Advertisement
ನೆಟ್ಲಮುಟ್ನೂರಿನಿಂದ ಕಬಕ ಮೂಲಕ ಮಾಡಾವಿಗೆ 110 ಕೆ.ವಿ. ವಿದ್ಯುತ್ ಸರಬರಾಜು ಮಾಡುವ ಮಾಡಾವು ಸಬ್‌ಸ್ಟೇಷನ್ ಕಾಮಗಾರಿ ಯೋಜನೆ ಪ್ರಾರಂಭಗೊಂಡು 9 ವರ್ಷ ಕಳೆದರೂ ಕಾಮಗಾರಿ ಇನ್ನೂ ಕೊನೆ ಹಂತಕ್ಕೆ ಬಂದಿಲ್ಲ. ಕೆಲವು ತಿಂಗಳ ಹಿಂದೆ ಮಾಡಾವು ಬೊಳಿಕಲದಲ್ಲಿ ಸುಮಾರು 4 ಎಕ್ರೆಯಲ್ಲಿ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್ ಲೈನ್ ಎಳೆಯುವ ಮೂಲಕ ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭವಾಗುತ್ತದೆ. ಮಾಡಾವಿನಿಂದ ಸುಳ್ಯಕ್ಕೆ-ಕಡಬ, ಆಲಂಕಾರಿಗೆ ವಿದ್ಯುತ್ ಸರಬರಾಜು ಮಾಡುವ ಬೃಹತ್ ಯೋಜನೆ ಇದಾಗಿದೆ. ಕಬಕದಿಂದ ಮಾಡಾವು ತನಕ ಒಟ್ಟು 27 ಕಿ.ಮೀ. ದೂರದಲ್ಲಿ ಲೈನ್ ಎಳೆಯಬೇಕಾಗುತ್ತದೆ. ಒಟ್ಟು 107 ವಿದ್ಯುತ್ ಲೈನ್ ಟವರ್‌ಗಳ ನಿರ್ಮಾಣ ನಡೆಯಲಿದೆ. ಈ ಪೈಕಿ 104 ಟವರ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು 14 ಕಿ.ಮೀ. ತಂತಿ ಎಳೆಯುವ ಕಾಮಗಾರಿಯೂ ಪೂರ್ಣಗೊಂಡಿದೆ. ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭವಾದಲ್ಲಿ ಸುಳ್ಯ, ಆಲಂಕಾರು , ಕುಂಬ್ರ ಮತ್ತು ಕಡಬ ಭಾಗದಲ್ಲಿ ವಿದ್ಯುತ್ ವಿತರಣೆಗೆ ಮುಕ್ತ ಅವಕಾಶ ದೊರೆಯುತ್ತದೆ. ಬಳಿಕ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಇದು ಸಹಕಾರಿಯಾಗಲಿದೆ.
Related Articles
9 ವರ್ಷಗಳಲ್ಲಿ ಕಾಮಗಾರಿ ಯಾಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಮುಖ್ಯ ಕಾರಣ ವಿದ್ಯುತ್ ಟವರ್ ಮತ್ತು ಲೈನ್ ಹಾದು ಹೋಗುವಲ್ಲಿ ಪಟ್ಟಾ ಭೂಮಿ, ಸಾಮಾಜಿಕ ಅರಣ್ಯ ಮತ್ತು ಅರಣ್ಯ ಪ್ರದೇಶಗಳು ಒಳಪಡುತ್ತದೆ. ಈಗಾಗಲೇ ಕಬಕದಿಂದ 14 ಕಿ.ಮೀ. ಲೈನ್ ಎಳೆಯಲಾಗಿದೆ. ಈ ದಾರಿಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರವನ್ನೂ ನೀಡಲಾಗಿದೆ. 110 ಕೆ.ವಿ. ಲೈನ್ ಆಗಿರುವ ಕಾರಣ ಬೃಹತ್ ಆಕಾರದ ಟವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಂದೊಂದು ಟವರ್ ಗೆ 7ರಿಂದ 10 ಸೆಂಟ್ಸ್ ಭೂಮಿ ಬಳಕೆಯಾಗುತ್ತದೆ. ಲೈನ್ ಅಡಿಯಲ್ಲಿ ಎರಡೂ ಬದಿಯಲ್ಲಿ 11 ಮೀಟರ್ ಭೂಮಿಯಲ್ಲಿ ಮನೆ ಕಟ್ಟುವಂತಿಲ್ಲ. ಎತ್ತರಕ್ಕೆ ಬೆಳೆಯುವ ಯಾವುದೇ ಕೃಷಿಯನ್ನು ಬೆಳೆಸುವಂತಿಲ್ಲ. ಸಾಮಾಜಿಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹಾದು ಹೋಗುವ ಭೂಮಿಯಲ್ಲೂ ಆ ಇಲಾಖೆಗೆ ಪರಿಹಾರವನ್ನು ಕೆಪಿಟಿಸಿಎಲ್ ನೀಡಿದೆ.
Advertisement
ಸರ್ವೇ ನಡೆಸಲು ಬಿಡುತ್ತಿಲ್ಲಮಾಡಾವಿನಿಂದ ಆಲಂಕಾರಿಗೆ ಲೈನ್ ಎಳೆಯುವ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಕಳೆದ ಕೆಲವು ತಿಂಗಳ ಹಿಂದೆ ಸರ್ವೇ ನಡೆಸಲು ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಕೆಲವು ಗ್ರಾಮಸ್ಥರು ಸರ್ವೇ ನಡೆಸಲು ಬಿಟ್ಟಿಲ್ಲ. ಲೈನ್ ಮತ್ತು ಟವರ್ ನಿರ್ಮಾಣ ಕಾಮಗಾರಿಯಿಂದ ನಾವು ಮನೆ ಮತ್ತು ಕೃಷಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಕಾರಣ ಮುಂದಿಟ್ಟು ಕಾಮಗಾರಿಗೆ ವಿರೋಧವನ್ನು ಮಾಡುತ್ತಿದ್ದಾರೆ. ಕುದ್ಮಾರು- ಬೆಳಂದೂರು ಭಾಗದಲ್ಲಿ ಅತೀ ಹೆಚ್ಚು ವಿರೋಧವನ್ನು ಕೆಪಿಟಿಸಿಎಲ್ ಎದುರಿಸಬೇಕಾಗಿ ಬಂದಿದೆ. ಇದರಿಂದ ಅಧಿಕಾರಿಗಳೂ ಹಿಂಜರಿದಿದ್ದಾರೆ. ಕಾರ್ಯಾರಂಭವಾಗಲಿ
ಈಗ ಸವಣೂರು ಉಪ ವಿದ್ಯುತ್ ಕೇಂದ್ರದ ಮೂಲಕ ಆಲಂಕಾರು, ಕಡಬ ಮೊದಲಾದೆಡೆ ವಿದ್ಯುತ್ ಸರಬರಾಜಾಗುತ್ತಿದ್ದು, ಮಾಡಾವು ಸಬ್ ಸ್ಟೇಶನ್ ಪೂರ್ಣವಾಗಿ ಕಾರ್ಯಾರಂಭ ಮಾಡಿದರೆ ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ಸಮಸ್ಯೆಯೂ ನಿವಾರಣೆಯಾಗಲಿದೆ ಎನ್ನುವುದು ಎಲ್ಲರ ಆಶಯವಾಗಿದೆ. ಅರಣ್ಯ ಇಲಾಖೆಗೆ 20 ಎಕ್ರೆ ಭೂಮಿ
ಯೋಜನೆಯ ಮುಂದುವರಿದ ಭಾಗವಾಗಿ ಮಾಡಾವಿನಿಂದ ಸುಳ್ಯಕ್ಕೆ ಮತ್ತು ಆಲಂಕಾರಿಗೆ ವಿದ್ಯುತ್ ಲೈನ್ ಹಾದು ಹೋಗಬೇಕಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಸುಳ್ಯ ಲೈನ್ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ವಲಯಕ್ಕೆ ಸೇರಿದ ಭೂಮಿ ಇರುವ ಕಾರಣ ಇಲಾಖೆಯ ತಕರಾರು ಇದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ರಾಜಿ ಮಾತುಕತೆ ನಡೆಸಿ ಚಿತ್ರದುರ್ಗದಲ್ಲಿ 20 ಎಕ್ರೆ ಭೂಮಿಯನ್ನು ಸಾಮಾಜಿಕ ಅರಣ್ಯ ಇಲಾಖೆಗೆ ನೀಡಲಾಗಿದ್ದು, ಅದಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯನ್ನು ಸೂಚಿಸಿದೆ ಎಂದು ಕೆಪಿಟಿಸಿಎಲ್ ಚೀಫ್ ಎಕ್ಸ್ ಕ್ಯೂಟಿವ್ ಎಂಜಿನಿಯರ್ ಪಿ.ಡಿ.ಬಿ. ರಾವ್
ತಿಳಿಸಿದ್ದಾರೆ. ಏನು ಪ್ರಯೋಜನ?
ಈ ಯೋಜನೆ ಯಶಸ್ವಿಯಾದಲ್ಲಿ ಮಾಡಾವು, ಸುಳ್ಯ, ಆಲಂಕಾರು, ಕಡಬ ಮತ್ತು ಕುಂಬ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ವಿದ್ಯುತ್ ವಿತರಣೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದ್ದು, ಅದಕ್ಕೆ ಪರಿಹಾರ ಕಾಣಲಿದೆ. ದಿನದ 24 ಗಂಟೆಯೂ ವಿದ್ಯುತ್ ನೀಡುವಲ್ಲಿ ಸಹಕಾರಿಯಾಗಲಿದೆ. ಪ್ರವೀಣ್ ಚೆನ್ನಾವರ