ಹಗುರವೂ, ಭಾರವೂ ಆಗಬಹುದಾದ ಜೀವಸೆಲೆ! ಪಾರ್ಕು, ಮೂವಿ, ಬೆಟ್ಟ, ರೆಸಾರ್ಟ್‌ಗಳಾಚೆಗೂ ಪರಸ್ಪರರ ಪ್ರೀತಿಯನ್ನು ಗೌರವಿಸುವ, ಒಪ್ಪುವ, ಸ್ವೀಕರಿಸುವ, ಸಮಾನತೆಯ ಸಾಂಗತ್ಯವಾಗಿಸಿಕೊಳ್ಳುವಲ್ಲಿ ಪ್ರೀತಿ ಹರಡುತ್ತದೆ…
ಪ್ರೀತಿ’ ಎನ್ನುವುದು ಬೆಳಗ್ಗೆ ಹುಟ್ಟಿ, ಸಂಜೆಯೊಳಗೆ ಉಸಿರು ಚೆಲ್ಲುವುದು ಆಶ್ಚರ್ಯವಲ್ಲದ ಈ ಹೊತ್ತಿನಲ್ಲಿ “ಹ್ಯಾಪಿ ವ್ಯಾಲೆಂಟೆನ್ಸ್ ಡೇ’ ಅಂತ ಕೂಗುವ ದಿನವೊಂದು ಹತ್ತಿರ ಬಂದಿದೆ.
ಹೊಸ ಕನಸುಗಳು, ಸಡಗರಗಳು, ಚಿಗುರುವ, ಅರಳುವಷ್ಟೇ ಪ್ರಮಾಣದಲ್ಲಿ ನಿಟ್ಟುಸಿರುಗಳು, ವ್ಯರ್ಥ ಆಲಾಪಗಳು, ಹುಚ್ಚು ಸರ್ಕಸ್ಸುಗಳು, ಜೀವಕ್ಕೇ ಕುತ್ತು ತಂದುಕೊಳ್ಳುವ ಅವಿವೇಕಗಳೂ ಜೊತೆ ಜೊತೆಗೇ ನಡೆಯುತ್ತವೆ.
ಪ್ರೀತಿಯೆನ್ನಿ, ಪ್ರೇಮವೆನ್ನಿ, ಒಲವೆನ್ನಿ… ಅದೊಂದು ಮಧುರವಾದ ಅನುಭೂತಿ. ಸ್ಪರ್ಶಕ್ಕೂ ಸಾವಿರ ಬಗೆಯಲ್ಲಿ ತೆರೆದುಕೊಳ್ಳುವ, ಮೌನದೊಳಗೂ ಅಗಣಿತ ಮಾತುಗಳಿರುವ, ಬೆರಳ ತುದಿಯಲ್ಲೇ ಅಪಾರ ಒಲವು ಚಿಮ್ಮಿಸುವ ಸಮ್ಮೊಹಕ ಮಂತ್ರ! ವ್ಯಾಖ್ಯೆಗಳ ಹಂಗಿಲ್ಲದ್ದು, ಗಡಿಗಳನ್ನು ಮೀರಿ ಬೆಳೆಯುವಂತದ್ದು, ಗುಡಿ, ಗುಡಾರಗಳಲ್ಲಿಯೂ ಗಂಧವಾಗುವ ಪ್ರೇಮ ಅನಂತ, ಅಸೀಮ, ಅನನ್ಯ!
ಬದುಕು ಝಾಡಿಸುವಾಗ, ಹುನ್ನಾರಗಳಲ್ಲಿ ಜೀವ ಸೋಲುವಾಗ, ಸಂಕಟಗಳಲ್ಲಿ ಉಸಿರು ಮಿಡುಕಾಡುವಾಗ ಎದೆಗೇ ಮದ್ದು ತರಬಲ್ಲ ಪ್ರೇಮದ ಶಕ್ತಿ ಗಾಢವಾದುದು. ಸುಮ್ಮನೆ ಘಟಿಸುವ ಪ್ರೀತಿ ಬದುಕನ್ನು ಸಲಿಲಗೊಳಿಸಿಕೊಂಡು ಹೋಗುವಾಗಲೆಲ್ಲ ಪ್ರೀತಿಗಿರಬಹುದಾದ ಮಾಂತ್ರಿಕಶಕ್ತಿ ಅನುಭವಕ್ಕೆ ಬರುತ್ತದೆ.
ಸಂಗಾತಿಯಾಗಬಹುದಾದ, ಸಂಗಾತಿಯಾಗಿರುವ ಜೀವದ ಜೊತೆಗಿನ ಸಂಭ್ರಮಕ್ಕೆ ಕಾರಣವಾದ “ಪ್ರೇಮಿಗಳ ದಿನ’, ಪ್ರಸ್ತುತದಲ್ಲಿ ಭಾವಗಳಾಚೆಗಿನ “ವೇಷವಾ’! ಎನಿಸುತ್ತದೆ. ಪ್ರೀತಿ ಈಗ ಪ್ರೀತಿಯೇ ಆಗಿರದೆ,’ಆಟ’ವೂ, ಹಗೆ ಸಾಧಿಸುವ ಅಸ್ತ್ರವೂ ಆದಂತಿರುವ ಸಂದರ್ಭದಲ್ಲಿ ಜೀವಭಾವದ ತುಂಬ ಪ್ರೇಮದ ಘಮ ಕಾಣುವುದು ಊಹ್ಞುಂ, ಕಷ್ಟ! ಬೆರಳತುದಿಯಲ್ಲಿ ಪುಟ್ಟದಾಗಿರುವ ಜಗತ್ತಿನಲ್ಲಿ ಭಾವಗಳಿಗೂ ಅದೆಷ್ಟು ವೇಗ. ವಾಟ್ಸಾಪ್, ಮೆಸೆಂಜರ್, ಟ್ವಿಟ್ಟರ್‌ಗಳಂಥವು ಪ್ರೇಮ ಹುಟ್ಟುವ ತಾಣಗಳಾಗಿ, ಇಮೋಜಿಗಳೇ ಪ್ರೇಮದ ಪ್ರಮಾಣ ತೋರಿಸುತ್ತವೆ! ಇಲ್ಲಿಲ್ಲಿಯೇ ಹುಟ್ಟಿಕೊಂಡ ಪ್ರೇಮ ಅದದೇ ಜಾಗಗಳಲ್ಲಿಯೂ ಸತ್ತು ಹೋಗಿ, ಪ್ರೀತಿಯನ್ನು ಅಂಟಿಸಿಕೊಂಡ ಗೋಡೆಗಳು “ಬ್ಲಾಕ್’ ಆಗುತ್ತವೆ! ನಂಬರುಗಳು ಡಿಲೀಟಾಗುತ್ತವೆ! ಪ್ರೀತಿಯಿಲ್ಲದೆ ಬಾಳಿಲ್ಲ ಅಂತ ಆಣೆ, ಪ್ರಮಾಣಗಳ ಸಾಕ್ಷಿಯಾಗಿ ಕಟ್ಟಿಕೊಂಡ ಬದುಕೂ ಸಲ್ಲದ ಕಾರಣಕ್ಕೆ ಮುರಿದು ಬೀಳುತ್ತದೆ!
ಪ್ರೀತಿ ಲಘುವಲ್ಲ, ಅದು ಗುರು! ಹಗುರವೂ, ಭಾರವೂ ಆಗಬಹುದಾದ ಜೀವಸೆಲೆ! ಪಾರ್ಕು, ಮೂವಿ, ಬೆಟ್ಟ, ರೆಸಾರ್ಟ್ ಗಳಾಚೆಗೂ ಪರಸ್ಪರರ ಪ್ರೀತಿಯನ್ನು ಗೌರವಿಸುವ, ಒಪ್ಪುವ, ಸ್ವೀಕರಿಸುವ, ಸಮಾನತೆಯ ಸಾಂಗತ್ಯವಾಗಿಸಿಕೊಳ್ಳುವಲ್ಲಿ ಪ್ರೀತಿ ಹರಡುತ್ತದೆ. ಹಂದರವಾಗುತ್ತದೆ. ನಿರಂತರವಾಗಿ ಜೋಪಾನಿಸಿಕೊಂಡರೆ “ಒಳಗೂ’ ಬೆಳಗಿ ಅನುರಾಗ ಬದುಕಿನ ರಾಗವಾಗುತ್ತದೆ.
ಪ್ರೇಮ ಧ್ಯಾನದ ಹಾಗೆ! ಸೋತಾಗ ಕೈ ಹಿಡಿವ ಕವಿತೆಯ ಹಾಗೆ! ನನ್ನನ್ನು ನಾನೇ ನೋಡಿಕೊಳ್ಳಬಲ್ಲ ಕನ್ನಡಿಯ ಹಾಗೆ! ಹೂವಿನಂತಹ, ಧ್ಯಾನದಂತಹ, ಕನ್ನಡಿಯಂತಹ ಪ್ರೇಮಕ್ಕೆ ದಿನವೊಂದರ ಹಂಗಿಲ್ಲ! ಆಚರಣೆಯ ನೆಪವಿಲ್ಲ! ‘ಅರಿತ’ ಜೀವಗಳ ಎದೆಯೊಳಗೆ ಅದು ಸದಾ ಪ್ರವಹಿಸುವ ಅಮೃತಧಾರೆ!
ರಂಗಮ್ಮ ಹೊದೇಕಲ…, ತುಮಕೂರು