ಮುಂಬೈ: 90ರ ದಶಕದ ಬಾಲಿವುಡ್ ಚೆಲುವೆ, ನಟಿ ಮಾಧುರಿ ದೀಕ್ಷಿತ್ ಜನಪ್ರಿಯವಾಗಿದ್ದು, ವಿವಾಹದ ನಂತರ ನಟನೆಯಿಂದ ದೂರ ಉಳಿದಿದ್ದರು. ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ಬಿಜೆಪಿಗರು ಯಡಿಯೂರಪ್ಪನವರನ್ನೇ ಬಿಟ್ಟಿಲ್ಲ, ಇನ್ನು ಅವರ ಮಗನನ್ನು ಬಿಡ್ತಾರಾ: ಮಂಕಾಳು ವೈದ್ಯ
ವರದಿಯ ಪ್ರಕಾರ, ದೇವದಾಸ್ ಸಿನಿಮಾದ ನಟಿ ಮಾಧುರಿ ವಾಯುವ್ಯ ಮುಂಬೈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮಾಧುರಿ ಭಾರತೀಯ ಜನತಾ ಮುಖಂಡರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದೆ.
ಮಾಧುರಿ ದೀಕ್ಷಿತ್ ಹಾಗೂ ಪತಿ ಶ್ರೀರಾಮ್ ನೇನೆಯೊಂದಿಗೆ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಭಾರತ v/s ನ್ಯೂಜಿಲ್ಯಾಂಡ್ ಸೆಮಿ ಫೈನಲ್ ಮ್ಯಾಚ್ ಅನ್ನು ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಆಶೀಶ್ ಶೆಲಾರ್ ಜತೆಗಿದ್ದು, ಈ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಟೀಮ್ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಅದಲ್ಲದೇ ಮಾಧುರಿ ದೀಕ್ಷಿತ್ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಜತೆಯೂ ಕಾಣಿಸಿಕೊಂಡಿದ್ದರು. ಆದರೆ ನಟಿ ಮಾಧುರಿ ದೀಕ್ಷಿತ್ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ.
1984ರಲ್ಲಿ ಬಿಡುಗಡೆಯಾದ ಅಬೋಧ್ ಸಿನಿಮಾದಲ್ಲಿ ನಟಿಸುವ ಮೂಲಕ ಮಾಧುರಿ ದೀಕ್ಷಿತ್ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಆದರೆ ಮಾಧುರಿಗೆ ಜನಪ್ರಿಯತೆ ತಂದು ಕೊಟ್ಟ ಸಿನಿಮಾ 1988ರಲ್ಲಿ ತೆರೆಕಂಡ ತೇಜಾಬ್ ಚಿತ್ರ. ಈ ಸಿನಿಮಾದ ಏಕ್ ದೋ ತೀನ್ ಹಾಡಿನ ಡ್ಯಾನ್ಸ್ ಮಾಧುರಿಯನ್ನು ಜನಪ್ರಿಯಳನ್ನಾಗಿ ಮಾಡಿತ್ತು. 1990ರ ದಶಕದಲ್ಲಿ ಮಾಧುರಿ ಬಾಲಿವುಡ್ ಬೇಡಿಕೆಯ ನಟಿಯಾಗಿದ್ದರು.
ವಿವಾಹದ ನಂತರ ಮಾಧುರಿ ನಟನೆಯಿಂದ ದೂರ ಉಳಿದಿದ್ದರು. ಆದರೆ ದೇಡ್ ಇಶ್ಕಿಯಾ ಮತ್ತು ಗುಲಾಬ್ ಗ್ಯಾಂಗ್ ಸಿನಿಮಾದ ಯಶಸ್ಸಿನ ನಂತರ ಮಾಧುರಿ ಮತ್ತೆ ನಟನೆಯತ್ತ ಹೊರಳಿದ್ದರು. ಅಷ್ಟೇ ಅಲ್ಲ ದ ಫೇಮ್ ಗೇಮ್ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ.