Advertisement

ಆಂಜನೇಯನ ಮೇಲೆ ಆಂಧ್ರದ “ಅಧಿಕಾರ’! ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಂತೆ

07:11 AM Apr 10, 2021 | Team Udayavani |

ತಿರುಪತಿ: ಹಂಪಿ ಎಂಬುದೇ ಕಿಷ್ಕಿಂಧೆ, ಆಂಜನೇಯ ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ…!
ಇದು ಪುರಾಣ ಕಾಲದಿಂದಲೂ ಭಾರತೀಯರ ನಂಬಿಕೆ. ಹೀಗಾಗಿಯೇ ವನವಾಸ ಕಾಲದಲ್ಲಿ ಶ್ರೀರಾಮಚಂದ್ರ ಕರ್ನಾಟಕಕ್ಕೂ ಬಂದಿದ್ದರು ಎಂಬ ನಂಬಿಕೆಯೂ ಇದೆ. ಈ ನಂಬಿಕೆಯನ್ನೇ ಬುಡಮೇಲು ಮಾಡುವಂಥ ಪ್ರಯತ್ನವೊಂದು ನೆರೆಯ ಆಂಧ್ರಪ್ರದೇಶದಲ್ಲಿ ಆರಂಭವಾಗಿದೆ. ಆಂಜನೇಯ ಹುಟ್ಟಿದ್ದು, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಲ್ಲ. ತಿರುಪತಿಯಲ್ಲೇ ಎಂಬ ವಾದ ಎದ್ದಿದೆ. ಇದಕ್ಕೆ ಪೂರಕವೆಂಬಂತೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಸಮಿತಿಯೊಂದನ್ನು ರಚಿಸಿದ್ದು, ಅಧ್ಯಯನ ನಡೆಸಲು ಹೇಳಿದೆ. ಈ ಸಮಿತಿ ಈಗಾಗಲೇ ಅಧ್ಯಯನ ನಡೆಸಿದ್ದು, ಯುಗಾದಿ ದಿನವಾದ ಎ. 13ರಂದು ವರದಿ ನೀಡಲಿದೆ.

Advertisement

ಸಮಿತಿಯಲ್ಲಿ ಯಾರಿದ್ದಾರೆ?
ಪ್ರೊ| ಸನ್ನಿದಾನಂ ಸುದರ್ಶನ ಶರ್ಮ (ವೇದಿಕ್‌ ವಿ.ವಿ. ಕುಲಪತಿ), ಪ್ರೊ| ಮುರಳೀಧರ ಶರ್ಮ(ರಾಷ್ಟ್ರೀಯ ಸಂಸ್ಕೃತ ವಿ.ವಿ. ಕುಲಪತಿ), ಪ್ರೊ| ರಾಣಿಸದಾಶಿವ ಮೂರ್ತಿ, ಪ್ರೊ| ಜೆ. ರಾಮಕೃಷ್ಣ ಮತ್ತು ಪ್ರೊ| ಶಂಕರ ನಾರಾಯಣ, ಮೂರ್ತಿ ರೆಮಿಲ್ಲಾ (ಇಸ್ರೋ ವಿಜ್ಞಾನಿ), ವಿಜಯಕುಮಾರ್‌ (ಪುರಾತತ್ವ ಇಲಾಖೆಯ ಉಪ ನಿರ್ದೇಶಕ), ವಿಭೂಷಣ ಶರ್ಮ (ಉನ್ನತ ವೇದಗಳ ಅಧ್ಯಯನದ ಯೋಜನಾಧಿಕಾರಿ) ಈ ಸಮಿತಿಗೆ ಸಂಚಾಲಕರಾಗಿದ್ದಾರೆ.

ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಾನ ಎಂಬುದಕ್ಕೆ ಎಲ್ಲ ಆಯಾಮಗಳಲ್ಲಿಯೂ ಅಧ್ಯಯನ ನಡೆಸಲಾಗಿದೆ. ಈ ಸಂಬಂಧ ಯುಗಾದಿ ದಿನವೇ ಪೂರಕ ದಾಖಲೆಗಳ ಜತೆಗೆ ಬಿಡುಗಡೆ ಮಾಡುತ್ತೇವೆ ಎಂದು ಟಿಟಿಡಿಯ ಅಧಿಕಾರಿ ಡಾ|ಕೆ.ಎಸ್‌.ಜವಾಹರ್‌ ರೆಡ್ಡಿ ತಿಳಿಸಿದ್ದಾರೆ. ಖಗೋಳ, ಶಾಸನಶಾಸ್ತ್ರ, ಪುರಾಣಗಳ ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕರ ಮುಂದಿಡುತ್ತೇವೆ ಎಂದು ರೆಡ್ಡಿ ಹೇಳಿದ್ದಾರೆ.

ಶಿವ, ಬ್ರಹ್ಮ, ಬ್ರಹ್ಮಾಂಡ, ವರಹಾ, ಮತ್ಸ ಪುರಾಣಗಳು, ವೆಂಕಟಾಚಲ ಮಹತ್ಯಾಮ್‌, ವರಹಾಮಿಹಿರನ ಬೃಹತ್ ಸಂಹಿತಾಗಳನ್ನು ಅಧ್ಯಯನ ಮಾಡಿದ್ದೇವೆ. ಇದರಲ್ಲೂ ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲೇ ಆಂಜನೇಯ ಜನ್ಮತಾಳಿರುವ ಅಂಶಗಳಿವೆ ಎಂದು ಸಮಿತಿ ಕಂಡುಕೊಂಡಿದೆಯಂತೆ. ಅಷ್ಟೇ ಅಲ್ಲ, ಆಂಜನೇಯನ ತಾಯಿ ಅಂಜನಾದೇವಿ ಕೂಡ ಅಲ್ಲಿನ ಆಕಾಶ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದ್ದರು ಎಂದೂ ಈ ಸಮಿತಿ ಹೇಳಿದೆ.

ಇನ್ನೊಂದು ವಿಚಾರವೆಂದರೆ, ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ|ವಿಭೂಷಣ ಶರ್ಮ ಅವರ ಪ್ರಕಾರ, ಅಂಜನಾದ್ರಿ ಬೆಟ್ಟದ ಯಾವ ಸ್ಥಳದಲ್ಲಿ ಆಂಜನೇಯ ಜನ್ಮತಾಳಿದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ . ಆದರೂ ಬೆಟ್ಟದಲ್ಲಿ ಜನ್ಮ ತಾಳಿದ್ದು ಎಂಬ ಬಗ್ಗೆ ವೈಜ್ಞಾನಿಕ ಮತ್ತು ಶಾಸನಶಾಸ್ತ್ರಗಳ ಆಧಾರದಲ್ಲಿ ಸಾಕ್ಷ್ಯಗಳನ್ನು ಜನರ ಮುಂದಿಡುತ್ತಾರಂತೆ.

Advertisement

ತಿರುಮಲದಲ್ಲಿನ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳವೆಂಬ ವಾದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು, ಈ ಭಾಗದಲ್ಲಿ ಶ್ರೀರಾಮ ಬಂದು ತಿಂಗಳುಗಟ್ಟಲೇ ಇದ್ದದ್ದು, ತಿರುಗಾಡಿದ್ದರ ಬಗ್ಗೆ ಅನೇಕ ಪುರಾವೆಗಳಿವೆ. ಶ್ರೀರಾಮನಿಗಾಗಿ ಕಾಯ್ದು ಕುಳಿತಿದ್ದ ಶಬರಿ ಇದ್ದದ್ದು ಇಲ್ಲಿನ ಪಂಪಾವನವಾಗಿದೆ. ಅದೇ ರೀತಿ ಆನೆಗೊಂದಿಯಲ್ಲಿ ಚಿಂತಾಮಣಿ ಸೇರಿದಂತೆ ಋಷಿಮುಖ ಪರ್ವತ, ವಾಲಿ ಪರ್ವತ, ಸುಂದರ ಕಾಂಡ ಅಧ್ಯಾಯದ ಪ್ರಸ್ತಾಪ, ಐತಿಹಾಸಿಕ ಸ್ಮಾರಕಗಳು, ಪುರಾತನ ದೇವಸ್ಥಾನಗಳು ಇವೆ ಎಂದರು.

ಕಿಷ್ಕಿಂಧೆಯೇ ಹನುಮನ ಜನ್ಮಸ್ಥಳ: ಸಾಣಾಪುರೆ
ಕೊಪ್ಪಳ ಜಿಲ್ಲೆ ಕಿಷ್ಕಿಂಧೆ ಆಂಜನೇಯನ ಜನ್ಮಸ್ಥಳ ಎಂಬುದು ಶತಮಾನಗಳಿಂದ ನಂಬಿಕೊಂಡು ಬಂದಿರುವ ವಿಷಯ. ಇದಕ್ಕೆ ಪೂರಕವಾದ ಅನೇಕ ಕುರುಹುಗಳು, ಸ್ಮಾರಕಗಳು, ಐತಿಹ್ಯಗಳಿವೆ. ದೇಶದ ಮೂಲೆ ಮೂಲೆಗಳಿಂದ ಹನುಮ ಭಕ್ತರು ಕಿಷ್ಕಿಂಧೆಗೆ ಬರುವುದು ಇದು ಆಂಜ ನೇಯನ ಜನ್ಮಸ್ಥಳ ಎಂಬುದಕ್ಕೆ ಎಂದು ಕಿಷ್ಕಿಂಧೆ ಆಂಜನೇಯ ದೇವಸ್ಥಾನದ ವ್ಯವಸ್ಥಾಪಕ ಎಂ. ವೆಂಕಟೇಶ ಸಾಣಾಪುರ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next