ಆಲಂಕಾರು: ಆಲಂಕಾರು ವ್ಯಾಪ್ತಿಯಲ್ಲಿ ಹಲವಾರು ಪ್ರಗತಿಪರ ಕಾಮಗಾರಿಗಳು ನಡೆಯ ಬೇಕಾಗಿದ್ದು, ಈ ವ್ಯಾಪ್ತಿಯಲ್ಲಿ ಉದ್ಭವಿಸಿರುವ ವಿದ್ಯುತ್ ಲೋ-ವೋಲ್ಟೇಜ್ನ ಸಮಸ್ಯೆ ಮತ್ತು ಈ ಬಗ್ಗೆ ಇಲಾಖೆ ನಿರ್ಲಕ್ಷ ವಹಿಸಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎ. 5ರಂದು ಬೆಳಗ್ಗೆ 10ರಿಂದ ಆಲಂಕಾರು ಶಾಖಾ ಮೆಸ್ಕಾಂ ಕಛೇರಿಯ ಎದುರು ಖಂಡಿಸಿ ಪ್ರತಿಭಟನೆ ನಿರ್ಧರಿಸಲಾಗಿದೆ. ಆಲಂಕಾರು ಬಿಜೆಪಿ ಶಕ್ತಿಕೇಂದ್ರ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.
ಆಲಂಕಾರು ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಗೌಡ ಆಲಡ್ಕ ಮಾತನಾಡಿ, ಆಲಂಕಾರು ಶಾಖಾ ವ್ಯಾಪ್ತಿಯಲ್ಲಿ ಲೋ ವೋಲ್ಟೇಜ್ ಸಮಸ್ಯೆಯಿಂದ ರೈತಾಪಿ ಜನತೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದವರಿದರೆ ತಾವು ಮಾಡಿದಂತಹ ಕೃಷಿಯನ್ನು ಸಂಪೂರ್ಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜೊತೆಗೆ ಅಧಿಕ ಹೊರೆ ಇರುವ ಪರಿವರ್ತಕಗಳಿಗೆ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸದೆ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ. ಇದಕ್ಕೆ ಪೂರಕವೆಂಬಂತೆ ಗ್ರಾಹಕರ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಲಂಕಾರು ಮೆಸ್ಕಾಂ ಶಾಖೆಯಲ್ಲಿ ಪೂರ್ಣಕಾಲಿಕಾ ಶಾಖಾಧಿಕಾರಿ ಇಲ್ಲವಾಗಿದೆ. ಈ ವಿಚಾರವಾಗಿ ಆಲಂಕಾರಿಗೆ ಪೂರ್ಣಕಾಲಿಕ ಶಾಖಾಧಿಕಾರಿಯನ್ನು ನೆಮಿಸಬೇಕಾಗಿದೆ.
ಬೇಸಿಗೆಯಲ್ಲಿ ಲೋ-ವೋಲ್ಟೇಜ್ ಸಮಸ್ಯೆ ಇದ್ದರೂ ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ 110 ಕೆವಿಎ ಸಬ್‌ಸ್ಟ್ರೇಶನ್ ಕಾರ್ಯಗಾರಿಯನ್ನು ಕಾರ್ಯಗತಗೊಳಿಸಬೇಕಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷದ ನೇತಾರರು, ಕಾರ್ಯಕರ್ತರು, ಗ್ರಾಹಕ ಮಿತ್ರರನ್ನು ಸೇರಿಸಿಕೊಂಡು ಇದೀಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪ್ಪೆ, ಆಲಂಕಾರು ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ಬಿಜೆಪಿಯ ಪ್ರಮುಖರಾದ ಜಯಂತ ಪೂಜಾರಿ ನೆಕ್ಕಿಲಾಡಿ, ದಯಾನಂದ ನೆಕ್ಕಿಲಾಡಿ, ಶ್ರೀಧರ ಪೂಜಾರಿ ನೆಕ್ಕಿಲಾಡಿ, ಪ್ರದೀಪ್‌ರೈ ಮನವಳಿಕೆ, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಪ್ರಶಾಂತ್ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.