ಚುನಾವಣೆಗೆ ಸಜ್ಜುಗೊಂಡಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಕಸರತ್ತು ಮುಂದುವರಿದಿದ್ದು, ದಲಿತ ಮತಗಳನ್ನು ಸೆಳೆಯಲು ಹರಸಾಹಸ ಶುರುವಾಗಿದೆ. ಅತೀಹೆಚ್ಚು ದಲಿತರಿರುವ ಬುಲೇಂದರ್‌ಖಂಡ್ ಪ್ರದೇಶದ ಸಾಗರ್ ಜಿಲ್ಲೆಯಲ್ಲಿನ ಬೆಳವಣಿಗೆಗಳು ಈ ವಾದಕ್ಕೆ ಹಿಡಿದ ಕೈಗನ್ನಡಿ. 13ನೆ ಶತಮಾನದ ಸಂತ, ಅಪಾರ ದಲಿತ ಅನುಯಾಯಿ ಗಳನ್ನು ಹೊಂದಿರುವ ರವಿದಾಸರ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಬಿಜೆಪಿ ಒತ್ತು ನೀಡಿದೆ.
ಕಾಂಗ್ರೆಸ್ ಕೂಡ ತಾನು ಅಧಿಕಾರಕ್ಕೆ ಬಂದರೆ ರವಿದಾಸರ ಸ್ಮರಣಾರ್ಥ ಆಸ್ಪತ್ರೆ ಅಭಿವೃದ್ಧಿ ಪಡಿಸುವ ತನ್ನ ಘೋಷಣೆಯನ್ನು ಪುನರುಚ್ಚರಿಸುತ್ತಿದೆ. ಇಷ್ಟಕ್ಕೂ ರಾಜಕೀಯ ಪಕ್ಷಗಳು ದಲಿತ ಮತಗಳ ಹಿಂದೆ ಬಿದ್ದಿರುವುದಕ್ಕೆ ಕಾರಣವೇನೆಂದು ನೋಡುವುದಾದರೆ- ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆನ್ನುವ ನಿರ್ಣಯವಿರುವುದೇ ದಲಿತರ ಕೈಯಲ್ಲಿ.
ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಸ್ಥಾನಗಳಲ್ಲಿ 82 ಮೀಸಲು ಕ್ಷೇತ್ರಗಳಿವೆ ಈ ಪೈಕಿ 47 ಪರಿಶಿಷ್ಟ ಪಂಗಡಕ್ಕೆ ಹಾಗೂ 35 ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 36ರಷ್ಟು ಎಸ್‌ಸಿ, ಎಸ್‌ಟಿ ಸಮುದಾಯವಿದ್ದು ಈ ಮತಗಳು ಧ್ರುವೀಕರಣವಾಗದಂತೆ ನೋಡಿಕೊಳ್ಳುವುದೇ ಸದ್ಯಕ್ಕೆ ರಾಜಕೀಯ ಪಕ್ಷಗಳ ಮುಂದಿರುವ ಸವಾಲು. 2003,2008,2013ರಲ್ಲಿ ಬಿಜೆಪಿಗೆ ಒಲಿದಿದ್ದ ದಲಿತ ಮತಗಳು 2018ರಲ್ಲಿ ಕಾಂಗ್ರೆಸ್‌ನತ್ತಲೂ ವಾಲಿವೆ. ರಾಜ್ಯದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಆದಿವಾಸಿ ಪ್ರಾಬಲ್ಯವಿದ್ದರೆ, ಬುಲೇಂದರ್ ಖಂಡ್, ವಿಂಧ್ಯಾ, ಗ್ವಾಲಿಯರ್‌ಗಳಲ್ಲಿ ದಲಿತರ ಪ್ರಾಬಲ್ಯವಿದೆ.