ನವದೆಹಲಿ: ಸರಕಾರ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಅಂಗೀಕರಿಸಬಹುದೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಡಾ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿದೆ. ಈ ಸಮಿತಿಯ ಶಿಫಾರಸ್ಸನ್ನು ಕರ್ನಾಟಕ ಸರಕಾರ ಅಂಗೀಕರಿಸಿದರೆ ತುಳು ಎಂಟನೇ ಪರಿಚ್ಛೇದವನ್ನು ಸೇರಿ ಆ ಭಾಷೆ ಅಭಿವೃದ್ಧಿಯಾಗುತ್ತದೆ ಎಂದು ದೆಹಲಿ ತುಳುಸಿರಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.
ಅವರು ಏ.2 ರಂದು ದೆಹಲಿ ತುಳು ಸಿರಿ ಆಯೋಜಿಸಿದ ಕರಾವಳಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ತುಳು ಬಂಧುಗಳು ಎಂದಿಗೂ ಕನ್ನಡದ ವಿರೋಧಿಗಳಾಗಿರಲೇ ಇಲ್ಲ. ತುಳುವರು ಕನ್ನಡದ ಅಭಿವೃದ್ಧಿಗೆ ವಿಶೇಷವಾಗಿ ದುಡಿದಿದ್ದಾರೆ. ಅದನ್ನು ಕನ್ನಡಿಗರೂ ಗುರುತಿಸಿದ್ದಾರೆ. ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಚೇದದದಲ್ಲಿ ಸ್ಥಾನ ಸಿಗಬೇಕೆಂಬ ತುಳುವರ ಬೇಡಿಕೆಯನ್ನು ಕರ್ನಾಟಕ ಸರಕಾರವೇ ಶಿಫಾರಸ್ಸಿನೊಂದಿಗೆ ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿದೆ. ದೆಹಲಿ ತುಳು ಸಿರಿಯೂ ಅದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದೆ ಎಂದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ವ ಪ್ರಖ್ಯಾತ ಕಾಂತಾರ ಸಿನೆಮಾ ಖ್ಯಾತಿಯ ಮಾನಸಿ ಸುಧೀರ್ ಮಾತಾನಾಡಿ, ಕರಾವಳಿಯವರ ಜೀವನ ಕ್ರಮವೇ ಭಿನ್ನವಾಗಿದ್ದು, ಅದು ಅವರ ಸಂಸ್ಕೃತಿಯಲ್ಲಿ ಎದ್ದು ಕಾಣುತ್ತದೆ. ಕರಾವಳಿಯವರ ಭಾಷೆ, ಭೂತಾರಾಧನೆ, ವೇಷ ಭೂಷಣಗಳು ಎಲ್ಲವೂ ಗಮನಾರ್ಹವಾಗಿದೆ ಎಂದರು.
ಈ ವಿಶಿಷ್ಟ ಅಂಶಗಳನ್ನು ರಿಷಭ್ ಶೆಟ್ಟಿ ಸೂಕ್ಷ್ಮವಾಗಿ ಗಮನಿಸಿ ಕಾಂತಾರ ಸಿನೆಮಾದಲ್ಲಿ ಬಹಳ ಅದ್ಭುತವಾಗಿ ಹಿಡಿದಿಟ್ಟರು. ಅದರಿಂದ ಕರಾವಳಿ ಸಂಸ್ಕೃತಿಗೆ ವಿಶ್ವಮನ್ನಣೆ ದೊರಕಿದೆ ಎಂದ ಅವರು, ಕರಾವಳಿಯ ಉದ್ದಗಲಕ್ಕೂ ಇರುವ ವಿಶೇಷ ರೀತಿಯ ಆರೋಗ್ಯಕರ ವ್ಯಂಜನಗಳನ್ನು ನೆನಪಿಸಿಕೊಂಡರು ಹಾಗೂ ಭಾಷಾ ಬಾಂಧವ್ಯ, ಸಾಮಾಜಿಕ ಸಾಮರಸ್ಯದ ವಿಶೇಷತೆಯ ಒತ್ತು ಕೊಡುವ ನಿಟ್ಟಿನಲ್ಲಿ ತನ್ನ ಕೆಲವು ಅನುಭವಗಳನ್ನು ಸೊಗಸಾಗಿ ಹಂಚಿಕೊಂಡರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಗಳಾದ ಈಶ್ವರ ಮಡಿವಾಳ್, ಕರಾವಳಿಯ ಸಾಮಾಜಿಕ ಇತಿಹಾಸಗಳನ್ನು ನೆನಪಿಸಿಕೊಂಡರು. ಜೆ.ಎನ್,ಯು. ನ ಕನ್ನಡ ಪೀಠದ ಅಧ್ಯಕ್ಷ ಪ್ರೊ. ವಿಶ್ವನಾಥ,ಕರಾವಳಿಯ ಅಡುಗೆ ಹಾಗೂ ಅಡುಗೆ ಭಟ್ಟರ ಕೈ ರುಚಿ ವಿಶ್ವ ಪ್ರಸಿದ್ಧ ಎಂದು ಹೇಳಿದರು.
ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕರಾವಳಿ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮಣ್ಣಿನ ಗುಣ, ನೀರಿನ ಗುಣ ವಾತಾವರಣದಿಂದಾಗಿ ಕಂಗು, ತೆಂಗು, ವಿಶೇಷ ಬಗೆಯ ತರಕಾರಿ, ಸೂಜಿ ಮಲ್ಲಿಗೆ ಜಾಜಿಯಂತಹ ಹೂವುಗಳ ಬಗ್ಗೆ ಸಂಕ್ಷಿಪ್ತವಾಗಿ ಕೆಲವು ಸೂಕ್ಷ್ಮಗಳನ್ನು ತೆರೆದಿಟ್ಟರು.
ತುಳುಸಿರಿಯ ಉಪಾಧ್ಯಕ್ಷೆ ಮಾಲಿನಿ ಪ್ರಹ್ಲಾದ್ ಸ್ವಾಗತಿಸಿದರು. ಕಾರ್ಯದರ್ಶಿ ಉಡುಪಿ ಶ್ರೀಹರಿ ಭಟ್ ವಂದಿಸಿದರು. ಪೂಜಾರಾವ್ ಕರಾವಳಿಯ ಎಲ್ಲಾ ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸ್ಥಳೀಯ ಕರಾವಳಿ ಕಲಾವಿದರಿಂದ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಪ್ರದರ್ಶನದೊಂದಿಗೆ ಸಭೆ ಕೊನೆಗೊಂಡಿತು.
ದೊಡ್ಡ ಸಂಖ್ಯೆಯಲ್ಲಿ ಕರಾವಳಿಯ ಜನರು ತುಂಬು ಉತ್ಸಾಹದಿಂದ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಉಡುಪಿ ಶ್ರೀಹರಿ ಭಟ್