Advertisement
ಮಹಿಳೆಯರು ಭಾನುವಾರ ಬೆಳಗ್ಗೆ ದೇಗುಲ ಪ್ರವೇಶಿಸಲು ಆಗಮಿಸಿದಾಗ ಪ್ರತಿಭಟನಾಕಾರರು ಅವರನ್ನು ತಡೆದಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದಾಗ ಘರ್ಷಣೆ ಉಂಟಾಗಿದ್ದು, ಜೀವ ಬೆದರಿಕೆಯಿಂದಾಗಿ ಮಹಿಳೆಯರು ನಿರ್ಗಮಿಸಿದ್ದಾರೆ. ಪ್ರತಿಭಟನಾಕಾರರು ಹಿಂಸಾಕೃತ್ಯಕ್ಕೆ ಇಳಿಯಬಹುದಾದ ಸಾಧ್ಯತೆಯಿದ್ದುದರಿಂದ ತಕ್ಷಣವೇ ಮಹಿಳೆಯರಿಗೆ ಸಮೀಪದ ಗಾರ್ಡ್ ರೂಮ್‌ನಲ್ಲಿ ರಕ್ಷಣೆ ಒದಗಿಸಲಾಯಿತು.
ಮಹಿಳೆಯರನ್ನು ದೇಗುಲಕ್ಕೆ ಕಳುಹಿಸುವಲ್ಲಿ ಸಿಪಿಎಂ ನೇತೃತ್ವದ ಸರ್ಕಾರದ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟೇ ಅಲ್ಲ, ಸರ್ಕಾರವೇ ಈ ಮಹಿಳೆಯರನ್ನು ಪೊಲೀಸರ ರಕ್ಷಣೆಯಲ್ಲಿ ದೇಗುಲಕ್ಕೆ ಕಳುಹಿಸುತ್ತಿದೆ ಎಂದು ಪಂದಳಂ ರಾಜಮನೆತನದ ಸದಸ್ಯರು ಆರೋಪಿಸಿದ್ದಾರೆ. ಹೈಕೋರ್ಟ್ ನೇಮಿಸಿದ ಮೂವರು ಸದಸ್ಯರ ಸಮಿತಿಯು ಈ ವಿಚಾರವನ್ನು ಪರಿಗಣಿಸಿ ವರದಿ ನೀಡಬೇಕು. ಅದಕ್ಕೆ ಅನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇದೇ ವೇಳೆ, ನಕ್ಸಲ್ ಮನಸ್ಥಿತಿಯ ಕೆಲವರು ಮಹಿಳೆಯರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.