ಯಾವುದೇ ಚಿತ್ರವಿರಲಿ, ಅದು ಮೊದಲು ಸುದ್ದಿಯಾಗೋದೇ ಶೀರ್ಷಿಕೆಯಿಂದ. ಕನ್ನಡದಲ್ಲಿ ಈಗಂತೂ ತರಹೇವಾರಿ ಶೀರ್ಷಿಕೆ ಹೊತ್ತ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಈಗಾಗಲೇ “ರವಿ ಹಿಸ್ಟರಿ’ ಎಂಬ ಚಿತ್ರ ಬರುತ್ತಿರುವುದೂ ಗೊತ್ತು. ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಪ್ರಶ್ನೆಗಳು ಕಾಡುತ್ತವೆ. “ರವಿ ಹಿಸ್ಟರಿ’ ಅಂದರೆ, ರವಿಚಂದ್ರನ್ ಅವರ ಹಿಸ್ಟರಿನಾ ಅಥವಾ ಜಿಲ್ಲಾಧಿಕಾರಿಯಾಗಿದ್ದ ರವಿ ಅವರ ಹಿಸ್ಟರಿನಾ ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಆದರೆ, ಇದು ಅವರ್ಯಾರ ಹಿಸ್ಟರಿ ಅಲ್ಲ ಎಂಬ ಉತ್ತರ ನಿರ್ದೇಶಕ ಮಧುಚಂದ್ರ ಅವರದು. ಅಂದಹಾಗೆ, ಈ ಚಿತ್ರದ ಟ್ರೇಲರ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇದೊಂದು ಸಾಮಾನ್ಯ ಹುಡುಗನ ಹಿಸ್ಟರಿ ಕುರಿತಾದ ಚಿತ್ರ. ಆ ರವಿ ಯಾರು, ಏನೆಲ್ಲಾ ಮಾಡ್ತಾನೆ, ಅವನ ಹಿಸ್ಟರಿ ಇತ್ಯಾದಿ ಕುರಿತು ತಿಳಿಯಬೇಕೆಂದರೆ, ಚಿತ್ರ ಬಿಡುಗಡೆವರೆಗೂ ಕಾಯಬೇಕು ಎಂಬುದು ನಿರ್ದೇಶಕರ ಮಾತು.
ಚಿತ್ರದ ಕಥೆಗೆ ಶೀರ್ಷಿಕೆ ಪೂರಕವಾಗಿದೆ ಅಂದಮೇಲೆ, ಕಥೆಯೊಳಗಿನ ಪಾತ್ರ ಕೂಡ ಶೀರ್ಷಿಕೆಗೆ ಹತ್ತಿರವಾಗಿರುತ್ತದೆ. ಸಿನಿಮಾದ ಕಥೆ ಮತ್ತು ಆ ಪಾತ್ರ ನೋಡಿದವರಿಗೆ ಅದು ತನ್ನದೇ ಸುತ್ತ ನಡೆದ ಕಥೆ ಎನಿಸದೇ ಇರದು. ಅಷ್ಟೊಂದು ಆಪ್ತವೆನಿಸುತ್ತದೆ ಎನ್ನುವ ನಿರ್ದೇಶಕರು, ಈ ಬಾರಿ ಪಕ್ಕಾ ಮಾಸ್ ಅಂಶಗಳೊಂದಿಗೆ ಒಂದಷ್ಟು ಸಂದೇಶ ಇಟ್ಟುಕೊಂಡು ಹೊಸತನ್ನು ಹೇಳುವ ಉತ್ಸಾಹದಲ್ಲಿದ್ದಾರಂತೆ.
ಈ ಹಿಂದೆ “ಸೈಬರ್ ಯುಗದೊಳ್ ಮಧುರ ಪ್ರೇಮ ಕಾವ್ಯಂ’ ಹಾಗು “ವಾಸ್ಕೋಡಿಗಾಮ’ ಎಂಬ ಚಿತ್ರ ಮಾಡಿದ್ದರು. ಈಗ ರವಿ ಎಂಬ ಪಾತ್ರ ಇಟ್ಟುಕೊಂಡು ಹೊಸ ಹಿಸ್ಟರಿ ಸೃಷ್ಟಿಸಲು ಹೊರಟಿದ್ದಾರೆ. ಕಾರ್ತಿಕ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಅವರದೇ ನಿರ್ಮಾಣವಿದೆ. ಕಾರ್ತಿಕ್ ಈ ಚಿತ್ರದಲ್ಲಿ ಸುಮ್ಮನೆ ನಾಯಕರಾಗಿಲ್ಲ. ನಾಯಕನಾಗಲು ಏನೆಲ್ಲಾ ಅರ್ಹತೆ ಇರಬೇಕೋ ಅದೆಲ್ಲವನ್ನೂ ಕಲಿತು ಬಂದಿದ್ದಾರೆ.
ಇನ್ನು, ಪಾತ್ರಕ್ಕೂ ಬೇಕಾದಂತಹ ತಯಾರಿ ಪಡೆದುಕೊಮಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಅನುಪಮ್ ಖೇರ್ ಅಕಾಡೆಮಿ ಮತ್ತು ಅಭಿನಯ ತರಂಗದಲ್ಲಿ ನಟನೆ ತರಬೇತಿ ಪಡೆದಿದ್ದಾರೆ. ಚಿತ್ರದ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳಿದ್ದರಿಂದ ಕಾರ್ತಿಕ್, ಕಸರತ್ತು ನಡೆಸಿ, ದಪ್ಪವಾಗಿದ್ದಾರೆ, ಮತ್ತದೇ ಕಸರತ್ತು ಮಾಡಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಹದಿನೈದು ಕೆಜಿ ದಪ್ಪ, ಹದಿನೈದು ಕೆಜಿ ಕಡಿಮೆ ತೂಕ ಮಾಡಿಕೊಳ್ಳುವುದು ಸವಾಲಿನ ಕೆಲಸವಾದ್ದರಿಂದ ಕಾರ್ತಿಕ್ ಸಾಕಷ್ಟು ಬೆವರಿಳಿಸಿದ್ದಾರಂತೆ. ಇನ್ನು, ಕಾರ್ತಿಕ್ ಅವರಿಗೆ ಪಲ್ಲವಿ ರಾಜು ಮತ್ತು ಐಶ್ವರ್ಯ ರಾವ್ ಜೋಡಿಯಾಗಿದ್ದಾರೆ. ಇನ್ನು, ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬೆಂಗಳೂರು, ಸಜಾಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೈಮ್ ರಮೇಶ್, ಬಸ್‌ಕುಮಾರ್ ಸೇರಿದಂತೆ ರಂಗಭೂಮಿ ಪ್ರತಿಭೆಗಳಿವೆ.