ಇತ್ತೀಚೆಗೆ ಸತತವಾಗಿ ವಾರಕ್ಕೆ ನಾಲ್ಕೈದು ಸಿನಿಮಾಗಳಂತೆ ಕನ್ನಡ ಚಿತ್ರಗಳು ಬಿಡುಗಡೆಯಾಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದ ವಿಚಾರ ನಿಮಗೆ ಗೊತ್ತೇ ಇದೆ. ಆದರೆ, ಈ ವಾರ ಅಂದರೆ ಜೂನ್ 8 ರಂದು ಎಷ್ಟು ಸಿನಿಮಾಗಳು ತೆರೆಕಾಣುತ್ತವೆ ಎಂದರೆ ಸದ್ಯದ ಉತ್ತರ ಎರಡು. ಹೌದು, ಸದ್ಯಕ್ಕೆ ಎರಡೇ ಎರಡು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಹೊಸಬರ “ಶಿವು ಪಾರು’ ಹಾಗೂ “ಶತಾಯ ಗತಾಯ’ ಚಿತ್ರಗಳು ಜೂನ್ 8 ರಂದು ಬಿಡುಗಡೆಯಾಗಲಿದೆ. ಎಲ್ಲಾ ಓಕೆ, ಏಕಾಏಕಿ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವೇನು ಎಂದರೆ “ಕಾಲಾ’ ಎಂಬ ಉತ್ತರ ಬರುತ್ತದೆ. ರಜನೀಕಾಂತ್ ಅವರ “ಕಾಲಾ’ ಚಿತ್ರ ಜೂನ್ 8 ರಂದು ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುವ ವೇಳೆ ಒಂದಷ್ಟು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕುವುದು ಸಹಜ.
ದೊಡ್ಡ ಸಿನಿಮಾಗಳ ಹವಾಕ್ಕೆ ಕೊಚ್ಚಿ ಹೋಗುವುದು ಬೇಡ ಎಂಬ ಕಾರಣಕ್ಕೆ ಬಿಡುಗಡೆ ಮಾಡದಿರುವ ನಿರ್ಧರಿಸುತ್ತವೆ. ಈ ವಾರವೂ ಅನೇಕ ಕನ್ನಡ ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಲು “ಕಾಲಾ’ ಸಿನಿಮಾ ಕಾರಣ ಎನ್ನಲಾಗಿದೆ. ಈ ನಡುವೆಯೇ “ಕಾಲಾ’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಹೇಳಿವೆ. ಬಿಡುಗಡೆಯನ್ನು ಪ್ರತಿಭಟಿಸುವುದಾಗಿಯೂ ಘೋಷಿಸಿಕೊಂಡಿವೆ.
ಒಂದು ವೇಳೆ ಪ್ರತಿಭಟನೆಯ ನಡುವೆಯೇ “ಕಾಲಾ’ ಬಿಡುಗಡೆಯಾದರೆ, ಸುಮ್ಮನೆ ತೊಂದರೆಗೆ ಯಾಕೆ ಎಂಬ ಕಾರಣಕ್ಕೆ ಅನೇಕ ಕನ್ನಡ ಸಿನಿಮಾಗಳು ಸೇಫ್ಗೇಮ್ ಆಡಿವೆ. ಅದೇ ಕಾರಣದಿಂದ “ಕಾಲಾ’ ಬಿಡುಗಡೆಯ, ಪ್ರತಿಕ್ರಿಯೆ ನೋಡಿಕೊಂಡು ತೆರೆಗೆ ಬರಲು ನಿರ್ಧರಿಸಿವೆ. ಒಂದು ವೇಳೆ ಈ ವಾರ “ಕಾಲಾ’ ಸಿನಿಮಾದ ಬಿಡುಗಡೆ ಇರದೇ ಇದ್ದಿದ್ದರೆ, ಈ ವಾರವೂ ನಾಲ್ಕೈದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.
ಮುಖ್ಯಚಿತ್ರಮಂದಿರಗಳಲ್ಲಿ ವಾರಕ್ಕೊಂದು ಸಿನಿಮಾ: ಸಿನಿಮಾ ಮಂದಿಗೆ ಒಂದು ನಂಬಿಕೆ ಇದೆ. ಅದೇನೆಂದರೆ ಕೆ.ಜಿ.ರಸ್ತೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೇನೇ ಅದು ಶಾಸ್ತ್ರೋಕ್ತ ಬಿಡುಗಡೆ ಎಂಬುದು. ಆದರೆ, ಸದ್ಯ ಸ್ಪರ್ಧೆಯಲ್ಲಿ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಸಿಗಬೇಕಾದರೆ ವಾರಗಟ್ಟಲೇ ಕಾಯಬೇಕಾಗುತ್ತದೆ. ಹಾಗಂತ ಸಿಕ್ಕಿದ ಕೂಡಲೇ ಸಿನಿಮಾ ಯಶಸ್ಸು ಕಾಣುತ್ತದೆ ಎಂದಲ್ಲ.
ಅದಕ್ಕೆ ಉದಾಹರಣೆಯಾಗಿ ಮೂರ್‍ನಾಲ್ಕು ವಾರದಿಂದ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳು ಒಂದೇ ವಾರಕ್ಕೆ ಹೊರಬೀಳುತ್ತಿವೆ. ನೀವೇ ಸೂಕ್ಷ್ಮವಾಗಿ ಗಮನಿಸಿ, ಕೆ.ಜಿ.ರಸ್ತೆಯ ಮೇನಕ, ತ್ರಿವೇಣಿ, ಅನುಪಮ, ಮೂವೀಲ್ಯಾಂಡ್ ಚಿತ್ರಮಂದಿರಗಳಲ್ಲಿ ವಾರಕ್ಕೊಂದರಂತೆ ಸಿನಿಮಾಗಳು ಬಿಡುಗಡೆಯಾಗಿವೆ. ಅನುಪಮದಲ್ಲಿ ಮೇ 18 ಕ್ಕೆ “ಪಾರ್ಥಸಾರಥಿ’ ತೆರೆಕಂಡರೆ ಮೇ 25ಕ್ಕೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’,
ಜೂನ್ 01 “ಸೆಕೆಂಡ್ ಹಾಫ್’ ಚಿತ್ರಗಳು ಬಿಡುಗಡೆಯಾಗಿವೆ. ಪಕ್ಕದ ತ್ರಿವೇಣಿಯಲ್ಲೂ ಅಷ್ಟೇ ಮೇ 25ಕ್ಕೆ “ರಾಜ ಲವ್ಸ್ ರಾಧೆ’ ಬಿಡುಗಡೆಯಾದರೆ, ಜೂನ್ 01 ರಂದು “ವೆನಿಲ್ಲಾ’ ತೆರೆಕಂಡಿದೆ. ಈ ವಾರ ಆ ಚಿತ್ರಮಂದಿರಕ್ಕೆ “ಶಿವು-ಪಾರು’ ಬರುವುದಾಗಿ ಘೋಷಿಸಿಕೊಂಡಿವೆ. ಹಾಗಾಗಿ, ಇತ್ತೀಚೆಗೆ ಬಿಡುಗಡೆಯಾದ ಯಾವ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದು ವಾರದ ಖುಷಿಯನªನಷ್ಟೇ ಕಾಣುತ್ತಿವೆ.