Advertisement
ನಾನು, “ದುರಭ್ಯಾಸ’ ಎಂದು ಗೊಣಗಿಕೊಂಡೆ, ನಾನು, “ತಾವು ಪ್ರಖ್ಯಾತ ನಾಟಕಕಾರ ಕಲ್ಮನೆ’, ಎನ್ನುತ್ತಿದ್ದಂತೆಯೇ, “ಹೌದೌದು… ನಾನೇ ಕಲ್ಮನೆ ಜಟಾಜೂಟರಾವ್’ ಎಂದು ಪೂರ್ತಿಗೊಳಿಸಿದರು. ಮಾತಿನ ಕಣಕಣದಲ್ಲೂ ಗತ್ತು ತುಂಬಿ ತುಳುಕುತ್ತಿತ್ತು. “ಅದು ಕಳ್ಮನೆ ಎಂದಿರಬೇಕಾಗಿತ್ತು’ ಎಂದು ಗೊಣಗಿದೆ. “ಏನೆಂದಿರಿ?’ ಎಂದ ಆತ, “ಏನೂ ಇಲ್ಲ, ಏನೂ ಇಲ್ಲ… ಹಾಗೆ ಸುಮ್ಮನೆ ಗೊಣಗುಡುವುದು ನನ್ನ ದುರಭ್ಯಾಸ’
. ನೀವು ಬರೆದ ನಾಟಕದ ಕತೆ, ಸಿನೆಮಾ ಮಾಡಿದಿರಲ್ಲ. ನಿಮಗೂ ಅವಾರ್ಡ್ ಬಂದಿದೆಯಲ್ಲ. ಆದರೆ ಇದೇಕೆ ರೈಲಿನಲ್ಲಿ ಹೀಗೆ…! ಕಾರಿನಲ್ಲಿ ಹೋಗಲಿಲ್ಲವೇ?’ ಎಂದೆ, ಎಲ್ಲ ಗೊತ್ತಿದ್ದರೂ… ಗೊತ್ತಿಲ್ಲದವನಂತೆ! “ಇಲ್ಲ ಬೆಳಿಗ್ಗೆಯೇ ಕಾರಿನಲ್ಲಿ ನಿರ್ದೇಶಕರು, ನಿರ್ಮಾಪಕರೆಲ್ಲ ಹೋದರು, ನನಗೆ ಬೇರೆ ಕೆಲಸವಿತ್ತು. ಅದೂ ಅಲ್ಲದೆ ನನಗೆ ರೈಲು ಪ್ರಯಾಣ ಓದುವ ಕಾಲದಿಂದಲೂ ಅಭ್ಯಾಸವಾಗಿ ಬಿಟ್ಟಿದೆ, ಅದೂ ಈ ಊರಿನ ದಾರಿ ನನಗೆ ಪ್ರಿಯವಾದ ದಾರಿ…’ ಎಂದು ನಗೆ ಬೀರಿದರು.
ನಾನು ಮೆಲ್ಲಗೆ ಪೀಠಿಕೆ ಹಾಕಿದೆ. ಕೆಣಕುವ ದನಿಯಲ್ಲಿ, “ಈ ನಾಟಕದ ಕತೆಯನ್ನು ನಾನೆಲ್ಲೋ ಈ ಹಿಂದೆ ಓದಿರುವೆನಲ್ಲ’. “ಆಂ ಏನೆಂದಿರಿ? ಅದು ಹೇಗೆ ಸಾಧ್ಯ? ಅದು ಹೇಗೆ ಸಾಧ್ಯ?’ ಎಂದು ಜೋರಾಗಿ ಕೂಗಿದರು. “ಅದಕ್ಕೇಕೆ ಹಾಗೆ ಅರಚುತ್ತೀರಿ ಬಿಡಿ, ಅದೇ ರೀತಿಯ ಕತೆ ಓದಿದ್ದೇನೆ. ಅದಕ್ಕೆ ಹೇಳಿದೆ’ ಎಂದು ನಕ್ಕೆ. ಮತ್ತೆ ಕೋಪಗೊಂಡ ಅವರು, “ಇದು ನನ್ನ ಸ್ವಂತ ರಚನೆ. ಸ್ವಂತ ರಚನೆ’ ಎಂದು ಪುನರಾವರ್ತಿಸಿದರು. “ನಿಜ ನಿಜ, ಬಿಡಿ’ ಎಂದೆ ವ್ಯಂಗ್ಯವಾಗಿ, ಆಗ ಅವನು ಸಮಾಧಾನವಾದಂತೆ ಕಂಡಿತು. ಮತ್ತೆ ಸ್ವಲ್ಪಹೊತ್ತಿಗೆ ಅಸ್ವಸ್ಥರಾದಂತೆ ಕಂಡಿತು. “ತಲೆ ನೋವು, ಕಾಫಿ ಕುಡಿಯಬೇಕೆನ್ನಿಸುತ್ತಿದೆ’ ಎಂದರು. ನಾನು ತಂದು ಕೊಡುತ್ತೇನೆ ಎಂದು ಎದುರಿಗೇ ಕಾಣುತ್ತಿದ್ದ ಅಂಗಡಿಯಿಂದ ಬಿಸಿ ಬಿಸಿ ಕಾಫಿ ತಂದುಕೊಟ್ಟೆ. ಸಮಾಧಾನವಾದಂತೆ ಕಂಡರು. ಎಷ್ಟೋ ಹೊತ್ತಿನ ನಂತರ “ಥ್ಯಾಂಕ್ಸ್’ ಎಂದರು. “ಕಾಫಿ ಎಲ್ಲ ಜೀರ್ಣವಾಗಿ ಹೋಯಿತಲ್ಲ. ಇನ್ನೇಕೆ ಬಿಡಿ, ಥ್ಯಾಂಕ್ಸ್’ ಎಂದು ನಕ್ಕೆ. ಅದು ದೊಡ್ಡ ಜೋಕು ಎಂಬಂತೆ ಅವರು good joke indeed ಎಂದು ಜೋರಾಗಿ ಗಹಗಹಿಸಿ ನಕ್ಕರು. ಮಾತುಗಳು ಆ ಈ ವಿಷಯಗಳನೆಲ್ಲ ಸುತ್ತಿ ಬಳಸಿ ಪುನಃ ಅವನ ನಾಟಕದ ವಿಷಯಕ್ಕೇ ಹಿಂತಿರುಗಿತು, “ನನ್ನ ನಾಟಕದ ಕೊನೆಯಲ್ಲಿ ಎಂಥ ಥ್ರಿಲ್ ಇದೆ ಗೊತ್ತಾ? ಸಿನೆಮಾ ನೋಡುವಾಗ ಭಯವಾಗಲಿಲ್ಲವೇ ನಿಮಗೆ?’ ಎಂದರು,”ಇಲ್ಲಿ ಅದಕ್ಕಿಂತ ದೊಡ್ಡ ಥ್ರಿಲ್ ಕಾದಿದೆ’ ಎಂದು ಗೊಣಗಿದೆ.
Related Articles
Advertisement
ಮಧ್ಯೆ ಅದಾವುದೋ ಸ್ಟೇಷನ್ನಿನಲ್ಲಿ ಒಬ್ಬ ಸುಂದರ ಯುವತಿ ಹತ್ತಿಕೊಂಡಳು. ಸ್ವಲ್ಪ ಹೊತ್ತು ನನ್ನನ್ನೇ ದುರು ದುರು ನೋಡಿ, “ನೀವು ಮನುಷ್ಯರಂತೆ ಕಾಣುವುದಿಲ್ಲ’ ಎಂದಳು. “ಏನು ನೀವು ಹೇಳುವುದು?’ ಎಂದು ಕೂಗಿದೆ. ಕಣ್ಣು-ಮೂಗು- ಬಾಯಿಗಳಾವುವೂ ಅವು ಇರಬೇಕಾದ ಕಡೆ ಇಲ್ಲ, “ಹೂnಂ’ ಎಂದು ಸಿಟ್ಟಿನಿಂದ ಪಕ್ಕದ ಬೋಗಿಗೆ ಹೋಗಿಬಿಟ್ಟಳು. ವಿಲಕ್ಷಣವಾದ ನಗೆಯೊಂದು ನನ್ನ ತುಟಿಗಳ ಮೇಲೆ ಹಾದು ಹೋಯಿತು. “ಅವಳಿಗೆ ಹುಚ್ಚೇ?’ ಎಂದರು. ನಾನು, “ಅವಳಿಗೇನೋ ವಿಶೇಷ ಶಕ್ತಿಯಿರಬಹುದು’ ಎಂದೆ. ಅವರು ಜೋರಾಗಿ ನಕ್ಕು, “ಅವಳ ದಡ್ಡತನವನ್ನು ವಿಶೇಷ ಶಕ್ತಿ’ ಎನ್ನುತ್ತೀರಿ ಎಂದರು. “ನಿಮ್ಮ ದೃಷ್ಟಿಯಲ್ಲಿ ಅದು ದಡ್ಡತನ, ಆದರೆ ನನ್ನ ದೃಷ್ಟಿಯಿಂದ ಅದು ವಿಶೇಷ ಶಕ್ತಿ!’ ಎಂದೆ, “ಏನೋ ನಿಮ್ಮ ಮಾತೇ ಅರ್ಥವಾಗದು’ ಎಂದರು. “ಅರ್ಥವಾಗುತ್ತದೆ, ಅರ್ಥವಾಗುತ್ತದೆ ತಡೆ’ ಎಂದು ಗೊಣಗಿದೆ. “ಏನೆಂದಿರಿ?’ ಎಂದರು. “ಏನಿಲ್ಲ ಅದೇ ದುರಭ್ಯಾಸ. ಹಾಗೇ ಸುಮ್ಮನೆ ರಿಪೀಟೆಡ್…’ ಎಂದೆ.
“ವಿಚಿತ್ರವಪ್ಪ ನೀವು, ಆದರೂ ಒಳ್ಳೆಯವರಂತೆ ಕಾಣುತ್ತೀರಿ. ನಾನೆಷ್ಟೇ ಗತ್ತಿನವನಾದರೂ ಒಳಗೆ ಒಂದು ಪಾಪಭೀತಿ ನನ್ನನ್ನು ಕಾಡುತ್ತಿದೆ. ನಿನಗೆ ಹೇಳಬೇಕೆನಿಸುತ್ತಿದೆ. ನಿನ್ನಲ್ಲೇ ಇಟ್ಟುಕೊಳ್ಳುವೆ ಎಂಬ ನಂಬಿಕೆ ನನಗಿದೆ’ ಎಂದ ನಾನು ಎದುರಿಗೇ ಇದ್ದ ಪ್ರಭಾವದಿಂದಲೋ ಏನೋ ತನ್ನ ಹೊಟ್ಟೆಯೊಳಗಿದ್ದ ಸತ್ಯವನ್ನು ಅವರು ಕಾರಿಕೊಂಡರು. “ಹೇಳಿ ನಾಟಕಕಾರರೇ?’ ಎಂದೆ. ಯಾರಿಗಾದರೂ ಹಂಚಿಕೊಳ್ಳದಿದ್ದರೆ ನನ್ನ ಅಂತರಾತ್ಮ ನನ್ನನ್ನು ಸಾಯಿಸಿ ಬಿಡುತ್ತದೆ ಎಂದರು, “ನಿನ್ನ ಕತೆ ನನಗೆ ಗೊತ್ತು ಬಿಡು’ ಎಂದು ಗೊಣಗಿದೆ. “ಅದೇನದು? ಏನೆಂದಿರಿ?’ ಎಂದರು.
“ಏನಿಲ್ಲ… ಏನಿಲ್ಲ ಬಿಡಿ’ ಎಂದು ಜಾರಿಸಿದೆ. ಅವನು ಶುರು ಮಾಡಿದ. ಸತ್ಯ ಹೇಳುವಾಗ ಅವನ ದನಿಯಲ್ಲಿ ಗತ್ತಿರಲಿಲ್ಲ, “ನಾನು ಈ ನಾಟಕದ ಕತೆಯನ್ನು ಕದ್ದು ಬರೆದಿದ್ದೇನೆ’ ಎಂದ. ನಾನು, “ಗೊತ್ತು’ ಎಂದು ಮೆಲ್ಲಗೆ ಗೊಣಗಿದೆ. “ಏನೆಂದಿರಿ?’ ಎಂದ. ಹಾಗೇ ಸುಮ್ಮನೆ, “ದುರಭ್ಯಾಸ, ನೀವು ಮುಂದುವರೆಸಿ’ ಎಂದೆ. ಅವನೊಬ್ಬ ಆಗ ತಾನೇ ಅರಳುತ್ತಿರುವ ಉದಯೋನ್ಮುಖ ಪ್ರತಿಭಾವಂತ. ಆಗಲೇ ಅವನ ಕಲ್ಪನಾ ಶಕ್ತಿ ಬೆರಗುಗೊಳಿಸುವಂತಿತ್ತು. ಅವನದೊಂದು ಚಿಕ್ಕ ಪುಸ್ತಕ.
ಕೆಲವೇ ಪುಟಗಳ ಅತ್ಯಂತ ಕುತೂಹಲಕಾರಿ ನಿಗೂಢ ಸತ್ಯವನ್ನು ತನ್ನೊಡಲೊಳಗೇ ಅಡಗಿಸಿಕೊಂಡು ಅಂತ್ಯದಲ್ಲಿ ರಹಸ್ಯ ಸ್ಫೋಟವಾಗುವ ಪರಿ ಅದ್ಭುತ. ನೀನು ಆಗಲೇ ಎಲ್ಲೋ ಓದಿರುವೆ ಎಂದ ಮಾತು ನಿಜ, ಅವನ ಕತೆ ಕದ್ದವನು ನಾನೇ, ಏನೋ ಅಲ್ಪಸ್ವಲ್ಪ ಬದಲಾವಣೆ ಮಾಡಿ ಚಿತ್ರ ನಿರ್ದೇಶಕನೊಬ್ಬನಿಗೆ ನೀಡಿದೆ ನೋಡು, ಓದಿ ಅವನು ಸುಸ್ತು ಹೊಡೆದು ಹೋದ’ ಎಂದು ಹೆಮ್ಮೆಯಿಂದ ನಕ್ಕ.ಒಬ್ಬನ ಪ್ರತಿಭಾ ಸಂಪತ್ತಿಗೆ ಕನ್ನ ಹಾಕಿದುದನ್ನು ಎಷ್ಟು ಸುಲಭವಾಗಿ ಹೇಳುತ್ತಿದ್ದಾನೆ. ಹೆಮ್ಮೆ ಬೇರೆ! ನನಗೇ ಅರಿಯದಂತೆ ನನ್ನ ಮುಷ್ಠಿ ಬಿಗಿಯಾಯಿತು, ಕಣ್ಣುಗಳಲ್ಲಿ ಕೋಪ ಕಿಡಿಕಾರಿತು. ತಡೆದುಕೊಂಡೆ, ಹಲ್ಲು ಕಚ್ಚಿ ಕೇಳಿದೆ. ಆ ಲೇಖಕ ಸುಮ್ಮನಿದ್ದನೇ? ಅಯ್ಯೋ, ಅವನಿಗದು ತಿಳಿಯುವ ಹೊತ್ತಿಗೆ ಅದು ಚಲನಚಿತ್ರವಾಗಿ ಪ್ರದರ್ಶಿತವಾಗುತ್ತಿತ್ತು. ನಾನು ಆ ಹೊತ್ತಿಗೆ ನಾಟಕ ಲೋಕದಲ್ಲಿ ಅದ್ವಿತೀಯನೆಂದು ಹೆಸರುಗಳಿಸಿದ್ದೆ. ಆ ಬಚ್ಚ ನನ್ನನ್ನೇನು ಮಾಡಬಲ್ಲ? ಮಾರ್ದವತೆ ಮರೆಯಾಗಿ ಮತ್ತೆ ಅಹಂಕಾರ ಇಣುಕಿತು. “ಇನ್ನೂ ಯಾರ ಯಾರ ಜೇಬಿಗೆ ಕೈ ಹಾಕಿದ್ದೀರಿ?’ ಗೊಣಗಿದೆ. “ಏನೆಂದೆ?’ ಎಂದ. “ಹಾಗೇ ಸುಮ್ಮನೆ ಗೊಣಗಾಟ’ ಎಂದೆ. ಮುಂದುವರಿಸಿದ, ಅವನ ದನಿಯಲ್ಲಿ ಕಂಡೂ ಕಾಣದಂತೆ ಪಶ್ಚಾತ್ತಾಪ ಇಣುಕುತ್ತಿತ್ತು. ಆದರೆ, ಈಗ ಅದೇಕೋ ಮನಸ್ಸಿನ ಯಾವುದೋ ಮೂಲೆಯಲ್ಲಿ ಬೇಸರ. “ಮೂಲಕತೆ ಎಂದು ಹೇಳಿ ಅದರ ಮುಂದೆ ಅವನ ಹೆಸರನ್ನು ಸ್ಮರಿಸಬೇಕಿತ್ತು’ ಎಂದ, “ಅಷ್ಟಾದರೂ ಅನಿಸುತ್ತಿದೆಯಲ್ಲ, ಪಾವನವಾದಿರಿ’ ಎಂದು ಗೊಣಗಿದೆ. “ಏನೆಂದಿರಿ?’ ಎಂದ. “ಆದೇ ದುರಭ್ಯಾಸ!’ ಎಂದೆ. “ಎಂಥದ್ರಿ ನಿಮ್ಮದಿದು ದುರಭ್ಯಾಸ? ಯಾರಿಂದ ಬಂದಿತಪ್ಪ?’ ಎಂದ, ನಾನು, “ನಮ್ಮಪ್ಪನಿಂದ, ನಮ್ಮಪ್ಪನಿಗೆ ಅವರ ಅಪ್ಪ ಅಂದರೆ ನಮ್ಮ ತಾತನಿಂದ’ ಎಂದೆ ನಗುತ್ತ. “ಸರಿ ಹೋಯ್ತು ಬಿಡಿ. ವಂಶಪಾರಂಪರ್ಯವಾಗಿ ಬಂದ ಆಸ್ತಿ!’ ನಾನು ವಿಚಿತ್ರವಾಗಿ ನಕ್ಕೆ. ಇನ್ನೇನು, ನಮ್ಮ ನಮ್ಮ ನಿಲ್ದಾಣಗಳು ಸಮೀಪಿಸುತ್ತಿದ್ದವು, ಈ ನಾಟಕಕ್ಕೆ ಮಂಗಲ ಹಾಡುವ ಸಮಯ ಬಂದಿತು. ನಾನು ವಿಕಟವಾಗಿ ನಗುತ್ತ, “ನೀವು ಅವನ ಕತೆ ಕದ್ದಿದ್ದು ನನಗೆ ಗೊತ್ತಿತ್ತು’ ಎಂದೆ. “ಹೇಗೆ ಗೊತ್ತು? ಸುಳ್ಳು ಹೇಳುತ್ತಿ?’ ಎಂದು ಹುಬ್ಬೇರಿಸಿದ. “ಸುಳ್ಳು ಹೇಳುವುದು ನಿಮ್ಮ ಚಾಳಿ, ನನ್ನದಲ್ಲ. ನನಗೆ ಗೊತ್ತು ಎನ್ನುವುದೇನು? ನಾನೇ ಆ ಲೇಖಕ, ನಾನು ಸತ್ತು ಹೋಗಿ ಎರಡು ವರ್ಷಗಳಾಯಿತು’ ಎಂದು ಗಹಗಹಿಸಿದೆ. ಅವನು ಭಯದಿಂದ ಬೆವರಿ ಹೋದ, ದಿಗ್ಭ್ರಾಂತನಾದ, ಬೆಬ್ಬಳಿಸಿದ. “ಏನೆಂದಿರಿ?’ ತೊದಲಿದ. “ಈಗ ಹಾಗೆ ಸುಮ್ಮನೆ… ಎನ್ನುವುದಿಲ್ಲ. ಕೇಳಿಸಿಕೊಳ್ಳಿ. ನಾನು ಆ ಲೇಖಕನ ಪ್ರೇತಾತ್ಮ’ ಎಂದು ಗಹಗಹಿಸಿದೆ. ಕೂರಲಗಿಗಿಂತ ಹರಿತವಾದ ಆ ವಿಕಟಾಟ್ಟಹಾಸ ನೇರವಾಗಿ ಅವನ ಹೃದಯದ ಮೇಲೆ ಅಪ್ಪಳಿಸಿತು, ಇನ್ನವನು ಸ್ವಲ್ಪ ಹೊತ್ತಿನಲ್ಲಿ ನಮ್ಮೊಂದಿಗೇ ಸೇರಿಕೊಳ್ಳುತ್ತಾನೆ ಎಂದು ದೃಢಪಡಿಸಿಕೊಂಡು ಒಂದೇ ಕ್ಷಣದಲ್ಲಿ ಮಾಯವಾದೆ. ಆ ಸುಂದರ ಯುವತಿ ಬಂದು ನನ್ನೊಂದಿಗೆ ಸೇರಿದಳು. ನಾನು ರೇಗಿದೆ, “ನೀನೇಕೆ ಬಂದೆ ಇಲ್ಲಿ… ಕೆಲಸ ಕೆಡಿಸಲು…’ ಅವಳು ಕಿಲಕಿಲನೆ ನಗುತ್ತ “ಸ್ವಲ್ಪ ತುಂಟಾಟ ಮಾಡೋಣ’ ಅನ್ನಿಸಿತು ಎಂದಳು. “ಬದುಕಿದ್ದಾಗಲೂ ಹೀಗೇ ನೀನು, ಬರೀ ತುಂಟಾಟ’ ಎಂದು ನಕ್ಕೆ. ಮರುದಿನ ಬೆಳಗ್ಗೆ ಆಕಾಶವಾಣಿ, ದೂರದರ್ಶನ ವಾಹಿನಿಗಳು ಸುದ್ದಿ ಪ್ರಸಾರ ಮಾಡುತ್ತಿದ್ದವು. ಪ್ರಸಿದ್ಧ ನಾಟಕಕಾರರಾದ ಕಲ್ಮನೆ ಜಟಾಜೂಟರಾವ್ ಇನ್ನಿಲ್ಲ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ಹೃದಯಾಘಾತಕ್ಕೆ ಒಳಗಾಗಿ ಅಸು ನೀಗಿದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ. – ಎಲ್. ಗಿರಿಜಾ ರಾಜ್