ನವದೆಹಲಿ: ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ತೈಲ ಮಾರುಕಟ್ಟೆ ಕಂಪನಿಗಳು ಸಿಹಿ ಸುದ್ದಿಯನ್ನು ನೀಡಿದ್ದು, ಸೋಮವಾರ(ಮೇ 1)ದಿಂದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.
ಮೇ 1ರಿಂದ ವಾಣಿಜ್ಯ ಬಳಕೆಯ 19ಕೆಜಿಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂಪಾಯಿ ಇಳಿಕೆ ಮಾಡಿದೆ. ಇದರಿಂದ ದೆಹಲಿಯಲ್ಲಿ 19ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,856.50 ರೂಪಾಯಿಗೆ ಇಳಿಕೆಯಾಗಿದೆ.
ನೂತನ ದರ ಮೇ 1ರಿಂದ ಜಾರಿಗೆ ಬಂದಿದೆ. ಆದರೆ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವರದಿ ತಿಳಿಸಿದೆ. ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿ ಇಳಿಕೆ ಯಾಗಿತ್ತು.
ಮೇ ತಿಂಗಳಿನಲ್ಲಿ 171.50 ರೂಪಾಯಿ ಇಳಿಕೆ ಮಾಡಿದ್ದರಿಂದ ಕೋಲ್ಕತಾದಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1960.50 ರೂಪಾಯಿಗೆ ಇಳಿಕೆಯಾಗಿದೆ.
ಅದೇ ರೀತಿ ಮುಂಬೈನಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1808.50 ರೂಪಾಯಿಯಾಗಿದ್ದು, ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2021.50 ರೂಪಾಯಿಯಾಗಿದೆ. ಉದ್ಯಾನನಗರಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1856 ರೂಪಾಯಿಗೆ ಇಳಿಕೆಯಾಗಿದೆ.