ಜಾನುವಾರುಗಳ ಕೊರೊನಾ ಎಂದು ಬಿಂಬಿತವಾಗಿರುವ ಚರ್ಮ ಗಂಟು ರೋಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರದ ಸಕಾಲಿಕ ಕ್ರಮಗಳಿಂದಾಗಿ ಹೆಚ್ಚಿನ ಅನಾಹುತಗಳು ಆಗಿಲ್ಲ ಅನ್ನುವುದು ಸಮಾಧಾನದ ಸಂಗತಿ. ಆದರೂ, ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳ ಜೊತೆಗೆ ರೈತರು, ಸಮಾಜ ಎಚ್ಚರಿಕೆ ವಹಿಸಬೇಕಿದೆ.
ಮನುಷ್ಯರಲ್ಲಿ ಕೊರೊನಾ ಹರಡುವ ರೀತಿಯಲ್ಲಿ ಜಾನುವಾರುಗಳಿಗೆ ಹರಡುವ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಪಶುಸಂಗೋಪಾನಾ ಇಲಾಖೆ ಲಸಿಕೆಯ ಅಸ್ತ್ರ ಬಳಸುತ್ತಿದ್ದು, ಸಮರೋಪಾದಿಯಲ್ಲಿ ಲಸಿಕೆ ಅಭಿಯಾನ ನಡೆಸುತ್ತಿದೆ. ಚರ್ಮ ಗಂಟು ರೋಗ ರಾಜ್ಯದಲ್ಲಿ ಬಹುತೇಕ ತಗ್ಗಿದೆ. ಇದರ ಹೊರತಾಗಿಯೂ ಜಾನುವಾರುಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ರಾಜ್ಯದಲ್ಲಿ 5 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಮುಂದಿನ ತಿಂಗಳು 25 ಲಕ್ಷ ಡೋಸ್ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಗತ್ಯಬಿದ್ದಲ್ಲಿ ನವೆಂಬರ್‌ನಲ್ಲೂ 25 ಲಕ್ಷ ಡೋಸ್ ಲಸಿಕೆ ನೀಡಲೂ ರಾಜ್ಯ ಸರ್ಕಾರ ಯೋಚಿಸುತ್ತಿದೆ.
ಬೆಳಗಾವಿ, ಹಾವೇರಿ, ದಾವಣಗೆರೆ, ರಾಯಚೂರು, ಧಾರವಾಡ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ 7 ಜಿಲ್ಲೆಗಳ 356 ಗ್ರಾಮಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಕಂಡು ಬಂದಿದೆ ಎಂದು ಸರ್ಕಾರ ಹೇಳುತ್ತಿದೆ. ಅಲ್ಲಿ ಜಾನುವಾರು ಸಂತೆ ಗಳನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಜತೆ ಗಡಿ ಹಂಚಿ ಕೊಂಡಿರುವ ರಾಜ್ಯದ ಜಿಲ್ಲೆಗಳ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಗೊಳ್ಳಲಾಗಿದೆ.
ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಆದರೂ, ರೋಗಕ್ಕೆ ಜಾನುವಾರುಗಳು ತುತ್ತಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು. ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆಯೂ ಅಷ್ಟೇ ಮುಖ್ಯ. ಪರಿಹಾರ ನೀಡುವ ಪ್ರಕ್ರಿಯೆ ಕ್ಲಿಷ್ಟವಾಗಿರಬಾರದು. ಮಾನದಂಡ-ಮಾರ್ಗಸೂಚಿಗಳು ಜಟಿಲವಾಗಿರಬಾರದು. ರೋಗಕ್ಕೆ ತುತ್ತಾದ ಹಸುಗಳಿಗೆ ಚಿಕಿತ್ಸೆ ವಿಳಂಬವಾದರೆ ಹಾಲು ಉತ್ಪಾದನೆ ಶೇ.80ರಷ್ಟು ಕುಸಿತ ಕಾಣಲಿದೆೆ ಎಂಬ ಸುದ್ದಿಗಳು ಸಾಕಷ್ಟು ಹರಿದಾಡುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ವೈಜ್ಞಾನಿಕ ಪುರಾವೆಗಳ ಮೂಲಕ ಭೀತಿಯನ್ನು ನಿವಾರಿಸುವ ಹೊಣೆ ಸರ್ಕಾರದ ಮೇಲೆ ಇದೆ.
ಈಗ ಜಾನುವಾರುಗಳಲ್ಲಿ ಕಂಡು ಬರುತ್ತಿರುವ ಚರ್ಮ ಗಂಟು ರೋಗ ಇದು ಎರಡನೇ ಅಲೆಯಾಗಿದೆ. ಮೊದಲ ಅಲೆ ಈಗಾಗಲೇ ಬಂದು ಹೋಗಿದೆ ಎಂದು ತಜ್ಞರು ಹೇಳುತ್ತಾರೆ. ಕೊರೊನಾ ರೀತಿ ರೋಗ “ಅಲೆ’ಗಳಲ್ಲಿ ಹರಡುತ್ತದೆ ಎಂದಾದರೆ, ಸಂಭಾವ್ಯ ಅಲೆಗಳನ್ನೂ ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿ 1.18 ಕೋಟಿ ಹಸು, ಎಮ್ಮೆಗಳಿವೆ. 70 ಸಾವಿರಕ್ಕೂ ಹೆಚ್ಚು ಬಿಡಾಡಿ ದನಗಳಿವೆ. ಈ ಪೈಕಿ 30 ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ಈ ಚರ್ಮ ಗಂಟು ರೋಗ ಕಂಡು ಬಂದಿದೆ. ಈ ರೋಗ ಕಟ್ಟಿ ಹಾಕದಿದ್ದರೆ ಗೋ ಸಂತತಿ,¤ ಗೋಸಂಪತ್ತಿನ ಮೇಲೆ ಪರಿಣಾಮ ಬೀರಲಿದೆ. ಜಾನುವಾರುಗಳಲ್ಲಿ ಹರಡುವ ಇಂತಹ ಸಾಂಕ್ರಾಮಿಕ ಹಾಗೂ ಮಾರಕ ಕಾಯಿಲೆಗಳ ವಿಚಾರದಲ್ಲಿ ಸರ್ಕಾರದ ಬಳಿ ಖಚಿತ ಹಾಗೂ ದೂರದೃಷ್ಟಿಯ ಉಪಕ್ರಮಗಳು ಇರಬೇಕು. ಹೊಸ ವೈಜ್ಞಾನಿಕ ಅಧ್ಯಯನ ಮತ್ತು ಪಶುವೈದ್ಯಕೀಯ ಸಂಶೋಧನೆಗೆ ಇದು ಸಕಾಲ.