Advertisement

ಗೋದ್ರಾದಲ್ಲಿ ಪ್ರೇಮಯುದ್ಧ: ಜೇಕಬ್‌ ಶಿಷ್ಯನ ಇಂಟೆನ್ಸ್‌ ಸಿನ್ಮಾ

04:13 PM Aug 18, 2017 | |

ದಕ್ಷಿಣ ಕನ್ನಡದ ಕೆಲವು ಊರುಗಳ ಮ್ಯಾಪ್‌. ಅದರ ಮಧ್ಯೆ “ಗೋದ್ರಾ’ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಅದರ ಕೆಳಗಡೆ “ಎಂದೂ ಮುಗಿಯದ ಯುದ್ಧ’ ಎಂಬ ಟ್ಯಾಗ್‌ಲೈನ್‌. ನೀನಾಸಂ ಸತೀಶ್‌ ಗಡ್ಡಬಿಟ್ಟುಕೊಂಡು ಆ ಪೋಸ್ಟರ್‌ ಕೆಳಗಡೆ ಕುಳಿತಿದ್ದರು. ಆಗಷ್ಟೇ ಅವರ ಹೊಸ ಚಿತ್ರ “ಗೋದ್ರಾ’ಗೆ ಮುಹೂರ್ತವಾಗಿತ್ತು. ನೀನಾಸಂ ಸತೀಶ್‌ “ಗೋದ್ರಾ’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿಯಾದಾಗ ಅನೇಕರಿಗೆ ಒಂದು ಕುತೂಹಲವಿತ್ತು. ಆ ಟೈಟಲ್‌ನಡಿ ಏನು ಹೇಳಬಹುದೆಂಬುದು. ಏಕೆಂದರೆ, ಗುಜರಾತ್‌ನ ಗೋದ್ರಾದಲ್ಲಿ ನಡೆದ ಘಟನೆಯನ್ನು ಯಾರೂ ಮರೆತಿಲ್ಲ. ಹಾಗಾಗಿ, ಆ ಟೈಟಲ್‌ ಬಗ್ಗೆ ಕುತೂಹಲವಿತ್ತು.

Advertisement

ಆದರೆ, ಈ ಸಿನಿಮಾಕ್ಕೂ “ಗೋದ್ರಾ’ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಕಥೆಯಲ್ಲಿ ಬರುವ ಅಂಶಗಳಿಗೂ ಅಲ್ಲಿನ ಘಟನೆಗೂ ಒಂದು ರೀತಿಯಲ್ಲಿ ಸಾಮ್ಯತೆ ಇರೋದರಿಂದ “ಗೋದ್ರಾ’ ಎಂದು ಟೈಟಲ್‌ ಇಡಲಾಗಿದೆ. ಈ ಚಿತ್ರವನ್ನು ನಂದೀಶ್‌ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಜೇಕಬ್‌ ವರ್ಗೀಸ್‌ ಅವರ ಜೊತೆ ಸಹಾಯಕರಾಗಿದ್ದ ನಂದೀಶ್‌ ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಶಿಷ್ಯನ ಮೊದಲ ಸಿನಿಮಾವನ್ನು ಜೇಕಬ್‌ ಅವರೇ ನಿರ್ಮಿಸುತ್ತಿದ್ದಾರೆ.

ಸತೀಶ್‌ಗೆ ಈ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಆಗ ಅಷ್ಟೊಂದು ಮಜಾ ಎನಿಸಿರಲಿಲ್ಲವಂತೆ. ಇತ್ತೀಚೆಗೆ ನಂದೀಶ್‌ ಒಂದಷ್ಟು ಬದಲಾವಣೆಯೊಂದಿಗೆ ಹೇಳಿದಾಗ ಈ ಕಥೆಯಲ್ಲಿ ಏನೋ ಇದೆ ಎಂದೆನಿಸಿ ಸಿನಿಮಾ ಒಪ್ಪಿಕೊಂಡರಂತೆ. ಇಲ್ಲಿ 20 ವರ್ಷದಿಂದ 35 ವರ್ಷದವರೆಗಿನ ಪಯಣವನ್ನು ತೋರಿಸುತ್ತಿರುವುದರಿಂದ ಅದಕ್ಕೆ ತಕ್ಕಂತೆ ಸತೀಶ್‌ ಅವರ ಗೆಟಪ್‌ ಕೂಡಾ ಬದಲಾಗಲಿದೆಯಂತೆ. “ಕಥೆ ತುಂಬಾ ಇಂಟೆನ್ಸ್‌ ಆಗಿದೆ. ಒಬ್ಬ ಯುವಕನ ಜೀವನವೇ ಯುದ್ಧದಂತಿರುತ್ತದೆ. ಕ್ಷಣ ಕ್ಷಣಕ್ಕೂ ಆತ ಒಂದಲ್ಲ ಒಂದು ಕಷ್ಟ, ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಈ ತರಹದ ಕಥೆ ತುಂಬಾ ಇಷ್ಟವಾಯಿತು. ಇಲ್ಲಿ ನನ್ನ 20 ವರ್ಷದಿಂದ 35 ವರ್ಷದವರೆಗಿನ ಪಯಣವನ್ನ ತೋರಿಸುತ್ತಾರೆ. ಹಾಗಾಗಿ, ರಿವರ್ಸ್‌ ಆರ್ಡರ್‌ನಲ್ಲೇ ಚಿತ್ರೀಕರಣ ಮಾಡಲಾಗುತ್ತದೆ. ಮೊದಲು ಕ್ಲೈಮ್ಯಾಕ್ಸ್‌ ಶೂಟ್‌ ಮಾಡುತ್ತೇವೆ. ನಿರ್ದೇಶಕ ನಂದೀಶ್‌ ಅವರು ತುಂಬಾ ತಿಳಿದುಕೊಂಡಿದ್ದಾರೆ. ಅವರ ಜೀವನದಲ್ಲೂ ಸಾಕಷ್ಟು ಘಟನೆಗಳು ನಡೆದಿವೆ. ಅವೆಲ್ಲದರ ಅನುಭವದಿಂದ ಈ ಕಥೆ ಮಾಡಲಾಗಿದೆ’ ಎನ್ನುವ ಸತೀಶ್‌, ಕಥೆಯ ಬಗ್ಗೆ ಕೇಳಿದರೆ, “ಇದೊಂದು ಪ್ರೇಮಯುದ್ಧ ಎಂದಷ್ಟೇ ಹೇಳುತ್ತಾರೆ. ಗೋದ್ರಾ ಘಟನೆಯ ತೀವ್ರತೆ ಈ ಸಿನಿಮಾದಲ್ಲಿ ನಿಮಗೆ ಸಿಗಲಿದೆ ಎನ್ನಲು ಸತೀಶ್‌ ಮರೆಯುವುದಿಲ್ಲ. 

ನಿರ್ದೇಶಕ ನಂದೀಶ್‌ ಹೆಚ್ಚೇನು ಮಾತನಾಡಲಿಲ್ಲ. ತುಂಬಾ ಹೊಸತನದಿಂದ ಕೂಡಿದ ಕಥೆ ಇದು ಎಂದಷ್ಟೇ ಹೇಳುತ್ತಾರೆ. ಸೂಕ್ಷ್ಮ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವುದು ಅವರ ಮಾತು. ಇದೊಂದು ಕಮರ್ಷಿಯಲ್‌ ಎಕ್ಸ್‌ಪೆರಿಮೆಂಟಲ್‌ ಸಿನಿಮಾವಾಗಿದ್ದು, ಬಹುತೇಕ ಚಿತ್ರೀಕರಣ ಸುಬ್ರಮಣ್ಯ ಸುತ್ತ ನಡೆಯುತ್ತದೆ. ಕಥೆ ಕೂಡಾ ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಗುತ್ತದೆಯಂತೆ. ಚಿತ್ರದ ಪ್ರಮುಖ ಅಂಶವನ್ನು ಛತ್ತೀಸ್‌ಘಡದಲ್ಲಿ ಚಿತ್ರೀಕರಿಸುವ ಉದ್ದೇಶವಿದ್ದು, ಅಲ್ಲಿನ ಹೊಸ ಮುಖಗಳನ್ನು ಬಳಸಿಕೊಳ್ಳುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ. ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ನಟಿಸುತ್ತಿದ್ದು, ಅವರಿಲ್ಲಿ ಜರ್ನಲಿಸ್ಟ್‌ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಕಿಶೋರ್‌ ಪ್ರಮುಖ ಪಾತ್ರ ಮಾಡುವ ಸಾಧ್ಯತೆ ಇದೆ. ಚಿತ್ರಕ್ಕೆ ಜಬೇಶ್‌ ಗಣೇಶ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.