ಆಗಷ್ಟೇ ಚಿಗುರು ಮೀಸೆ ಚಿಗುರುತ್ತಲಿತ್ತು. ಬಾಲಿವುಡ್ ತಾರೆ ಐಶ್ವರ್ಯ ರೈ ಮನದೊಳಗೆ ಅದು ಹೇಗೆ, ಯಾವಾಗ ಬಂದು ಕುಳಿತಿದ್ದಳೋ ಗೊತ್ತೇ ಆಗಿರಲಿಲ್ಲ. ಅವಳನ್ನು ಹತ್ತಿರದಿಂದ ನೋಡಬೇಕು, ಮಾತನಾಡಬೇಕು ಎನ್ನುವ ಬಯಕೆಗಳನ್ನು ಮನದಲ್ಲೇ ಅದುಮಿಕೊಂಡು ಹಲವು ವರ್ಷಗಳೇ ಕಳೆದು ಹೋದವು. ಕಾಲಾನಂತರದಲ್ಲಿ ಉಮಾ ಬದುಕಿನಲ್ಲಿ ಬಂದು ಐಶ್ವರ್ಯಾಳನ್ನು ಮರೆಯುವಂತೆ ಮಾಡಿದಳು. ಮತ್ತೆ ಐಶ್ವರ್ಯಾ ಎಂದಿಗೂ ನೆನಪಾಗಲೇ ಇಲ್ಲ ಎನ್ನಬಹುದೇನೋ…
ಐಶ್ವರ್ಯಳನ್ನು ಮರೆತು ಅದೆಷ್ಟೋ ವರ್ಷಗಳು ಕಳೆದುಹೋಗಿತ್ತು. ಆದರೆ ಇತ್ತೀಚೆಗೆ ಏರ್ ಇಂಡಿಯಾದಲ್ಲಿ ಭಾರತಕ್ಕೆ ಹೋಗುವಾಗ ಹಮ್ ದಿಲ್ ದೇ ಚುಕೆ ಸನಮ್ ಸಿನೆಮಾ ನೋಡಿದೆ. ಒಂದು ಕ್ಷಣ ಹಳೆ ಪ್ರೀತಿ ಎದುರು ಬಂದು ಧುತ್ತೆಂದು ನಿಂತಂತೆ ಭಾಸವಾಯಿತು. ಅವಳ ಸೌಂದರ್ಯಕ್ಕೆ ಮಾರು ಹೋದೆ. ಅವಳ ಕಣ್ಣುಗಳ ಹೊಳಪು, ಮಾದಕ ನಗು, ನೃತ್ಯ… ಎಲ್ಲವನ್ನೂ ನೋಡುತ್ತ ಮಂತ್ರಮುಗ್ಧನಾದೆ. ಆಗ ಮತ್ತೆ ಹಳೆಯ ನೆನಪುಗಳು ಮನದಲ್ಲಿ ಅಲೆಅಲೆಯಾಗಿ ಬಂದು ಅಪ್ಪಳಿಸ ತೊಡಗಿತು.
ಬಾಲಿವುಡ್‌ನ ಇತಿಹಾಸದಲ್ಲಿ ಇವಳಿಗಿಂತ ಉತ್ತಮ ಅಭಿನೇತ್ರಿ ಬಹಳಷ್ಟು ಜನ ಇರಬಹುದು. ಆದರೆ ಸೌಂದರ್ಯವತಿ ಇರಲಿಕ್ಕಿಲ್ಲ. ಇವಳನ್ನು ಸೋಲಿಸಿ ಮಿಸ್ ಯುನಿವರ್ಸ್ ಗೆದ್ದಿದ್ದ ಸುಶ್ಮಿತಾ ಸೇನ್ ನನಗಂತೂ ಇಷ್ಟವೇ ಆಗಿರಲಿಲ್ಲ. ಇದೆಲ್ಲ ಸುಮಾರು ಎರಡು ದಶಕಗಳ ಹಿಂದಿನ ಮಾತು. ಬಹಳಷ್ಟು ಯೋಚನೆ ಮಾಡಿದೆ. ಐಶ್ವರ್ಯಾಳಿಗೆ ಪ್ರಪೋಸ್ ಮಾಡುವ ಮೋದಲು ಒಂದು ಪ್ರಯತ್ನ ಮಾಡೋಣ ಎಂದುಕೊಂಡು ಉಮಾಳಿಗೆ ಪ್ರಪೋಸ್ ಮಾಡಿದೆ. ಅವಳು ಖಂಡಿತಾ ಒಪ್ಪುವುದಿಲ್ಲ. ಹೀಗಾಗಿ ಅಮೇಲೆ ಐಶ್ವರ್ಯಾಳಿಗೆ ಪ್ರಪೋಸ್ ಮಾಡುವ ಎಂದು ಮನದೊಳಗೆ ಅಂದುಕೊಂಡಿದ್ದೆ.
ತುಂಬಾ ಕಾನ್ಫಿಡೆನ್ಸ್‌ನಲ್ಲಿ ಉಮಾ ನನ್ನನ್ನು ಆಯ್ಕೆ ಮಾಡುವ ಛಾನ್ಸೇ ಇಲ್ಲ ಎಂದುಕೊಂಡಿದ್ದೆ. ಆದರೆ ನನ್ನ ಎಲ್ಲ ಯೋಚನೆಗಳಿಗೆ ಲಗಾಮು ಹಾಕಿ ಉಮಾ ನನ್ನನ್ನು ಒಪ್ಪಿಕೊಂಡು ಬಿಟ್ಟಾಗ ಬದುಕಿನಲ್ಲಿ ಎಲ್ಲ ತಿರುವು ಮುರುವು ಆಯಿತು.
ಅದು 2000ನೇ ಇಸವಿಯ ಡಿಸೆಂಬರ್ ತಿಂಗಳು. ಅಮೆರಿಕದಿಂದ ಮೊದಲ ಬಾರಿಗೆ ದೀರ್ಘಾವಧಿ ರಜೆಯಲ್ಲಿ ತಾಯ್ನಾಡಿಗೆ ಬಂದಿದ್ದೆ. ತುಂಬಾ ಖುಷಿಯಲ್ಲಿದ್ದೆ. ಕೇವಲ ಫೋನ್‌ನಲ್ಲಿ ಮಾತನಾಡುತ್ತಿದ್ದ ಉಮಾಳನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವದು. ರವಿವಾರ ಮಧ್ಯಾಹ್ನ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹೊಟೇಲ್ ಒಂದರಲ್ಲಿ ಉಮಾ ಮತ್ತು ಅವಳ ಸ್ನೇಹಿತರೊಂದಿಗೆ ಊಟ ಮಾಡಿ ಹೊರಗೆ ಬಂದೆವು. ಅವಳ ಸ್ನೇಹಿತನೊಬ್ಬನ ಬಳಿ ಬಜಾಜ್ ಸ್ಕೂಟರ್ ನೋಡಿ ಅದನ್ನು ಓಡಿಸುವ ಆಸೆಯಾಯಿತು. ಕೇವಲ ಮೋಟಾರ್ ಬೈಕ್ ರೈಡ್ ಮಾಡಿದ ಅನುಭವವಿತ್ತು. ಆದರೆ ಒಮ್ಮೆಯೂ ಸ್ಕೂಟರ್ ಓಡಿಸಿರಲಿಲ್ಲ.
Related Articles
ನಾನು ಒಂದು ರೌಂಡ್ ನಿನ್ನ ಸ್ಕೂಟರ್ ಓಡಿಸಲೇ ಎಂದು ಕೇಳಿದಾಗ ಅವನು ಸಂತೋಷದಿಂದ ಒಪ್ಪಿ ತನ್ನ ಸ್ಕೂಟರ್ ಕೀ ಕೊಟ್ಟ. ನಾನು ಸ್ಕೂಟರ್ ಮೇಲೆ ಕುಳಿತಾಗ ಉಮಾಳ ಸ್ನೇಹಿತರು ಬಸವ್, ನೀವು ಉಮಾಳನ್ನು ಹಿಂದೆ ಕೂರಿಸಿಕೊಂಡು ರೈಡ್ ಮಾಡಲೇಬೇಕು ಎಂದು ಒತ್ತಾಯ ಮಾಡಿದರು. ನನಗೆ ಸ್ಕೂಟರ್ ಓಡಿಸಲು ಬರಲ್ಲ ಎಂಬಾ ರಹಸ್ಯ ಹೇಳದೇ, ತುಂಬಾ ಆತ್ಮ ವಿಶ್ವಾಸದಿಂದ ಉಮಾ ಓಕೆ ಅಂದ್ರೆ ನಂಗೆನೂ ಅಭ್ಯಂತರವಿಲ್ಲ ಎಂದೆ. ಉಮಾ ನಾಚಿಕೆಯಿಂದ ಒಲ್ಲೆ, ನಾನು ಕೂರಲ್ಲ ಎಂದು ದೂರ ಓಡಿಹೋದಳು. ಅವಳ ಗೆಳತಿಯರೆಲ್ಲ ಅವಳನ್ನು ತುಂಬಾ ಒತ್ತಾಯ ಮಾಡಿ ನನ್ನ ಹಿಂದೆ ಸ್ಕೂಟರ್‌ನಲ್ಲಿ ಕೂರಿಸುವುದರಲ್ಲಿ ಯಶಸ್ವಿಯಾದರು.
ಮನದೊಳಗೆ ತುಂಬಾ ಭಯವಿದ್ದರೂ ಅದನ್ನು ಒಂದಿಷ್ಟು ತೋರಿಸಿಕೊಳ್ಳದೇ ಸ್ಕೂಟರ್ ಅನ್ನು ತುಂಬಾ ಜಾಗರೂಕತೆಯಿಂದ ಓಡಿಸುತ್ತಾ ಹೋದೆ. ಬೈಕ್‌ನಲ್ಲಿರುವಂತೆ ಸ್ಕೂಟರ್‌ನಲ್ಲಿ ಕಾಲಿನಲ್ಲಿ ಕ್ಲಚ್, ಬ್ರೇಕ್ ಯಾವುದು ಇಲ್ಲ. ಸ್ವಲ್ಪ ದೂರ ಹೋಗುತ್ತಿರುವಾಗ ಸಡನ್ನಾಗಿ ಆಟೋ ರಿಕ್ಷಾ ಅಡ್ಡ ಬಂದು ಬಿಟ್ಟಿತು. ನಾನು ತತ್‌ಕ್ಷಣವೇ ಹ್ಯಾಂಡ್ ಬ್ರೇಕ್ ಹಾಕಿದಾಗ ಉಮಾ ನನ್ನ ಗಟ್ಟಿಯಾಗಿ ಹಿಡಿದಳು.
ಒಮ್ಮೆಲೇ ಸಾವಿರ ವೋಲ್ಟೆಜ್‌ನ ಎಲೆಕ್ಟ್ರಿಕ್ ಶಾಕ್ ಹೊಡೆದ ಅನುಭವವಾಯಿತು. ಜತೆಗೆ ತಂದೆಯ ಸ್ಟ್ರಿಕ್ಟ್ ವಾರ್ನಿಂಗ್ ಕೂಡ ನೆನಪಾಯಿತು. ತಂದೆ ಹೇಳಿದ್ದರು, ನೀನು ಬೇಕಾದ್ರೆ ಫಾರಿನ್‌ನ ಬಿಳಿ ಹುಡುಗಿಯನ್ನು ಮದ್ವೆಯಾಗು.. ಆದರೆ ಯಾವುದೇ ಕಾರಣಕ್ಕೂ ಉಮಾಳ ಜತೆ ನಿನ್ನ ಮದುವೆ ಸಾಧ್ಯವಿಲ್ಲ ಎಂದಿದ್ದು ಕಿವಿಯಲ್ಲಿ ರಿಂಗಣಿಸುತ್ತಿದ್ದಾಗಲೆ ತಲೆ ಫ್ಯಾನ್‌ನಂತೆ ಗಿರಗಿರನೇ ಸುತ್ತಿ ಬಿಟ್ಟಿತು. ಈ ಎಲ್ಲ ಕನ್ಪ್ಯೂಷನ್ ಮತ್ತು ಟೆನ್ಶನ್ ಮಧ್ಯೆ ಪಕ್ಕದ ಗುಂಡಿಯಲ್ಲಿ ದೊಪ್ಪೆಂದು ಬಿದ್ದು ಬಿಟ್ಟೆವು. ಅಕ್ಕ ಪಕ್ಕದವರು ಬಂದು ನಮ್ಮನ್ನು ಮೇಲಕ್ಕೆತ್ತಿ ಕಾಪಾಡಿದರು. ಅದೃಷ್ಟವಶಾತ್ ಕೈಕಾಲು ಮುರಿಯಲಿಲ್ಲ. ಆದರೆ ಹೃದಯ ಮಾತ್ರ ಐಶ್ವರ್ಯಾಳನ್ನು ಹೊರಹಾಕಿ ಉಮಾಳ ನಿರ್ಮಲವಾದ ಪ್ರೀತಿಯಲ್ಲಿ ಬೀಳಿಸಿತ್ತು.
*ಬೆಂಕಿ ಬಸಣ್ಣ, ನ್ಯೂಯಾರ್ಕ್