ಒಂದು ವಸ್ತು ನನ್ನದು, ಬೇರೆಯವರದಲ್ಲ, ಅದರ ಮೇಲೆ ಸಂಪೂರ್ಣ ಹಕ್ಕು ನನಗೇನೇ ಎಂಬ ಅಲಿಖಿತ ನಿಯಮಗಳು ಬೇರೂರಿದಾಗ ತಾನೇ ಈ ರೀತಿಯ ಸ್ವಭಾವ ಹುಟ್ಟೋದು?
ಈ ರೀತಿ ಆಗುತ್ತೆ ಅಂತ ಕೇಳಿದ್ದೆ. ಕಥೆ, ಕಾದಂಬರಿಗಳಲ್ಲಿ ಓದಿದ್ದೆ, ಧಾರಾವಾಹಿ, ಸಿನಿಮಾಗಳಲ್ಲಿ ನೋಡಿದ್ದೆ. ಪ್ರೀತಿಯಲ್ಲಿ ಬಿದ್ದವರು ಒದ್ದಾಡುವುದನ್ನು ನೋಡಿ, ಪ್ರೀತಿ ಪ್ರೇಮ ಅಂತ ಜಪಿಸೋರು ಹೀಗೆಲ್ಲಾ ನಡಕೋತಾರಾ? ಅವರ ವೇದನೆ ಹೀಗಿರುತ್ತಾ? ನನಗೂ ಎಂದಾದರೂ ಹೀಗೆಲ್ಲಾ ಆಗೋಕೆ ಸಾಧ್ಯಾನಾ? ಅಂತೆಲ್ಲಾ ಸಂಶಯಪಟ್ಟಿದ್ದೆ. ಈಗ, ನನ್ನ ಪ್ರಶ್ನೆಗಳೆಲ್ಲ ಮಾಯವಾಗಿವೆ. ಆ ಚಡಪಡಿಕೆ ನನಗೂ ಶುರುವಾಗಿದೆ.
ಜಾತಿ, ವಯಸ್ಸು, ಅಂತಸ್ತು, ಸೌಂದರ್ಯವನ್ನು ಮೀರಿದ ಪ್ರೀತಿ ನಿನ್ನದು. ಇಷ್ಟ ಅಂದರೆ ಅದು ಬರೀ ಇಷ್ಟಾನೇ. ಈ ಮೇಲೆ ಹೇಳಿದ ಯಾವ ವಿಷಯಗಳೂ ನಿನ್ನ ಪ್ರೀತಿಗೆ ಅಡ್ಡಬರಲಿಲ್ಲ. ಅಂಥಾ ಪ್ರೀತಿ ನಿನ್ನದು.ಇದನ್ನೇ ನಾನು ಹೆಚ್ಚಾಗಿ ಮನಸಾರೆ ಸ್ವೀಕರಿಸಿ ಇಷ್ಟಪಟ್ಟಿದ್ದು. ನಿನಗಿಂತಲೂ ಹೆಚ್ಚು ಇಷ್ಟಪಟ್ಟಿದ್ದು ಈ ನಿನ್ನ ಪ್ರೀತಿಯನ್ನು. ನೀನು ತೋರುವ ಪ್ರೀತಿಯ ಬಗೆಯೇ ಬೇರೆ.ಎಷ್ಟೋ ವ್ಯತ್ಯಾಸಗಳಿದ್ದು, ಮುಂದೆ ತೊಡಕುಗಳಾಗುತ್ತವೆಂದರೂ, ನೀನು ನಿನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ನಮ್ಮ ಪ್ರೀತಿಯ ಮಧ್ಯೆ ತೊಡಕುಗಳಿವೆ ಎಂದು ನಿನ್ನನ್ನು ತಾತ್ಸಾರ ಮಾಡಿದೆನೇ ಹೊರತು, ನಿನ್ನ ಪ್ರೀತಿಯನ್ನು ತಿರಸ್ಕರಿಸಿದ್ದಲ್ಲ. ನನ್ನ ಹೃದಯಾಂತರಾಳದಿಂದ ಸ್ವೀಕರಿಸಿದ್ದು ನಿನ್ನ ಅಚಲ ಪ್ರೀತಿಯನ್ನು ಹಾಗೂ ಅದನ್ನು ತೋರ್ಪಡಿಸುವ ಬಗೆಯನ್ನು. ನಿನಗೆ ಸೋಲದಿದ್ದರೂ, ಸೋತಿದ್ದು ಮಾತ್ರ ನಿನ್ನ ನಿರಂತರ ಪ್ರೀತಿಗೆ.ಅಂಥಾ ಶಕ್ತಿ ಇದೆ ಅದಕ್ಕೆ! ಹೊಂದಾಣಿಕೆಯಾಗಲ್ಲ ಎಂದು ನಿರ್ಗಮಿಸಿದರೂ, ನೀನು ಮನವೊಲಿಸಲು ತೋರಿದ ರೀತಿಯಿತ್ತಲ್ಲ; ಅದು ದೊಡ್ಡದು. ಅದರ ಮುಂದೆ ನನ್ನ ಆಟ ನಡೆಯಲೇ ಇಲ್ಲ.ಸಂಪೂರ್ಣವಾಗಿ ಶರಣಾದೆ ನಿನ್ನ ಪ್ರೀತಿಗೆ.
ಪ್ರೀತಿಯಲ್ಲಿರುವ ಪೊಸೆಸಿವನೆಸ್‌ಅನ್ನು ಎಷ್ಟು ಜನ ಇಷ್ಟಪಡ್ತಾರೋ ಗೊತ್ತಿಲ್ಲ. ನನಗ ಮಾತ್ರ ಅದು ತುಂಬಾ ತುಂಬಾ ಇಷ್ಟ. ಪೊಸೆಸಿವ್‌ನೆಸ್‌ನ ಹಿಂದಿರುವ ಪ್ರೀತಿಯನ್ನ ಗುರುತಿಸಿದರೆ ಅದು ನಿರ್ಬಂಧ ಅಥವಾ ಕಡಿವಾಣ ಅನಿಸಲ್ಲ. ಫೋನ್ ಅಥವಾ ಮೆಸೇಜ್ ಮಾಡದಿದ್ದಾಗ, ಇಲ್ಲಾ ನಿನ್ನ ಸಂದೇಶಗಳಿಗೆ ಉತ್ತರಿಸದಿದ್ದಾಗ, ಫೋನ್ ರಿಸೀವ್ ಮಾಡದಿದ್ದಾಗ, ನೀನು ಕೋಪಿಸಿಕೊಂಡು ಯಾಕೆ ಅಂತ ಕೇಳ್ತೀಯಲ್ಲಾ, ಅದರಲ್ಲಿ ಅಧಿಕಾರವಾಣಿಯಿದ್ದರೂ ಅದರ ಹಿಂದಿರುವ ಅರ್ಥವನ್ನು ಅರಿತಿದ್ದೇನೆ ಕಣೋ. ಕೋಪ ಮತ್ತು ಅಧಿಕಾರದ ಚಲಾವಣೆ ನಮ್ಮವರ ಮೇಲಷ್ಟೇ ಸಾಧ್ಯ. ಬೇರೆಯವರ ಮೇಲಲ್ಲವಲ್ಲ.
ಯಾಕೋ ಏನೋ, ಈಗೀಗ ಕೋಪ ಮತ್ತು ಅಧಿಕಾರದಲ್ಲಿ ಕೊಂಚ ಬೈದರೂ ಮನಸ್ಸಿಗೆ ಏನೋ ಹಿತ. ಒಂದು ವಸ್ತು ನನ್ನದು, ಬೇರೆಯವರದಲ್ಲ, ಅದರ ಮೇಲೆ ಸಂಪೂರ್ಣ ಹಕ್ಕು ನನಗೇನೇ ಎಂಬ ಅಲಿಖೀತ ನಿಯಮಗಳು ಬೇರೂರಿದಾಗ ತಾನೇ ಈ ರೀತಿಯ ಸ್ವಭಾವ ಹುಟ್ಟೋದು? ಅದಕ್ಕೇ ಹೇಳ್ಳೋದು ಕಣೋ: ನಿನಗಿಂತ,ನಿನ್ನ ಪ್ರೀತಿಯೇ ಬಲು ಜೋರಿದೆ ಅಂತ! ನಿನ್ನ ಪ್ರೀತಿಯಲ್ಲಿರುವ ನಶೆಯೇ ಸೊಗಸಾಗಿದೆ. ಪೂರಾ ಪೂರಾ ಸೋತು ಹೋಗಿದ್ದೇನೆ ನಿನ್ನ ಪ್ರೀತಿಗೆ. ಈ ತರಹದ ಅನುಭವ ಅಪರೂಪವೇ ಸರಿ. ಯಾರ ಕಣ್ಣೂ ತಾಕದಿರಲಿ ಈ ನಮ್ಮ ಪ್ರೀತಿಗೆ.
ಇಂತಿ ನಿನ್ನ ಪೂವು
ಮಾಲಾ ಅಕ್ಕಿಶೆಟ್ಟಿ