Advertisement

ಮದಂಗಲ್ಲು ಆನಂದ ಭಟ್‌ಗೆ ಯಕ್ಷ ಬಳಗದ ಸಮ್ಮಾನ 

06:00 AM Aug 17, 2018 | |

ಮದಂಗಲ್ಲು ಆನಂದ ಭಟ್‌ ಅವರು ಕಾಯದಲ್ಲಿ ವಾಮನ ಮೂರ್ತಿ. ಸಾಧಿಸಿದ್ದು ತ್ರಿವಿಕ್ರಮ ಕಲಾಸಾಧನೆ. ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದ ಮದಂಗಲ್ಲು ಮನೆಯಲ್ಲಿ ಜನಿಸಿ ನಾಲ್ಕು ದಶಕಗಳಿಂದ ಪುಣೆಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ಗುರುವಾಗಿ ಮಾರ್ಗದರ್ಶಕನಾಗಿ, ನಟನಾಗಿ, ಸಂಘಟಕನಾಗಿ, ಪ್ರಸಾದನ ಕಲಾವಿದನಾಗಿ, ತನ್ನದೇ ವೇಷಭ‌ೂಷಣಗಳೊಂದಿಗೆ ನೇಪಥ್ಯದಲ್ಲೂ ದುಡಿಯುವ ಬಹುಮುಖ ಪ್ರತಿಭೆಯ ಅಪ್ಪಟ ಕಲಾವಿದ. 

Advertisement

ಯಕ್ಷಗಾನ ಪರಂಪರೆಯ ಮನೆತನದಲ್ಲಿ ಜನಿಸಿದ ಆನಂದ ಭಟ್‌ ಬಾಲ್ಯದಿಂದಲೇ ಯಕ್ಷಗಾನದೆಡೆಗೆ ಆಕರ್ಷಿತರಾದವರು. ಒಂದು ವರ್ಷ ಸಂಘ ಸಂಸ್ಥೆಯ ಆಟಗಳಲ್ಲಿ ಹಾಗೂ ಎರಡು ವರ್ಷ ಕುಂಬಳೆ ಶೇಷಪ್ಪರ ಸಂಚಾಲಕತ್ವದ ಉಪ್ಪಳ ಭಗವತಿ ಮೇಳದಲ್ಲಿ ತಿರುಗಾಟ ನಡೆಸಿದರು. ಸ್ವತಃ ಮುಖವರ್ಣಿಕೆ ಬರೆದು ಅನಿವಾರ್ಯಕ್ಕೆ ಹಾಗೂ ಅವಕಾಶಕ್ಕೆ ತಕ್ಕಂತೆ ಬಹುವಿಧ ವೇಷಗಾರಿಕೆ ನಡೆಸಿದವರು, ಅವರ ಭಸ್ಮಾಸುರ, ಅಯ್ಯಪ್ಪ, ಅರ್ಜುನ, ಶೂರ್ಪನಖೀ ಪಾತ್ರಗಳು ಹೆಸರು ಗಳಿಸಿದ್ದವು. ಉದ್ಯೋಗಾರ್ತಿಯಾಗಿ ಪುಣೆಗೆ ತೆರಳಿ ಅಲ್ಲಿ ಬಿಡುವಿನಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಯಕ್ಷಗಾನ ಸಂಘವನ್ನು ಕಟ್ಟಿಕೊಂಡು ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಕಲಾ ಸೇವೆಯನ್ನು ಕೈಗೊಂಡರು. ತನ್ನದೇ ವೇಷಭೂಷಣ ಪ್ರಸಾದನ ಸಂಸ್ಥೆಯನ್ನು ಹುಟ್ಟುಹಾಕಿದರು. ಸ್ತ್ರೀವೇಷವನ್ನು ಹೊರತುಪಡಿಸಿ ಎಲ್ಲಾ ಪ್ರಕಾರದ ವೇಶಗಳಲ್ಲೂ ಮೆರೆದಿರುವ ಇವರಿಗೆ ಭಸ್ಮಾಸುರ, ಕೇತಕಿವರ್ಮ, ಹನುಮಂತ, ಶೂರ್ಪನಖೀ, ರಾವಣ, ಈಶ್ವರ, ಶಕಟಾಸುರ, ದೇವೇಂದ್ರ, ಇತ್ಯಾದಿ ಖ್ಯಾತಿ ತಂದ ವೇಷಗಳು.

ಯಕ್ಷಬಳಗ ಹೊಸಂಗಡಿ ಕಲಾ ಸಂಘಟನೆಯು ತನ್ನ 27ನೇ ವರ್ಷದ ಆಷಾಢ ಮಾಸದ ಸಾಪ್ತಾಹಿಕ ತಾಳಮದ್ದಳೆ ಕೂಟದ ಸಮಾರೋಪ ಸಮಾರಂಭದಲ್ಲಿ ವಾರ್ಷಿಕ ಸಮ್ಮಾನ ಸರಣಿಗೆ ಇವರನ್ನು ಆರಿಸಿದೆ. ಆಗಸ್ಟ್‌ 19ರಂದು ತಾಳಮದ್ದಳೆ “ಅಂಗದ ಸಂಧಾನ’ದ ಜತೆಗೆ ಸಮ್ಮಾನ ಜರಗಲಿದೆ.  

ಯೋಗೀಶ ರಾವ್‌ ಚಿಗುರುಪಾದೆ 

Advertisement

Udayavani is now on Telegram. Click here to join our channel and stay updated with the latest news.

Next