ಬೆಂಗಳೂರು: ದೆಹಲಿ ಮೂಲದ ಮಹಿಳಾ ಟೆಕ್ಕಿ ಒಬ್ಬರನ್ನು ಪ್ರಿಯಕರನೇ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿರುವ ಘಟನೆ ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯ ಕೈ ತೋಟ ಎಂಬಲ್ಲಿ ನಡೆದಿದೆ. ದೆಹಲಿ ಮೂಲದ ವಿಜಯಲಕ್ಷ್ಮಿ (28) ಕೊಲೆಯಾದ ಟೆಕ್ಕಿ. 2-3 ದಿನಗಳ ಹಿಂದೆಯೇ ಕೊಲೆಯಾಗಿದ್ದು, ಮನೆಯಿಂದ ಕೊಳೆತ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಗಳ ಹಿಂದಷ್ಟೇ ದೆಹಲಿಯಿಂದ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಲಕ್ಷ್ಮಿ, ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯ ಕೈ ತೋಟ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎರಡು ವಾರಗಳಿಂದ ವಿಜಯಲಕ್ಷ್ಮಿ ಯುವಕನೊಬ್ಬನ ಜತೆ ಓಡಾಡುತ್ತಿದ್ದರು. ಆತನೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆ.15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ವಿಜಯಲಕ್ಷ್ಮಿ ಮನೆಗೆ ಯುವಕ ಬಂದಿದ್ದ. ಈ ವೇಳೆ ಮನೆ ಮಾಲೀಕರಿಗೆ ವಿಜಯಲಕ್ಷ್ಮಿ ತನ್ನ ಬಾಯ್‌ಫ್ರೆಂಡ್ ಎಂದು ಪರಿಚಯ ಮಾಡಿಸಿದ್ದರು. ಆದರೆ, ಆ.17ರಿಂದ ವಿಜಯಲಕ್ಷ್ಮಿ ಹೊರಗಡೆ ಕಾಣಿಸಿಕೊಂಡಿಲ್ಲ. ಈ ನಡುವೆ ಆಕೆಯ ತಂದೆ ಸೋಮವಾರ ಬೆಳಗ್ಗೆ ಮನೆ ಮಾಲೀಕರಿಗೆ ಕರೆ ಮಾಡಿ ಮಗಳು ಕರೆ ಸ್ವೀಕರಿಸುತ್ತಿಲ್ಲ. ಒಮ್ಮೆ ನೋಡಿ ಎಂದು ಕೇಳಿಕೊಂಡಿದ್ದರು.
ಹೀಗಾಗಿ ಆಕೆಯ ಮನೆಗೆ ಹೋಗಿ ಪರಿಶೀಲಿಸಿದಾಗ ಮನೆಯೊಳಗಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ನೆಲದ ಮೇಲೆ ವಿಜಯಲಕ್ಷ್ಮಿ ಮೃತದೇಹ ಬಿದ್ದಿತ್ತು. ಮುಖ, ದೇಹ ಊದಿಕೊಂಡಿದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು.
ಘಟನೆ ನಡೆದ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಹೀಗಾಗಿ ಆ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಂಗ್ರಹಿಸಲಾಗಿದೆ. ಜತೆಗೆ ಯುವತಿಯ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವೈಟ್‌ಫೀಲ್ಡ್ ಠಾಣೆಯಲ್ಲಿ ದಾಖಲಾಗಿದೆ.