Advertisement

ಗುಣ ನೋಡಿ ಮನೆ ಕಟ್ಟು, ಟೆನ್ಷನ್ ಇಲ್ಲದೆ ಮನೆ ಕಟ್ಟೋದು ಹೇಗೆ?

03:45 AM Jan 23, 2017 | Harsha Rao |

ಸಾಮಾನ್ಯವಾಗಿ ಜನ ಒಂದು ಮನೆ ಕಟ್ಟಿ ಸುಸ್ತಾದರೆ, ಮತ್ತೆ ಕೆಲವರು ಆರಾಮವಾಗಿ ತಮ್ಮ ದೈನಂದಿನ ಕಾರ್ಯಗಳನ್ನು ಮುಂದುವರಿಸುತ್ತಲೇ ಮನೆಯನ್ನೂ ಕಟ್ಟಿಬಿಟ್ಟಿರುತ್ತಾರೆ. 

Advertisement

ಇಂಥವರಿಗೆ ಮನೆ ಕಟ್ಟಿದ್ದು  ದೊಡ್ಡ ಹೊರೆ ಎಂದೆನಿಸುವುದಿಲ್ಲ. ಇದು ಹೇಗೆ? ಅನೇಕರಿಗೆ ತಲೆ ನೋವು ಎಂಬುದು, ಕೆಲವರಿಗೆ ಮಾತ್ರ ತಲೆ ನೋವಲ್ಲ ಏಕೆ? ಯಾವುದೇ ಕೆಲಸವನ್ನು ಮಾಡಬೇಕಾದರೆ, ನಾವು ಯಾವ ಮನೋಭಾವದಿಂದ ಕಾರ್ಯಪ್ರವೃತ್ತರಾಗುತ್ತೇವೆ ಎಂಬುದು ಮುಖ್ಯವಾಗುತ್ತದೆ. ಶುರುವಿನಲ್ಲೇ ಸಂಶಯದಿಂದ ಎಲ್ಲವನ್ನೂ ಎದುರು ನೋಡುತ್ತ, ಅನಾಹುತ ಆಗಿಯೇ ತೀರುತ್ತದೆ ಎಂಬ ಆಟಿಟ್ಯೂಡ್‌ ಇದ್ದರೆ, ಮನೆ ಕಟ್ಟುವಾಗ ಎದುರಾಗುವ ಅನೇಕ ಸಣ್ಣ ಪುಟ್ಟ ಹಾಗೂ ಕೆಲ ದೊಡ್ಡ ಸಮಸ್ಯೆಗಳೂ ಕೂಡ ಬಗೆಹರಿಯದವಂತೆ ಕಂಡುಬಂದು, ಜನಸಾಮಾನ್ಯರು ಮನೆ ಕಟ್ಟುವುದೇ ದೊಡ್ಡ ತಲೆನೋವು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಆಟಿಟ್ಯೂಡ್‌ ಸರಿಯಾಗಿರಲಿ
ಮನೆ ಕಟ್ಟುವಾಗ ಏನಾದರೂ ತೊಂದರೆ ಆಗದೆ ಇರುವುದಿಲ್ಲ ಎಂದು ನಂಬಿದರೆ ಸಣ್ಣ ಪುಟ್ಟ ತೊಂದರೆಗಳೂ ದೊಡ್ಡದಾಗಿಯೇ ಕಾಣುತ್ತವೆ. ಕಟ್ಟಡಕ್ಕೆ ಸಂಬಂಧಿಸಿದಂತೆ ಇರುವ ಎಲ್ಲರೂ ಮೋಸಮಾಡಲು ನೋಡುತ್ತಿರುತ್ತಾರೆ ಎಂಬ ದೃಷ್ಟಿಯಿಂದ ಎಲ್ಲರನ್ನೂ ನೋಡಿದರೆ ಟೆನÒನ್‌ ತಪ್ಪಿದ್ದಲ್ಲ. ಜೀವನದ ದೊಡ್ಡದೊಂದು ಸಾಧನೆ ಮಾಡುವಾಗ ಕಷ್ಟಗಳು ಕಾಡುವುದು ಸಹಜ. ದಿಟ್ಟ ನಿರ್ಧಾರ ತೆಗೆದುಕೊಂಡು ಮನೆ ಕಟ್ಟಲು ಶುರುಮಾಡಿದ ಮೇಲೆ “ನಡೆವನು ಎಡೆವಾನು, ಕುಳಿತವನು ಎಡವುನೆ?’ ಎಂದುಕೊಂಡು ಎಡರುತೊಡರುಗಳನ್ನು ಪರಿಹರಿಸಿಕೊಂಡು, ತೀರ ಮುಗ್ಗರಿಸಿ ಬೀಳದಂತೆ ಎಚ್ಚರವಹಿಸಿ ಮುಂದುವರಿದರೆ, ಹೆಚ್ಚಿಗಿನ ತಲೆ ಬಿಸಿ ಇರುವುದಿಲ್ಲ.

ಸಾಹಿತಿ ಕಲಾಕಾರರು ಮನೆ ಕಟ್ಟುವಿಕೆ
ಇತ್ತೀಚೆಗೆ ಯಶಸ್ವಿಯಾಗಿ ಮನೆ ಕಟ್ಟಿಕೊಂಡ ಸಾಹಿತಿ ಮಿತ್ರರೊಬ್ಬರು ತಮ್ಮ ಕ್ರಿಯಾತ್ಮಕ ಚಟುವಟಿಕೆ, ಬರವಣಿಗೆ, ಸೆಮಿನಾರ್‌ಗಳನ್ನು ಯತಾಪ್ರಕಾರ ಮುಂದುವರಿಸಿಕೊಂಡು ಹೆಚ್ಚಿಗೆ ತಲೆ ಬಿಸಿ ಮಾಡಿಕೊಳ್ಳದೆ ಆರಾಮವಾಗಿದ್ದರು. ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಖಂಡಿತ ಅವರ ಇನ್‌ವಾಲ್‌Ìಮೆಂಟ್‌ ಇತ್ತು. ಹೇಳಿ ಕೇಳಿ ಸಾಹಿತಿಗಳಿಗೆ ಸಾಕಷ್ಟು ಪುಸ್ತಕಗಳು ಕಪಾಟುಗಟ್ಟಲೆ ಇರುವುದರಿಂದ ಅದಕ್ಕೆ ಸೂಕ್ತ ಸ್ಥಳ ಕಲ್ಪಿಸುವುದರ  ಜೊತೆಗೆ ಬರವಣಿಗೆಗೆಂದು ಸ್ಥಳವನ್ನೂ ವಿಶೇಷವಾಗಿ ವಿನ್ಯಾಸ ಮಾಡುವ ರೀತಿಯಲ್ಲಿ ನಾಲ್ಕಾರು ಪ್ಲಾನ್‌ಗಳನ್ನು ಪರಿಶೀಲಿಸಿ ಮಾರ್ಪಾಡುಗಳನ್ನು ಹೇಳಿ ವಿನ್ಯಾಸ ಫೈನಲೈಸ್‌ ಮಾಡಿದರು. ಈ ಸಾಹಿತಿಯವರ ಮನೆಮಂದಿಯೂ ಕ್ರಿಯಾಶೀಲ ಕಲಾಕಾರರು ಹಾಗೂ ಅರಳುತ್ತಿರುವ ಪ್ರತಿಭೆಯಾದ ಕಾರಣ, ಮನೆ ಮಂದಿ ಬೆಳೆದಂತೆ ಮುಂದೆಯೂ ಅನುಕೂಲಕರವಾಗಿರುವಂತೆ ಹೆಚ್ಚುವರಿ ಸ್ಥಳಗಳನ್ನು ಪ್ಲಾನ್‌ ಮಾಡಲಾಯಿತು. ಮಾಮೂಲಿ ಮನೆ ಸೃಜನಶೀಲರಿಗೆ ಒಗ್ಗದ ಕಾರಣ, ಕಲಾತ್ಮಕ ವಿನ್ಯಾಸ ಮಾಡುವುದರ ಜೊತೆಗೆ ಬೇಸಿಗೆಯಲ್ಲಿ ತಂಪಾಗಿ ಹಾಗೂ ಚಳಿಗಾಲದಲ್ಲಿ ಬೆಚ್ಚಗಿರುವಂಥ ಡಿಸೈನ್‌ ಕಾರ್ಯರೂಪಕ್ಕೆ ತರಲಾಯಿತು. ಇಲ್ಲಿ ಗಮನಿಸ ಬೇಕಾದ ಮುಖ್ಯ ಸಂಗತಿ ಏನೆಂದರೆ, ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ತಮ್ಮನ್ನು ತೊಡಗಿಸಿಕೊಂಡ ಮಿತ್ರರು, ಅನಗತ್ಯವಾಗಿ ಎಲ್ಲೆದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ನಿರಾಳವಾಗಿದ್ದದ್ದು.

ವೇಸ್ಟ್‌ ಆಗುತ್ತೆ, ತಯಾರಾಗಿರಿ
ನೀವು ನಿಮ್ಮ ಮನೆ ಕಟ್ಟುವಾಗ ಸಂಜೆಯ ಹೊತ್ತು ಹೋದರೆ, ಒಂದಷ್ಟು ಸಿಮೆಂಟು ಕಲಸಿದ್ದು ಮಿಕ್ಕಿರುವುದು, ಇಟ್ಟಿಗೆ ಒಡೆದು ಬೀಸಾಡಿರುವುದು. ಟೈಲ್ಸ್‌ ತುಂಡರಿಸಿ ರಾಶಿ ಬಿದ್ದಿರುವುದು ಇತ್ಯಾದಿ ನೋಡಿರುತ್ತೀರಿ. ಮನೆ ಕಟ್ಟುವಾಗ ಒಂದಷ್ಟು ವೇಸ್ಟ್‌ ಆಗುವುದು ತಪ್ಪಿದ್ದಲ್ಲ.  ನೀವು ಬಟ್ಟೆ ಹೊಲೆಯಲು ಒಂದೆರಡು ಮೀಟರ್‌ ಬಟ್ಟೆ ಕೊಟ್ಟರೆ, ಟೈಲರ್‌ ಇಡೀ ಬಟ್ಟೆಯನ್ನು ಹೊಲಿದಿರುವುದಿಲ್ಲ. 

Advertisement

ಸಾಕಷ್ಟು ಭಾಗ ಅಂದರೆ, ಕಾಲು ಭಾಗದಷ್ಟು ಕೆಲವೊಮ್ಮೆ ತುಂಡುತುಂಡಾಗಿ ಹೋಗಿರುತ್ತದೆ. ಏನೂ ಮಾಡಲು ಆಗುವುದಿಲ್ಲ. ನಿಮ್ಮ ಬಟ್ಟೆಯ ಒಟ್ಟಾರೆ ಖರ್ಚಿನಲ್ಲಿ ಈ ವೇಸ್ಟೇಜ್‌ ಕೂಡ ಸೇರಿರುತ್ತದೆ. ಸಿಮೆಂಟ್‌ ಇರಲಿ, ಗ್ರಾಂಗೆ ಮೂರು ಸಾವಿರ ರೂಪಾಯಿಯ ಆಸುಪಾಸಿನಲ್ಲಿರುವ ಚಿನ್ನವನ್ನೂ ಕೂಡ ಎಷ್ಟೇ ಹುಶಾರಾಗಿ ಆಭರಣ ತಯಾರಿಸಿದರೂ, ಪ್ರತಿಶತ ನಾಲ್ಕಾರು ಕಳೆದುಹೋಗಿರುತ್ತದೆ. ಅಂತಹುದರಲ್ಲಿ ಮನೆ ಕಟ್ಟುವಾಗ ಸಾಕಷ್ಟು 
ವಸ್ತುಗಳ ವೇಸ್ಟ್‌ ಆಗುವುದನ್ನು ತಡೆಯಲು ಆಗುವುದಿಲ್ಲ. ಹಾಗಾಗಿ ನಿವೇಶನದ ಬಳಿ ಹೋದಾಗಲೆಲ್ಲ ಕುಶಲ ಕಾರ್ಮಿಕರಿಗೆ “ಹೆಚ್ಚು ವೇಸ್ಟ್‌ ಮಾಡಬೇಡಿ’ ಎಂದು ಎಚ್ಚರಿಕೆ ನೀಡುತ್ತಲೇ ಮನಸ್ಸಿನಲ್ಲಿ “ಇದೆಲ್ಲ ಸಹಜ’ ಎಂದು ಸಮಾಧಾನ ಹೆಳಿಕೊಳ್ಳುವುದರಿಂದ ನಮ್ಮ ಟೆನÒನ್‌ ಕಡಿಮೆ ಆಗುತ್ತದೆ.

ಟೆನÒನ್‌ ನಿಂದ ತೊಂದರೆ ಹೆಚ್ಚು
ಮನೆ ಕಟ್ಟುವಾಗ ಯಾವ ಟೀಮ್‌ ಅಂದರೆ ಗಾರೆ ಮೇಸಿŒ, ಬಾರ್‌ ಬೆಂಡರ್‌, ಬಡಗಿ ಇತ್ಯಾದಿ ಶುರುವಿನಲ್ಲಿ ಇದ್ದರೋ ಅವರೇ ಕೊನೇ ತನಕ ಇದ್ದರೆ, ನಾವು ಸಾಕಷ್ಟು ಸಂಯಮದಿಂದ, ಜಾಣತನದಿಂದ ನಿಭಾಯಿಸಿದ್ದೇವೆ ಎಂದೇ ಅಂದುಕೊಳ್ಳಬೇಕು. ಆದರೆ ಮನೆ ಕಟ್ಟುವಾಗ ಎಲ್ಲವೂ ಸರಿಬರುತ್ತದೆ ಎಂದೇನೂ ಇಲ್ಲ.  ಸ್ವಲ್ಪ ಕ್ರಿಯಾಶೀಲ ವಿನ್ಯಾಸ ನೀಡಿದರೆ, ಮಾಮೂಲಿ ಕೆಲಸಗಳನ್ನು ಮಾಡಿ – ಅದೇ ಲಾಭದಾಯಕ ಎಂದು ನಿರ್ಧರಿಸಿರುವ ಕುಶಲ ಕರ್ಮಿಗಳು “ರೇಟ್‌ ಗಿಟ್ಟಲ್ಲ’ ಎಂದು ಪರಾರಿಯಾಗುವುದು ಸಹಜ. ಇಲ್ಲ “ಈ ಕೆಲಸ ನಮಗೆ ಗೊತ್ತೇ ಇಲ್ಲ’ ಎಂದು ರಗಳೆ ತೆಗೆಯುವುದೂ ಇದ್ದದ್ದೇ. ಆದರೆ ಇದೆಲ್ಲವನ್ನೂ ನಾವು ಸಹಜ ಎಂದೇ ಪರಿಗಣಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು. 

ಕೆಲವೊಮ್ಮೆ ದುಡುಕಿದರೆ, ಟೆನÒನ್‌ ಹೆಚ್ಚಾಗುತ್ತಿದೆ ಎಂದು ನಾವು ನಿರ್ಧರಿಸಿದ್ದನ್ನೇ ಬದಲಾಯಿಸಿದರೆ ಇಲ್ಲ ಕಳಪೆ ಕಾಮಗಾರಿಯನ್ನು ಒಪ್ಪಿದರೆ, ಮುಂದೆ ತೊಂದರೆ ಆಗಬಹುದು. ಎಲ್ಲ ಕ್ಷೇತ್ರಗಳಲ್ಲಿ ಮ್ಯಾನೇಜ್‌ ಮಾಡುವಂತೆಯೇ ಮನೆ ಕಟ್ಟುವಾಗಲೂ ಸೂಕ್ತ ದಾರಿಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಕೋಪದಿಂದ ಕಾರ್ಯನಿರ್ವಹಿಸಲು ಹೋಗಿ ಅನಗತ್ಯ ತೊಂದರೆಗಳನ್ನೂ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. “ಮುಳ್ಳಿನಿಂದ ತೆಗೆಯಬೇಕಾದ್ದಕ್ಕೆ ಕೊಡಲಿಯ ಪ್ರಯೋಗ ಮಾಡಬಾರದು’ ಒಮ್ಮೆ ಗಾರೆಯವರೊಬ್ಬರು ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ, ಗುಣಮಟ್ಟ ಸರಿಯಾಗಿಲ್ಲ ಎಂದು ಕಂಡುಬಂದಾಗ, ಮನೆ ಯಜಮಾನರು ಆತನನ್ನು ಮಾತ್ರ ಅವರ ಮನೆಕಟ್ಟುವ ಜಾಗಕ್ಕೆ ಬಾರದಂತೆ ಮಾಡಿ, ಉಸ್ತುವಾರಿ ಹೊತ್ತಿದ್ದ ಮೇಸಿŒಯೊಂದಿಗೆ ಜಗಳ ಮಾಡಿಕೊಳ್ಳಲಿಲ್ಲ.  ಹೀಗೆ ತೊಂದರೆ ಎಲ್ಲಿದೆ ಎಂದು ಗಮನಿಸಿ ಅಲ್ಲಿಯೇ ನಿವಾರಿಸಿದರೆ ಅನಗತ್ಯ ಕಿರಿಕಿರಿಗಳು ತಪ್ಪುತ್ತವೆ. 

ಜೀವನದಲ್ಲಿ ಯಾವುದೇ ಕೆಲಸ ಮಾಡಲು ಹೋದರೂ ಒಂದಷ್ಟು ತೊಂದರೆ ತಪ್ಪಿದ್ದಲ್ಲ. ಅದರಲ್ಲೂ ದೊಡ್ಡ ಮಟ್ಟದ ಕೆಲಸವಾದ ಮನೆ ಕಟ್ಟುವಿಕೆಯಲ್ಲೂ ಎಲ್ಲವೂ ಸರಾಗವಾಗಿರುತ್ತದೆ ಎಂದೇನೂ ಇಲ್ಲ. ಸರಿಯಾದ ಮನೋಭಾವದಿಂದ, ಹುಷಾರಾಗಿ ಹೆಜ್ಜೆ ಇಟ್ಟು ಸರಾಗವಾಗಿ ಎನ್ನುವ ರೀತಿಯಲಿ ಮನೆ ಕಟ್ಟಿಕೊಂಡವರೂ ಇದ್ದಾರೆ.    

ಹೆಚ್ಚಿನ ಮಾತಿಗೆ:98441 32826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next