ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ “ಅಮರ್’ ಅಂತ ಹೆಸರಿಡುವ ಮುನ್ನ ಬೇರೆ ಇನ್ನೊಂದಿಷ್ಟು ಹೆಸರುಗಳು ಕೇಳಿ ಬಂದಿದ್ದವು. ಪ್ರಮುಖವಾಗಿ “ಜಲೀಲ’ ಎಂದು ಹೆಸರಿಡಲಾಗುತ್ತದೆ ಎಂದು ಹೇಳಲಾಗಿತ್ತು. ಕೊನೆಗೆ “ಅಮರ್’ ಎಂಬ ಹೆಸರನ್ನು ಫೈನಲ್ ಮಾಡಲಾಗಿದೆ.
ಅಂಬರೀಶ್ ಅವರ ಮೂಲ ಹೆಸರು ಅಮರ್ ಮತ್ತು ಅವರು ಅದೇ ಹೆಸರಿನ ಪಾತ್ರಗಳಲ್ಲಿ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂಬ ಸೆಂಟಿಮೆಂಟ್‌ಗೆ ಈ ಹೆಸರು ಇಡಲಾಗಿದೆಯಾದರೂ, ಚಿತ್ರಕ್ಕೆ “ಅಮರ್’ ಎಂದು ನಾಮಕರಣ ಮಾಡಿರುವುದಕ್ಕೆ ಬೇರೆ ಕಾರಣವೂ ಇದೆ.
ಅದೇನೆಂದರೆ, “ಅ’ಕಾರದಿಂದ ಶುರುವಾಗುವ ಹೆಸರುಗಳು ಹೊಸಬರಿಗೆ ಲಕ್ಕಿಯಂತೆ. “ಅಮರ್’ ಸಹ “ಅ’ಕಾರದಿಂದ ಶುರುವಾಗುವುದರಿಂದ, ಚಿತ್ರಕ್ಕೆ ಅದೇ ಹೆಸರನ್ನು ಪಕ್ಕಾ ಮಾಡಲಾಗಿದೆ. ಈ ವಿಷಯದಲ್ಲಿ ನಂಬಿಕೆ ಇಲ್ಲದಿದ್ದರೆ ಇತಿಹಾಸದ ಪುಟಗಳಲ್ಲಿರುವ ಉದಾಹರಣೆಗಳನ್ನು ಗಮನಿಸಿ.
ಶಿವರಾಜಕುಮಾರ್ ಅವರ ಮೊದಲ ಚಿತ್ರ “ಆನಂದ್’ ಸೂಪರ್ ಹಿಟ್ ಆಗಿ 25 ವಾರಗಳ ಪ್ರದರ್ಶನ ಕಂಡಿತ್ತು. ಪುನೀತ್ ರಾಜಕುಮಾರ್ ಅವರ ಮೊದಲ ಚಿತ್ರ “ಅಪ್ಪು’ ಸಹ ಸಿಲ್ವರ್ ಜ್ಯೂಬಿಲಿ ಚಿತ್ರವೇ. ಧ್ರುವ ಸರ್ಜಾ ಅಭಿನಯದ “ಅದ್ಧೂರಿ’ 100 ದಿನಗಳ ಪ್ರದರ್ಶನ ಕಂಡಿತ್ತು.
ಹೊಸಬರು “ಅ’ಕಾರದಿಂದ ಶುರುವಾಗುವ ಚಿತ್ರಗಳಲ್ಲಿ ಕಾಣಿಸಿಕೊಂಡರೆ, ಅವು ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಮತ್ತು ಸೆಂಟಿಮೆಂಟ್ ಇರುವುದರಿಂದ, ಅಭಿಷೇಕ್ ಚಿತ್ರಕ್ಕೆ “ಅ’ಕಾರದಿಂದ ಶುರುವಾಗುವ “ಅಮರ್’ ಎಂದು ಹೆಸರಿಡಲಾಗಿದೆ.