ಹೊಸದಿಲ್ಲಿ: ಮುಂಬರುವ ಏಷ್ಯಾ ಕಪ್ ಕೂಟಕ್ಕಾಗಿ ಸೋಮವಾರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಏಷ್ಯಾ ಕಪ್ 2023 ಗಾಗಿ 17 ಸದಸ್ಯರ ತಂಡ ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ತಂಡಕ್ಕೆ ಮರಳಲಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಅವರು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್ ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತೀಯ ತಂಡದಿಂದ ಯುಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಹೆಚ್ಚು ಕಡಿಮೆ, ನಾವೆಲ್ಲರೂ ನಿರೀಕ್ಷಿಸುತ್ತಿದ್ದ ತಂಡವೇ ಪ್ರಕಟವಾಗಿದೆ. ಆದರೆ ಆತಂಕಕಾರಿ ಅಂಶವೆಂದರೆ ಫಿಟ್ನೆಸ್ ವಿಚಾರ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇತ್ತೀಚೆಗೆ ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಏಷ್ಯಾ ಕಪ್ ಅಥವಾ ವಿಶ್ವಕಪ್ ನಂತಹ ದೊಡ್ಡ ಪಂದ್ಯದಲ್ಲಿ ಆಡುವುದು ಸಂಪೂರ್ಣವಾಗಿ ವಿಭಿನ್ನ. ನಿಮ್ಮ ಫಿಟ್‌ನೆಸ್ ಮಟ್ಟವು 100% ಕ್ಕಿಂತ ಹೆಚ್ಚಿರಬೇಕು. ಅವರು ಫಿಟ್ ಆಗಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಎಎನ್ಐ ಗೆ ತಿಳಿಸಿದರು.
“ಯುಜುವೇಂದ್ರ ಚಾಹಲ್ ಬಗ್ಗೆ ನನಗೆ ಸ್ವಲ್ಪ ಆಶ್ಚರ್ಯವಾಯಿತು, ಅಶ್ವಿನ್ ಕೂಡ ತಂಡದಲ್ಲಿಲ್ಲ” ಎಂದು ಅವರು ಹೇಳಿದರು.
ಏಷ್ಯಾ ಕಪ್ ತಂಡದ ಘೋಷಣೆಯ ಸಂದರ್ಭದಲ್ಲಿ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆಎಲ್ ರಾಹುಲ್ ಅವರು ನಿಗಲ್ ನಿಂದ ಬಳಲುತ್ತಿದ್ದಾರೆ. ಆದರೆ ಏಷ್ಯಾ ಕಪ್ ನ ಎರಡನೇ ಅಥವಾ ಮೂರನೇ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
2023 ರ ಏಷ್ಯಾ ಕಪ್ ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಸಹ-ಆತಿಥ್ಯ ವಹಿಸಲಿದ್ದು, ಪಂದ್ಯಾವಳಿಯು ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ.
ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉ.ನಾ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಬ್ಯಾಕ್ ಅಪ್)