Advertisement

Karkala ನಗರದಲ್ಲಿ ಕರ್ಕಶ ಹಾರ್ನ್ ಕಿರಿಕಿರಿ!

03:52 PM May 17, 2023 | Team Udayavani |

ಕಾರ್ಕಳ: ಶಬ್ದ ಮಾಲಿನ್ಯಕ್ಕೆ ವಾಹನಗಳ ಹಾರ್ನ್ ಕೂಡ ಒಂದು ಕಾರಣ. ಕಾರ್ಕಳ ನಗರ ವ್ಯಾಪ್ತಿಯಲ್ಲಿ ಕರ್ಕಶ ಹಾರ್ನ್ ಹಾವಳಿ ಹೆಚ್ಚಿದ್ದು ಸಾರ್ವಜನಿಕರು ಇದರಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ, ಕಾರ್ಕಳ ನಗರ ಬೆಳೆಯುತ್ತಿದೆ. ವಾಹನಗಳ ಸಂಚಾರವೂ ಅಧಿಕವಾಗುತ್ತಿದೆ.

Advertisement

ಬಂಡಿಮಠದಿಂದ ಕಾರ್ಕಳ ಬಸ್‌ ನಿಲ್ದಾಣದ ವರೆಗೆ ವಾಹನಗಳ ಓಡಾಟ ಹೆಚ್ಚಿದೆ. ವಾಹನಗಳು ನಗರ ಪ್ರವೇಶಿಸುತ್ತಲೇ ಕರ್ಕಶ ಹಾರ್ನ್ ಮೊಳಗುವುದಕ್ಕೆ ಆರಂಭವಾಗುತ್ತದೆ. ಇದರಿಂದ ರಸ್ತೆ ಬದಿ ವ್ಯಾಪಾರಿಗಳು, ಪಾದಚಾರಿಗಳಿಗೆ ಕಿರಿಕಿರಿ ಅನುಭವವಾಗುತ್ತದೆ. ಇದನ್ನು ತಡೆಗಟ್ಟುವಲ್ಲಿ ಸಾರಿಗೆ ಇಲಾಖೆ ವಿಫ‌ಲವಾಗಿದೆ. ಇದರಿಂದಾಗಿ ನಿತ್ಯವೂ ಶಬ್ಧ ಮಾಲಿನ್ಯದಿಂದ ನಾಗರಿಕರೂ ಹಿಡಿಶಾಪ ಹಾಕುತ್ತಿರುತ್ತಾರೆ.

ಜಿಲ್ಲಾ ಕೇಂದ್ರ ಉಡುಪಿ ಕಡೆಯಿಂದ ಹಾಗೂ ಮಂಗಳೂರು ರಸ್ತೆಯ ಮೂರು ಮಾರ್ಗವಾಗಿ ಅತೀ ಹೆಚ್ಚು ವಾಹನಗಳು ನಗರದ ಬಸ್‌ ನಿಲ್ದಾಣ ತಲುಪುತ್ತವೆ. ಉಡುಪಿ, ಮಂಗಳೂರು ನಗರಗಳಿಗೆ ತೆರಳುವ ಸರ್ವಿಸ್‌ ಬಸ್‌, ಹೆಬ್ರಿ, ಬಜಗೋಳಿ, ನಿಟ್ಟೆ, ಹೀಗೆ ಗ್ರಾಮಿಣ ಭಾಗಕ್ಕೆ ಸಂಚಾರ ಕೈಗೊಳ್ಳುವ ಬಸ್‌ಗಳು ಸೇರಿ ಸುತ್ತಲಿನಿಂದ ವಾಹನಗಳು ಪೇಟೆ ತಲುಪುತ್ತಿದ್ದಂತೆ ವಾಹನಗಳಿಂದ ತುಂಬಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ.

ನಗರ ಬೆಳೆದಂತೆ ಕಿರಿದಾದ ರಸ್ತೆಗಳು ವಾಹನ ಒತ್ತಡಕ್ಕೆ ಒಳಗಾಗುತ್ತವೆ. ಅದರಲ್ಲೂ ವಿವಿಧ ಊರುಗಳಿಂದ ನಗರ ಬಸ್‌ಸ್ಟಾಂಡ್‌ಗೆ ಬಂದು ಹೋಗುವ ಬಸ್‌ಗಳಲ್ಲಿ ಸರ್ವೀಸ್‌ ಬಸ್‌ಗಳೇ ಅಧಿಕ. ಮೂರು ರಸ್ತೆಗಳಲ್ಲಿ ಲಘು ವಾಹನ, ದ್ವಿಚಕ್ರ ವಾಹನ ಅಡ್ಡ ಬಂದಾಗೆಲ್ಲ ಕರ್ಕಶವಾಗಿ ಹಾರ್ನ್ ಮೊಳಗಿಸಿಕೊಂಡು ಹೋಗುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.

ಪೊಲೀಸರ ಕಣ್ಣೆದುರೇ ಹಾರ್ನ್ ಕಿರಿಕಿರಿ
ಮೂರು ಮಾರ್ಗದಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬಂದಿ ರಸ್ತೆ ಮೇಲೆ ಓಡಾಡುವ ವಾಹನಗಳ ಮೇಲೆ ನಿಗಾ ವಹಿಸುತ್ತಾರೆ. ಟ್ರಾಫಿಕ್‌ ಜಾಮ್‌ ಆದಾಗಲೆಲ್ಲ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಸಿಸಿ ಕೆಮರಾ ಕೂಡ ಇದ್ದು ಹೆಲ್ಮೆಟ್‌ ಧರಿಸದೇ ಓಡಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಗಳು ಇಲ್ಲಿ ಪೊಲೀಸ್‌ ಇಲಾಖೆಯಿಂದ ನಡೆಯುತ್ತಿದೆ. ಆದರೆ ಪೊಲೀಸರ ಕಣ್ಣೆದುರೇ ಕರ್ಕಶ ಹಾರ್ನ್ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುವ ಬಸ್‌ನವರ ವಿರುದ್ಧ ಕ್ರಮ ವಹಿಸಲು ಇವರಿಗೂ ಅಧಿಕಾರವಿಲ್ಲ.

Advertisement

ವಾಹನಗಳ
ಅಡ್ಡಾದಿಡ್ಡಿ ಓಡಾಟ
ಕಾರ್ಕಳ ನಗರ ತೀರಾ ಕಿರಿದಾಗಿದೆ. ನಗರದೊಳಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಗಳಿಲ್ಲ. ನಗರಕ್ಕೆ ಬರುವ ಸಾರ್ವಜನಿಕರು ರಸ್ತೆ ಬದಿ, ಅಂಗಡಿಗಳ ಮುಂದೆ ರಸ್ತೆಯಲೇ ವಾಹನ ನಿಲ್ಲಿಸಿ ತೆರಳುತ್ತಾರೆ. ರಸ್ತೆ ಕಿರಿದಾದ್ದರಿಂದ ಲಘು ವಾಹನಗಳು, ದ್ವಿಚಕ್ರ ಸವಾರರು, ಪಾದಚಾರಿಗಳು ಪೇಟೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿರುತ್ತಾರೆ. ಆಗ ಬಸ್‌ನವರು ಹಲವು ನಿಮಿಷಗಳ ಕಾಲ ಹಾರ್ನ್ ಮೊಳಗಿಸುತ್ತಾರೆ. ಇದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಕಾನೂನು ಕ್ರಮ ಅಗತ್ಯ
ಕಾರ್ಕಳದಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆಯಿಲ್ಲ. ನಗರ ಠಾಣೆ ಪೊಲೀಸ್‌ ಸಿಬಂದಿ ಇಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಣೆ ನಡೆಸುತ್ತಾರೆ. ವಾಹನ ಸಂಚಾರ ಕಾನೂನು ಸುವ್ಯವಸ್ಥೆ ಬಗ್ಗೆಯೂ ಅವರೇ ಇಲ್ಲಿ ನೋಡಿಕೊಳ್ಳುತ್ತಿದ್ದಾರೆ. ಸಾರಿಗೆ ಇಲಾಖೆ ಕರ್ಕಶ ಹಾರ್ನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫ‌ಲವಾಗಿದೆ. ಜಾಗೃತಿಯೂ ಇಲ್ಲದಾಗಿದೆ. ಹಾರ್ನ್ ಕಿರಿಕಿರಿಯಿಂದ ಅಪಘಾತಗಳು ಸಂಭವಿಸುತ್ತವೆ. ನಗರದಲ್ಲಿ ವ್ಯಾಪಕವಾಗಿರುವ ವಾಹನ ಮಾಲಿನ್ಯ ತಡೆಗೆ ಶಿಸ್ತು ಕಾನೂನು ಕ್ರಮದ ಅಗತ್ಯವಿದ್ದು ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿ ನಿಯಂತ್ರಿಸಬೇಕಿದೆ.

ಆರ್‌ಟಿಒ ಅಧಿಕಾರಿಗಳೇ ಕ್ರಮ ವಹಿಸಲಿ
ನಗರದಲ್ಲಿ ವಾಹನ ಶಬ್ದ ಮಾಲಿನ್ಯವಿರುವ ಬಗ್ಗೆ ದೂರುಗಳಿವೆ. ಟ್ರಾಫಿಕ್‌ ಸಮಸ್ಯೆ ಉಂಟಾದಾಗ ನಮ್ಮ ಸಿಬಂದಿ ಕ್ರಮ ವಹಿಸುತ್ತಾರೆ. ವಾಹನಗಳ ಶಬ್ದ ಮಾಲಿನ್ಯಕ್ಕೆ ಸಂಬಂದಿಸಿ ಆರ್‌ಟಿಒ ಇಲಾಖೆ ಅಧಿಕಾರಿಗಳೇ ಕ್ರಮವಹಿಸಬೇಕು
-ಪ್ರಸನ್ನಕುಮಾರ್‌ , ಸಬ್‌ಇನ್‌ಸ್ಪೆಕ್ಟರ್‌ ನಗರ ಠಾಣೆ , ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next