ಬೆಂಗಳೂರು: ಜೆಡಿಎಸ್ ಆನೆ ಜೊತೆ (ಬಿಎಸ್‌ಪಿ ) ಪ್ರೀತಿ ಮಾಡಿ, ಓವೈಸಿ ಜೊತೆ ಡೇಟಿಂಗ್ ಮಾಡಿ ಮದುವೆ ಮಾತ್ರ ಕಾಂಗ್ರೆಸ್ ಜೊತೆ ಮಾಡಿಕೊಂಡಿದೆ ಎಂದು ಮಾಜಿ ಡಿಸಿಎಂ , ಬಿಜೆಪಿ ಶಾಸಕ ಆರ್.ಅಶೋಕ್ ಅವರು ಲೇವಡಿ ಮಾಡಿದ್ದಾರೆ.
ಮೌರ್ಯ ಸರ್ಕಲ್‌ನಲ್ಲಿ ಬುಧವಾರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ಪ್ರತಿಭಟನೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಎಲ್ಲಿ ಹೋಗುತ್ತೆ,ಯಾರ ಜೊತೆ ತಿರುಗಾಡುತ್ತೆ,ಎನು ಮಾಡುತ್ತದೆ ಎನ್ನುವ ಕುರಿತು ಏನೂ ಗೊತ್ತಾಗುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರ,ಅವರ ತಾಯಿನಾಡಿನಲ್ಲೇ , ಅವರು ಹುಟ್ಟಿ ಬೆಳೆದಲ್ಲೇ ಜನ ಹೀನಾಯವಾಗಿ ಸೋಲಿಸಿದ್ದಾರೆ.ಅವರು ಮಾನ ಮರ್ಯಾದೆ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದರು.
Related Articles
ಜನ ನೋಡುತ್ತಿದ್ದಾರೆ. ಈ ಸರ್ಕಾರ 3 ತಿಂಗಳು ಬದುಕುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ , ಶೋಭಾ ಕರಂದ್ಲಾಜೆ , ನಟ ಜಗ್ಗೇಶ್,ನಟಿ ತಾರಾ, ಬಿಜೆಪಿ ಸಂಸದ ಪಿ.ಸಿ.ಮೋಹನ್ ಸೇರಿದಂತೆ ನೂರಾರು ಮುಖಂಡರು ಕಪ್ಪು ಪಟ್ಟಿ ಧರಿಸಿ ಜೆಡಿಎಸ್ ,ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು,ಪ್ರಮುಖ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದು ಸಮ್ಮಿಶ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ರಾಜ್ಯಾಧ್ಯಂತ ಇಂದು ಕರಾಳ ದಿನ ಆಚರಿಸುತ್ತಿದ್ದು, ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.