ನವದೆಹಲಿ: ದೇಶಾದ್ಯಂತ ಹಸುಗಳಲ್ಲಿ ಇತ್ತೀಚೆಗೆ ಚರ್ಮ ಗಂಟುಕಟ್ಟುವ ರೋಗ ಕಾಣಿಸಿಕೊಂಡಿದೆ. ವೈಜ್ಞಾನಿಕ ಭಾಷೆಯಲ್ಲಿ ಲಂಪಿ ಸ್ಕಿನ್ ಡಿಸೀಸ್ ಅಥವಾ ಎಲ್‌ಎಸ್‌ಡಿ ಎಂದು ಕರೆಯುವ ಇದರಿಂದ ಈಗಾಗಲೇ 65,000 ಹಸುಗಳು ಮೃತಪಟ್ಟಿವೆ.
ಇದೀಗ ಹುಟ್ಟಿಕೊಂಡಿರುವ ಪ್ರಶ್ನೆಯೆಂದರೆ ಹಸುಗಳಿಂದ ಈ ರೋಗ, ಮನುಷ್ಯರಿಗೆ ಹರಡುತ್ತದೆಯಾ ಎನ್ನುವುದು. ಇನ್ನೂ ಕೆಲವರು ರೋಗಿಷ್ಠ ಹಸುಗಳ ಹಾಲು ಕುಡಿದರೆ, ರೋಗ ವರ್ಗಾವಣೆಯಾಗುತ್ತದೆಯಾ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಂಶೋಧನೆ ನಡೆಸುತ್ತಿದೆ. ಪ್ರಸ್ತುತ ಈ ಬಗ್ಗೆ ಗುರು ಅಂಗದದೇವ ಜಾನುವಾರು ಕೇಂದ್ರ ಮತ್ತು ಪ್ರಾಣಿ ವಿಜ್ಞಾನಿ ವಿಶ್ವವಿದ್ಯಾಲಯದ ತಜ್ಞರು ತಮ್ಮ ಅಭಿಪ್ರಾಯ ನೀಡಿದ್ದಾರೆ.
ಈ ಪ್ರಕಾರ, ಇಂತಹ ರೋಗಿಷ್ಠ ಹಸುಗಳಿಂದ ಮನುಷ್ಯರಿಗೆ ಈ ರೋಗ ವರ್ಗಾವಣೆಯಾಗುವ ಯಾವುದೇ ಸಾಧ್ಯತೆಯಿಲ್ಲ. ಇದುವರೆಗೆ ಅಂತಹ ಲಕ್ಷಣ ಕಾಣಿಸಿಲ್ಲ.
ಹಾಗೆಯೇ ಇಂತಹ ಹಸುಗಳ ಹಾಲನ್ನೂ ನಿರಾತಂಕವಾಗಿ ಕುಡಿಯಬಹುದು, ಚಿಂತೆ ಬೇಡ ಎಂದಿದ್ದಾರೆ.