ಮಹಾನಗರ: ಮೀನು ಉತ್ಪಾದನೆಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು, ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿ ಉತ್ತಮ ಆದಾಯ ಗಳಿಸಬಹುದು ಎಂದು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಸ್ತರಣ ನಿರ್ದೇಶಕ ಡಾ| ಶಿವಪ್ರಕಾಶ್ ಎಸ್. ಎಂ. ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಮತ್ತು ಭಾರತ ಸಾಗರ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಪರಿಸರ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಜರಗಿದ ‘ಪರಿಸರ ಸ್ನೇಹಿ ಸುಸ್ಥಿರ ಮೀನು ಕೃಷಿ’ ಎಂಬ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಶಿವಕುಮಾರ್ ಮಗದ ಮಾತನಾಡಿ, ದೇಶದಲ್ಲಿ ಪ್ರಸ್ತುತ 11.5 ಮಿಲಿಯನ್ ಟನ್ ಮೀನಿನ ಉತ್ಪಾದನೆಯಾಗುತ್ತಿದ್ದು, ಮೀನು ಮತ್ತು ಮೀನಿನ ಉತ್ಪನ್ನಗಳ ರಫ್ತಿನಿಂದ 38,000 ಕೋಟಿ ಆದಾಯ ಗಳಿಸುತ್ತಿದೆ. ತಲಾ ಲಭ್ಯತೆ 11.5 ಕೆ.ಜಿ.ಯಷ್ಟಿದೆ. ಮೀನಿನ ಹೆಚ್ಚುವರಿ ಆವಶ್ಯಕತೆಯನ್ನು ಮೀನು ಕೃಷಿಯಿಂದ ಪಡೆಯಲು ಸಾಧ್ಯ ಎಂದರು. ಸಿಗಡಿ ಕೃಷಿಕ ಸನ್ನಿ ಡಿ’ಸೋಜಾ ಮಾತನಾಡಿ, ನಾನು ಬಯೋಫ್ಲಾಕ್ ತಂತ್ರಜ್ಞಾನದಲ್ಲಿ ಅರಿತುಕೊಂಡಿರುವ ಎಲ್ಲವನ್ನು ರೈತರಿಗೆ ಉಚಿತವಾಗಿ ತಿಳಿಸಿಕೊಡುತ್ತೇನೆ ಎಂದರು.
ಮೀನುಗಾರಿಕೆ ಉಪನಿರ್ದೇಶಕ ಮಹೇಶ್ ಕುಮಾರ್, ಕಾರ್ಯಕ್ರಮದ ಸಂಚಾಲಕ ಡಾ| ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ಡಾ| ಹರೀಶ್ ಶೆಣೈ ವಂದಿಸಿದರು.
ಸಿಗಡಿ ಕೃಷಿಗೆ ಅವಕಾಶ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಚ್ಚಿನ್‌ನ ಭಾರತ ಸಾಗರ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪ ನಿರ್ದೇಶಕ ಡಾ| ವಿಜಯಕುಮಾರ್ ಯರಗಲ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಿಗಡಿ ಕೃಷಿಗೆ ಉತ್ತಮ ಅವಕಾಶಗಳಿದ್ದು, ಕೃಷಿ ವಿಜ್ಞಾನ ಕೇಂದ್ರ ಮತ್ತು ಮೀನುಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿಗಳ ಸಹಾಯದಿಂದ ಉತ್ತಮ ಪ್ರಾಯೋಜನೆಗಳನ್ನು ಸಿದ್ಧಪಡಿಸಿ ಪ್ರಾಧಿಕಾರಕ್ಕೆ ಸಲ್ಲಿಸಲು ಕೋರಿದರು.