ಮುಂಬೈ: ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯೊಂದು ಇದೀಗ ಅಧಿಕೃತವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎರಡು ಹೊಸ ತಂಡಗಳು ತಮ್ಮ ತಲಾ ಮೂವರು ಆಟಗಾರರ ಆಯ್ಕೆಯನ್ನು ಅಂತಿಮಗೊಳಿಸಿದೆ.
ಸದ್ಯ ದಕ್ಷಿಣ ಆಫ್ರಿಕಾದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಹಂಗಾಮಿ ನಾಯಕ ಕೆ.ಎಲ್.ರಾಹುಲ್ ಅವರು ದುಬಾರಿ ಬೆಲೆಗೆ ಲಕ್ನೋ ಪಾಲಾಗಿದ್ದಾರೆ. ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್ ನ ಲಕ್ನೋ ಫ್ರಾಂಚೈಸಿಯು ರಾಹುಲ್ ಅವರನ್ನು ನಾಯಕರನ್ನಾಗಿ ಖರೀದಿ ಮಾಡಿದ್ದು, 17 ಕೋಟಿ ರೂ. ಬೆಲೆ ನೀಡಿದ್ದಾರೆ.
ಕೆ.ಎಲ್.ರಾಹುಲ್ ಅವರೊಂದಿಗೆ ಲಕ್ನೋ ಫ್ರಾಂಚೈಸಿಯು ಆಸ್ಟ್ರೇಲಿಯನ್ ಆಲ್ ರೌಂಡರ್ ಮಾರ್ಕಸ್ ಸ್ಟೋಯಿನಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಖರೀದಿ ಮಾಡಿದೆ. ಸ್ಟೋಯಿನಸ್ ಗೆ 9.2 ಕೋಟಿ ರೂ. ನೀಡಿದ್ದರೆ, ಬಿಷ್ಣೋಯ್ ಗೆ 4 ಕೋಟಿ ರೂ. ನೀಡಿ ಖರೀದಿಸಲಾಗಿದೆ.
ಇದನ್ನೂ ಓದಿ:ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಬಯಸಿದ್ದ ಗಂಗೂಲಿ?
ಅಹಮದಾಬಾದ್ ಗೆ ಪಾಂಡ್ಯ ನಾಯಕ: ಇದೇ ವೇಳೆ ಮತ್ತೊಂದು ಹೊಸ ತಂಡ ಅಹಮದಾಬಾದ್ ಕೂಡಾ ತನ್ನ ಆಯ್ಕೆಗಳನ್ನು ಅಂತಿಮಗೊಳಿಸಿದೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದರೆ, ಅಫ್ಘಾನ್ ಆಲ್ ರೌಂಡರ್ ರಶೀದ್ ಖಾನ್ ಮತ್ತು ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಹಾರ್ದಿಕ್ ಪಾಂಡ್ಯಗೆ ಅಹಮದಾಬಾದ್ ಫ್ರಾಂಚೈಸಿಯು 15 ಕೋಟಿ ರೂ ನೀಡಿದೆ. ರಶೀದ್ ಖಾನ್ ಗೂ 15 ಕೋಟಿ ರೂ. ನೀಡಲಾಗಿದ್ದು, ಗಿಲ್ ಗೆ 8 ಕೋಟಿ ರೂ. ನೀಡಲಾಗಿದೆ. ಇದರೊಂದಿಗೆ ಅಹಮದಾಬಾದ್ ಫ್ರಾಂಚೈಸಿ ಪರ್ಸ್ ನಲ್ಲಿ ಇನ್ನು 52 ಕೋಟಿ ರೂ. ಉಳಿದಿದೆ. ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ.