Advertisement
ಮಡಂತ್ಯಾರು: ಮಡಂತ್ಯಾರು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆಯಾದರೂ ಇಲ್ಲಿ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿ ಮಾತ್ರ ಹಿಂದುಳಿದಿದೆ. ಇದಕ್ಕೆ ಪ್ರಸ್ತುತ ಮಡಂತ್ಯಾರು – ಕೊಮಿನಡ್ಕ ರಸ್ತೆಯನ್ನು ಉದಾಹರಿಸಬಹುದು. ಈ ರಸ್ತೆ ಹದಗೆಟ್ಟು ಹಲವು ವರ್ಷಗಳಾದವು. ಜನರು ಜನಪ್ರತಿನಿಧಿಗಳ ಭರವಸೆಯ ಮಾತಿಗೆ ಬೆಲೆಕೊಟ್ಟು ಇಂದಿಗೂ ಸುಮ್ಮನೆ ಕೂತಿದ್ದಾರೆ. ಈ ಬಾರಿಯ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ತುಂಬೆಲ್ಲಾ ಬರೀ ಹೊಂಡಗಳೇ ಕಾಣುತ್ತಿವೆ. ಹಲವು ವರ್ಷಗಳಿಂದ ಭರವಸೆಯ ಮಾತುಗಳು ಕೇಳಿಬರುತ್ತಿವೆ. ಕಳೆದ ಬೇಸಗೆಯಲ್ಲಿ ದುರಸ್ತಿ ಮಾಡಲಾಗುವುದು ಎನ್ನುವ ಭರವಸೆ ಹಾಗೆಯೇ ಉಳಿದು ಹೋಯಿತು. ಮತ್ತೆ ಮಳೆಗಾಲ ಬಂತು. ಮಳೆಯ ನೆಪದಿಂದ ಕೆಲಸ ನಡೆದಿಲ್ಲ. ಈಗ ಮತ್ತೂಂದು ವರ್ಷ ಕಳೆಯುವುದು ನಿಶ್ಚಿತ ಎಂಬುದು ಸ್ಥಳೀಯರ ಅಸಮಾಧಾನ.
ಮಡಂತ್ಯಾರು – ಕೊಮಿನಡ್ಕ – ಪಾಂಡವರ ಕಲ್ಲು ರಸ್ತೆ ಜಿ.ಪಂ. ರಸ್ತೆಯಾಗಿದ್ದು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೇರಿ ಪಿಡಬ್ಲ್ಯುಡಿಗೆ ಸೇರ್ಪಡೆಯಾಗಲಿದೆ ಎಂಬ ಮಾಹಿತಿ ಇದೆ. ಆದರೆ ಇದುವರೆಗೆ ಈ ಪ್ರಸ್ತಾವನೆ ಅನುಮೋದನೆಗೊಂಡಿಲ್ಲ. ಇದರ ದುರಸ್ತಿಗೆ ಅನುದಾನದ ಕೊರತೆ ಇದೆ ಎಂದು ಜಿ.ಪಂ. ಕೈಚೆಲ್ಲಿದೆ. ಸದ್ಯ ತೇಪೆ ಹಾಕುವ ಕೆಲಸವನ್ನಾದರೂ ಮಾಡಿ, ಮುಂದೆ ಪೂರ್ಣ ಕಾಮಗಾರಿ ಮಾಡಿ ಎಂದು ಕೇಳುವ ಸ್ಥಿತಿ ಜನತೆಯದ್ದು. ಬೆಳ್ತಂಗಡಿ ಭಾಗ ಬಾಕಿ
ಈ ರಸ್ತೆ ಎರಡು ತಾಲೂಕುಗಳ ವ್ಯಾಪ್ತಿಯಲ್ಲಿದೆ. ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ರಸ್ತೆಯ ಡಾಮರು ಕಾಮಗಾರಿ ಆಗಿದೆ. ಆದರೆ ಬೆಳ್ತಂಗಡಿ ತಾಲೂಕಿನ ಭಾಗ ಮಾತ್ರ ಬಾಕಿಯಾಗಿದೆ. ಇದಕ್ಕೂ ತಾಲೂಕಿನ ಗಡಿ ಗೊಂದಲವಾಯಿತೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
Related Articles
ಮಡಂತ್ಯಾರು, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆ ಮೊದಲಾದೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಈ ರಸ್ತೆಯನ್ನು ಬಳಸುತ್ತಾರೆ. ಕೆಸರಿನಿಂದ ಕೂಡಿದ ರಸ್ತೆ ನಡೆದುಕೊಂಡು ಹೋಗುವವರಿಗೂ ಅಯೋಗ್ಯವಾಗಿದೆ. ಪಾರೆಂಕಿ, ನಡುಬೊಟ್ಟು, ಮಡವು ಮೊದಲಾದ ಪುಣ್ಯ ಕ್ಷೇತ್ರಗಳಿಗೂ ಇದು ಸಂಪರ್ಕ ರಸ್ತೆಯಾಗಿದೆ. ಶೀಘ್ರ ದುರಸ್ತಿ, ಅಭಿವೃದ್ಧಿ ಅತ್ಯಗತ್ಯವಾಗಿದೆ. ಮುಂದಿನ ಮಳೆಗಾಲದವರೆಗೆ ಮೀನ ಮೇಷ ಎಣಿಸದೆ ಸರಕಾರ, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಈ ರಸ್ತೆ ಬಳಕೆದಾರರು ಒತ್ತಾಯಿಸಿದ್ದಾರೆ.
Advertisement
ಶಾಸಕ ಬಂಗೇರ ಭರವಸೆ ಮಡಂತ್ಯಾರು – ಪಾಂಡವರಕಲ್ಲು ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದು ಪಿಡಬ್ಲ್ಯುಡಿ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆಗೊಂಡ ತತ್‌ಕ್ಷಣ ಕಾಮಗಾರಿ ನಡೆಸಲಾಗುವುದು. ಮಳೆಗಾಲವಾದ ಕಾರಣ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ.
– ಕೆ. ವಸಂತ ಬಂಗೇರ, ಶಾಸಕರು, ಬೆಳ್ತಂಗಡಿ — ಪ್ರಮೋದ್ ಬಳ್ಳಮಂಜ