನ ಬೆಳಕಿಗೆ ಸರಿಯಾದ ಜಾಗ ಸಿಗುವ ತನಕ ದೇವ ಲೋಕಕ್ಕೆ ನೀನು ಬರುವಂತಿಲ್ಲ ಎಂದು ಬಹಿಷ್ಕರಿಸುತ್ತಾರೆ ಎಂದು ಹೇಳಿದಾಗ ಪುಟ್ಟ ಸಖೀ ಎರಡು ಕಣ್ಣನ್ನು ಬಿಚ್ಚಿಕೊಂಡು ನನ್ನನ್ನೇ ದಿಟ್ಟಿಸುತ್ತಿದ್ದಳು.
ಭೂಲೋಕಕ್ಕೆ ಪ್ರಾಯಶ್ಚಿತಕ್ಕಾಗಿ ಬಂದ ಬೆಳಕಿನ ಕಿಡಿ ಸ್ವರ್ಗದಿಂದ ಬೀಳುವಾಗ ರಭಸವಾಗಿ ಮಣ್ಣಿನ ನೆಲವನ್ನು ಸೇರಿತು. ಮೇಲಿನಿಂದ ಬಿದ್ದ ಕಾರಣ ಅದು ಬಿದ್ದ ಹೊಡೆತಕ್ಕೆ ಬೆಳಕಿನ ಕಿಡಿಯ ಸುತ್ತ ಮಣ್ಣು ಮೆತ್ತಿದ ಕಾರಣ ಬೆಳಿಕಿನ ಕಿಡಿ ಮಣ್ಣಲ್ಲಿ ಸೇರಿ ಹೋಗಿತ್ತು. ಆ ಮಣ್ಣು ಮಳೆಯನ್ನು ಕಂಡಿತು, ಬಿಸಿಲಿನ ಬೇಗೆಯನ್ನು ಕಂಡಿತು, ರೈತನ ಬೆವರಲ್ಲಿ ತೆವವಾಯಿತು, ಹಸುರಿಗೆ ಕಂಗೊಳಿಸಿತು. ಪ್ರಕೃತಿಯ ಮಡಲಿನಲ್ಲಿ ಮಾಗಿದ ರಸ ಮಾವಿನಂತೆ ಪರಿಪಕ್ವವಾಯಿತು. ಮಣ್ಣ ಒಳಗೆ ತನ್ನ ಬೆಳಕಿನ ಅಂಶವನ್ನು ಹಿಡಿದಿದ್ದ ಆ ಬೆಳಕಿನ ಕಿಡಿ ಜೀವನವು ಏನೆನ್ನುವುದು ಆ ಬೆಳಿಕಿನ ಕಿಡಿಗೆ ತಿಳಿದು ಹೋಗಿತ್ತು. ಅದು ರೈತನ ಬೆವರಿನ ಪರಿಶ್ರಮ, ತನ್ನ ಮಣ್ಣಿನಿಂದ ಚಿಗುರಿದ ಗಿಡಮೂಲಿಕೆಯ ಗುಣ ಇದೆ ರೀತಿ ನೋವು ನಲಿವು ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾಹೋಯಿತು. ಅನಂತರ ಈ ಮಣ್ಣನು ಕುಂಬಾರನು ಮಡಿಕೆ ಮಾಡಲೆಂದು ತೆಗೆದುಕೊಂಡು ಹೋದನು. ಮಣ್ಣಿನ ರೂಪವನ್ನು ಬೆಳಕಿನ ಕಿಡಿ ಪಡೆದಿದ್ದರಿಂದ, ಮಣ್ಣು ಜೇಡಿ ಮಣ್ಣಿನಲ್ಲೂ ಸೇರಿತು, ಕಪ್ಪುಮಣ್ಣಲ್ಲೂ ಸಹ. ಕುಂಬಾರನು ಆ ಮಣ್ಣಿನಲ್ಲಿ ಈ ಭಾರಿ ಹಣತೆ ಮಾಡಿದ. ಅದನ್ನು ಬಿಸಿಯಲ್ಲಿ ಸುಟ್ಟು ಮನೆಯ ಮುಂದೆ ಹಾಕಿದ, ದೀಪವನ್ನು ಬೆಳಗಿದ, ಅದನ್ನು ಕಂಡ ಜನರು ಈ ರೀತಿಯ ದೀಪವೊಂದು ಬೇಕೆಂದು ಬೇಡಿಕೆ ಇಟ್ಟರು. ಆ ಬೆಳಿಕಿನ ಕಿಡಿಯ ಮಣ್ಣಿನ ರೂಪದಲ್ಲಿ ಮಾಡಿದ ಹಣತೆಯಲ್ಲಿ ಬಂದ ಬೆಳಕು ಕೇವಲ ಉರಿಯಲಿಲ್ಲ ಬದಲಾಗಿ ಪ್ರಜ್ವಲಿಸಿತು. ಅದರ ಪ್ರಕಾಶ ದೇವಲೋಕವನ್ನು ಜಗಮಗಿಸುವಂತೆ ಮಾಡಿತು, ಇದರ ಮೂಲ ತಿಳಿದ ದೇವತೆಗಳು ಆ ಮೂಲ ಹಣತೆಯನ್ನು ಕರೆದೊಯ್ದು ನೀನೇ ಶ್ರೇಷ್ಠ ಎಂದರು. ಜೀವನ, ಬದುಕಿನ ನಿಜವಾದ ಅರ್ಥವನ್ನು ತಿಳಿದ ಕಾರಣ ಆ ಬೆಳಿಕಿನ ಕಿಡಿಗೆ ದೈವತತ್ವ ಪ್ರಾಪ್ತಿಯಾಯಿತು. ಇದರ ಫಲವಾಗಿ ಜನರ ನಕರಾತ್ಮಕ ಚಿಂತನೆಗಳನ್ನು ದೂರ ಮಾಡಿ ಸಕರಾತ್ಮಕ ಚಿಂತನೆಗಳನ್ನು ಹುಟ್ಟುಹಾಕುವ ಶಕ್ತಿ ಲಭಿಸಿತು, ಕತ್ತಲನ್ನು ಓಡಿಸಿ ಬೆಳಕನ್ನು ತರುತಿತ್ತು. ದೇವತೆಗಳ ಸಮೂಹ ಈ ಬೆಳಕಿನ ಕಿಡಿಯನ್ನು ಶ್ರೇಷ್ಠವೆಂದು ಗೌರವಿಸಿದರು. ಆದರೆ ಮಂಕಾಗಿದ್ದ ಹಣತೆಯ ಕಂಡು ಕಾರಣ ಕೇಳಿದಾಗ ದೇವತೆಗಳು ಸಹ ಮೂಕವಿಸ್ಮಿತಾರಾದರು. ಹಣತೆಯು ತನ್ನನು ಪುನಃ ಭುವಿಗೆ ಕಳುಹಿಸಬೇಕೆಂದು ವಿಜ್ಞಾಪಿಸಿತು. ಹಿರಿಯ ಬೆಳಕಿನ ಕಿಡಿ ಕಾರಣ ಕೇಳಿತು, ಉತ್ತರವಾಗಿ ಹಣತೆ ನುಡಿಯಿತು ಬದುಕಿನ ನಿಜವಾದ ಅರ್ಥವಿರುದು ಶ್ರೀಮಂತಿಕೆಯಲ್ಲಲ್ಲಾ, ಐಷಾರಾಮಿ ಜೀವನದಲ್ಲಿಯೂ ಅಲ್ಲ, ಬದಲಾಗಿ ಅಗತ್ಯ ಇದ್ದವರಿಗೆ ಸಹಾಯ ಮಾಡುವುದರಲ್ಲಿ, ತಮ್ಮ ಅವಶ್ಯಕತೆ ಇದ್ದಲಿ ತಮ್ಮನ್ನು ತಾವು ಸಮರ್ಪಸಿಕೊಳ್ಳುವುದರಲ್ಲಿ, ಸಮರ್ಪಣೆ ಜೀವನದ ಉದ್ದೇಶ ಆಗಬೇಕು. ಇದು ನಾನು ಭೂಲೋಕದ ಈ ಅವಧಿಯಲ್ಲಿ ಕಲಿತ ಪಾಠ ಅದಕ್ಕಾಗಿ ನಾನು ಮರಳಿ ಭುವಿಗೆ ಹೋಗಿ ಅಲ್ಲಿನ ಜನರ ಬಾಳಲ್ಲಿ ಬೆಳಕು ತರುವ ಕೆಲಸ ಮಾಡಬೇಕು ಎಂಬುದು ನನ್ನ ಆಸೆ ಎಂದಿತು. ಭೂಮಿಗೆ ಹೊರಡುವ ಸಮಯದಿಂದ ಆ ಬೆಳಕಿನ ಕಿಡಿಯಲ್ಲಿ ದೇವಲೋಕದ ಎಲ್ಲ ಬೆಳಕಿನ ಕಿಡಿಗಳು ಲೀನವಾದವು. ಮುಂದೆ ಕತ್ತಲನ್ನು ದೂರ ಮಾಡಿ ಬೆಳಕ ತಂದವು. ಜನರ ಖುಷಿ, ಸಂಭ್ರಮದಿಂದ ಹಣತೆಗಳನ್ನು ಬರಮಾಡಿಕೊಂಡರು, ಸಂಭ್ರಮಿಸಿದರು. ಆ ಹಣೆತೆಯ ಶಕ್ತಿಯಿಂದ ಖುಷಿಖುಷಿಯಾಗಿ ಜೀವನ ನಡೆಸಿದರು, ಹೀಗೆ ಕಥೆ ಮುಗಿಸಿ ಸಖೀ ಯನ್ನು ಕಂಡಾಗ, ಸಖೀ ಚಪ್ಪಾಳೆ ತಟ್ಟುತ್ತಾ ನಗುತಾ ಖುಷಿ ಪಟ್ಟ ಕಣ್ಣುಗಲ್ಲಿ, ಅವಳ ಮುಗ್ದತೆಯಲ್ಲಿ ಆ ದಿನ ನಾನು ಕಂಡಿದ್ದು ಅದೇ ಹಣತೆಯ ರೂಪ. ಪರಿಶುದ್ಧವಾದ ನಗುವಿನ ಶಕ್ತಿಯದು ಎನಿಸಿತು. ಪುಟಾಣಿ ಸಖೀ ನಗುತ್ತಾ ಮನೆಯ ಮಾಳಿಗೆ ಮೇಲಿದ್ದ ಹಣತೆಗಳನ್ನು ತೆಗೆದು ದೀಪಾವಳಿ ಸಂಭ್ರಮಿಸಲು ಸಿದ್ಧವಾಗಿ ಕುಳಿತಳು.
-ಅಭಿನಯ ಎ. ಶೆಟ್ಟಿ, ಉಪ್ಪುಂದ