“ಎಲ್ಲಾ ಚಿತ್ರಗಳಲ್ಲೂ ಪ್ರೇಮಿಗಳು ಒಂದಾಗುತ್ತಿದ್ದಂತೆ ಶುಭಂ ಅಂತ ಬರುತ್ತೆ. ಅಲ್ಲಿಗೆ ಸಿನಿಮಾನೂ ಮುಗಿದು ಹೋಗುತ್ತೆ. ಪ್ರೇಮಿಗಳು ಒಂದಾದ ಬಳಿಕ ಅವರ ಲೈಫಲ್ಲಿ ಏನೆಲ್ಲಾ ಆಗುತ್ತೆ ಅನ್ನುವ ವಿಷಯ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ …’ ಹೀಗೆ ಹೇಳಿ ಸುಮ್ಮನಾದರು ನಿರ್ದೇಶಕ ವಿಜಯಭಾಸ್ಕರ್. ಅವರು ಹೇಳಿದ್ದು “ಮುನ್ನಡೆ’ ಚಿತ್ರದ ಬಗ್ಗೆ. ಇದು ಬಹುತೇಕ ಹೊಸಬರ ಚಿತ್ರ. ಇತ್ತೀಚೆಗೆ ಮುಹೂರ್ತ ನೆರವೇರಿತು.
ನಿರ್ದೇಶಕ ವಿಜಯಭಾಸ್ಕರ್, ಈ ಹಿಂದೆ ಕಿರುತೆರೆಯಲ್ಲಿ ಕೆಲಸ ಮಾಡಿದವರು. ಆದರೆ, ಕಾರಣಾಂತರಗಳಿಂದ ಬಣ್ಣದ ಲೋಕ ಬಿಟ್ಟು, ಕಳೆದ ಹದಿನೈದು ವರ್ಷಗಳಿಂದ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ದೊಡ್ಡ ಗ್ಯಾಪ್ ನಂತರ “ಮುನ್ನಡೆ’ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅವರಿಗಷ್ಟೇ ಅಲ್ಲ, ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಇದು ಮೊದಲ ಅನುಭವ. ಆ ಕುರಿತು ಹೇಳುತ್ತಾ ಹೋದರು ವಿಜಯಭಾಸ್ಕರ್.
“ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ, ನಾಯಕಿ ಒಂದಾಗುತ್ತಿದ್ದಂತೆಯೇ ಹ್ಯಾಪಿ ಎಂಡಿಂಗ್ ಆಗುತ್ತೆ. ಆದರೆ, ಅವರ ಪ್ರೀತಿ ಒಂದಾದ ಮೇಲೆ ಎದುರಾಗುವ ಸಮಸ್ಯೆಗಳು, ಅವರು ಬದುಕುವ ಶೈಲಿ ಇತ್ಯಾದಿ ಕುರಿತು ಕಥೆ ಮಾಡಿದ್ದೇನೆ. ಇದೊಂದು ಮಹಿಳಾ ಪ್ರಧಾನ ಕಥೆ. ಇಲ್ಲಿ ಕಥೆಯೇ ನಾಯಕ, ನಾಯಕಿ ಇದ್ದಂತೆ. ಮೂರು ಪ್ರಮುಖ ಪಾತ್ರಗಳ ಸುತ್ತವೇ ಸಿನಿಮಾ ಸಾಗಲಿದೆ. ಒಂದು ಹುಡುಗಿ ಕಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಾಳೆ.
ಅದೇ ಚಿತ್ರದ ಹೈಲೈಟ್. ಬೆಂಗಳೂರಲ್ಲಿ ಎರಡು ಹಂತದ ಚಿತ್ರೀಕರಣ ನಡೆಯಲಿದೆ’ ಅಂತ ವಿವರ ಕೊಟ್ಟರು ನಿರ್ದೇಶಕರು. ನಾಯಕ ಧನಂಜಯ್‌ಗೆ ಇದು ಮೊದಲ ಸಿನಿಮಾ. ಮೂಲತಃ ಮಂಡ್ಯದವರಾದ ಧನಂಜಯ್ ಚಿಕ್ಕಂದಿನಿಂದಲೂ ಕಲೆ ಮೇಲೆ ಪ್ರೀತಿ ಇಟ್ಟುಕೊಂಡವರು. ರಂಗಭೂಮಿಯ ನಂಟೂ ಇದೆ. ಹಲವು ನಾಟಕಗಳಲ್ಲಿ ಅಭಿನಯಿಸಿ, ನಿರೂಪಕರಾಗಿ ಕೆಲಸ ಮಾಡಿದ್ದ ಅವರಿಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸುತ್ತಿದ್ದಾರೆ.
“ಒಬ್ಬ ಪತ್ರಕರ್ತ ನಿರ್ದೇಶಕ ಆಗಬೇಕು ಅಂತ ಹೊರಡುವುದೇ ಕಥೆಯ ಸಾರಾಂಶ’ ಅಂದರು ಅವರು. ನಾಯಕಿ ಲೀನಾ ಖುಷಿಗೆ ಇದು ಮೊದಲ ಅನುಭವ. ಅವರು ಸಹನಾ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಸಹನೆ ಇರುವಂತಹ ಪಾತ್ರವಂತೆ ಅದು. ಮೊದಲ ಸಿನಿಮಾದಲ್ಲೇ ಒಳ್ಳೇ ಕಥೆ, ಪಾತ್ರ, ತಂಡ ಸಿಕ್ಕಿರುವುದು ಖುಷಿ ಅಂದರು ಲೀನಾ ಖುಷಿ.
ಮನೋಹರ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶಂಖನಾದ ಅಂಜಿನಪ್ಪ ಇಲ್ಲಿ ನಾಯಕಿಯ ದೊಡ್ಡಪ್ಪನ ಪಾತ್ರ ಮಾಡುತ್ತಿದ್ದಾರೆ. ಇದುವರೆಗೆ ಸಣ್ಣಪುಟ್ಟ ಪಾತ್ರ ಮಾಡಿದ್ದ ಅರವಿಂದ್‌ಗೆ ಇದು ನೂರನೇ ಚಿತ್ರ. ಅವರಿಗೆ ನಾಯಕಿಯ ತಂದೆ ಪಾತ್ರ ಸಿಕ್ಕಿದೆಯಂತೆ. ಯಶೋವರ್ಧನ್ ಸಂಗೀತ ನೀಡಿದರೆ, ಕೇಶವಾದಿತ್ಯ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಅಂದು ಸಹಕಾರ ನಗರ ಕಾರ್ಪೋರೇಟರ್ ರಾಜೇಂದ್ರ ಕುಮಾರ್ ಆಗಮಿಸಿ, ತಂಡಕ್ಕೆ ಶುಭಕೋರುತ್ತಿದ್ದಂತೆ, ಆ ಮಾತುಕತೆಗೂ ಬ್ರೇಕ್ ಬಿತ್ತು.