Advertisement

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

11:52 AM Apr 28, 2024 | Team Udayavani |

ಕಳೆದ 24 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳದ ವರ್ಚಸ್ಸು ಇನ್ನೂ ಸಹ ಕಡಿಮೆಯಾಗಿಲ್ಲ. ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿಗೆ ಮುಂದಾಗಿದ್ದರೂ ಸಹ ಕೊನೆ ಕ್ಷಣದಲ್ಲಿ ಬಿಜೆಡಿ ಹಿಂದೆ ಸರಿದಿತ್ತು. ಹೀಗಾಗಿ ಈ ಬಾರಿಯೂ ರಾಜ್ಯದಲ್ಲಿ ಬಿಜೆಡಿ ಅತೀಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.

Advertisement

2 ದಶಕಗಳ ಕಾಲ ಸತತವಾಗಿ ಅಧಿಕಾರದಲ್ಲಿದ್ದೂ, ಆಡಳಿತ ವಿರೋಧಿ ಅಲೆಗೆ ಸಿಕ್ಕಿಕೊಳ್ಳದೇ ಜನಪ್ರಿಯತೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಇದಕ್ಕೆ ಸಂಪೂರ್ಣ ನೆರವಾಗಿರುವುದು ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ಅವರ ಆಡಳಿತ. ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸಹ ರಾಜ್ಯದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. 24 ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ಇದೀಗ 3ನೇ ಸ್ಥಾನಕ್ಕೆ ಕುಸಿದಿದ್ದು, ಈ ಬಾರಿ ತಾನು ಪಡೆದುಕೊಳ್ಳುವ ಮತವನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.

ಬಿಜೆಡಿಯೇ ಫೇವರಿಟ್‌: ಒಡಿಶಾದಲ್ಲಿ 4 ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷವೇ ಮೇಲುಗೈ ಸಾಧಿಸಲಿದೆ. ಕಳೆದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ನವೀನ್‌ ನೇತೃತ್ವದ ಪಕ್ಷ ಈ ಬಾರಿ ತನ್ನ ಈ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಒಡಿಶಾದಲ್ಲಿ 4 ಕೋಟಿಯಷ್ಟು ಜನರಿದ್ದು, ಇದರಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಜನರು ಬಿಜೆಡಿಯ ಕಾರ್ಯಕರ್ತರು ಎಂಬುದು ಪಕ್ಷದ ಹೆಗ್ಗಳಿಕೆ. ಇದಲ್ಲದೇ ರಾಜ್ಯದಲ್ಲಿ ಮಹಿಳಾ ಸಶಕ್ತೀಕರಣಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿರುವ ಪಕ್ಷ ಮಹಿಳಾ ವೋಟ್‌ ಬ್ಯಾಂಕನ್ನು ಸಹ ಪಕ್ಕಾ ಮಾಡಿಕೊಂಡಿದೆ. ಇದಕ್ಕೆಲ್ಲ ಕಾರಣವಾಗಿರುವುದು ಕಳೆದ 24 ವರ್ಷಗಳಲ್ಲಿ ಆಡಳಿತ ನಡೆಸಿರುವ ನವೀನ್‌ ಅವರ ಕ್ಲೀನ್‌ ಇಮೇಜ್‌.

ಆದರೆ ಪಕ್ಷದಲ್ಲಿ ನವೀನ್‌ ಪಟ್ನಾಯಕ್‌ ಅವರನ್ನು ಹೊರತುಪಡಿಸಿದರೆ ಬೇರೊಬ್ಬ ಪ್ರಮುಖ ನಾಯಕ ಕಾಣಿಸಿಕೊಳ್ಳುವುದಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಪಕ್ಷ 100ಕ್ಕೂ ಹೆಚ್ಚು ಶಾಸಕರನ್ನು ಹೊಂದಿದೆ. ಆದರೂ ನವೀನ್‌ ಹೊರತುಪಡಿಸಿ ರಾಜ್ಯವನ್ನು ಮುನ್ನಡೆಸುವ ವರ್ಚಸ್ಸು ಬೇರೊಬ್ಬ ನಾಯಕರಿಗಿಲ್ಲ. ಇನ್ನು ಲೋಕಸಭೆ ಚುನಾವಣೆಯ ಜತೆಗೆ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಾಗಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಇದರಲ್ಲಿ ಸಾಕಷ್ಟು ಮಂದಿಗೆ ಟಿಕೆಟ್‌ ನೀಡಲಾಗಿಲ್ಲ. ಇವರು ಬಂಡಾಯವೆದ್ದರೆ, ಅದು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಪಡೆದುಕೊಳ್ಳುವ ಮತಗಳ ಮೇಲೂ ಪರಿಣಾಮ ಬೀರಬಹುದು.

ಬಿಜೆಪಿಗೆ ಮೋದಿ ಬಲ:  ಕೇಂದ್ರದಲ್ಲಿ 1 ದಶಕಗಳಿಂದ ಆಡಳಿತ ನಡೆಸಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ ಜಾರಿ ಮಾಡಿರುವ ಅಭಿವೃದ್ಧಿ ಯೋಜನೆಗಳೇ ಬಿಜೆಪಿಯ ಬಲವಾಗಿವೆ. 2009ರಿಂದಲೂ ಬಿಜೆಡಿಯ ಮಿತ್ರಪಕ್ಷವಾಗಿದ್ದ ಬಿಜೆಪಿ ರಾಜ್ಯದ ಚುನಾವಣೆಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಬಿಜೆಪಿಯ ವೋಟ್‌ ಗಳಿಕೆಯ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ಬಿಜೆಡಿಯ ಜತೆಗೆ ಮೈತ್ರಿ ಕಡಿದುಕೊಂಡ ಬಳಿಕ ಬಿಜೆಪಿ ಒಡಿಶಾದಲ್ಲೂ ಸಹ ತಮಿಳುನಾಡಿನಂತೆ ಪ್ರತ್ಯೇಕ ಹಾದಿಯಲ್ಲಿ ನಡೆಯಲು ಯತ್ನಿಸುತ್ತಿದೆ. ಹೀಗಾಗಿ ಪಕ್ಷದ ವಿಸ್ತಾರವೂ ಸಹ ಹೆಚ್ಚುತ್ತಿದೆ. ಇತ್ತೀಚೆಗೆ ಸಾಕಷ್ಟು ಪ್ರಚಾರದಲ್ಲಿರುವ ರಾಮಮಂದಿರ, ಯುಸಿಸಿ, ಸಿಎಎ ವಿಚಾರಗಳು ಬಿಜೆಪಿಯ ಕೈ ಹಿಡಿಯಬಹುದು. ಆದರೆ ರಾಜ್ಯದಲ್ಲಿ ಸ್ಥಳೀಯ ನಾಯಕರಿಲ್ಲ ದಿರುವುದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

Advertisement

ಕಾಂಗ್ರೆಸ್‌: ರಾಜ್ಯದಲ್ಲಿ ಕಾಂಗ್ರೆಸ್‌ ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿಲ್ಲ. 2019ರ ಚುನಾವಣೆಯ ಬಳಿಕ ವಿಪಕ್ಷ ಸ್ಥಾನವನ್ನು ಸಹ ಕಳೆದುಕೊಂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯುಪಿಎ ನೇತೃತ್ವದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೂ ಸಹ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿತ್ತು. ಕಾಂಗ್ರೆಸ್‌ ದೇಶದ ಅತ್ಯಂತ ಹಳೆಯ ಪಕ್ಷ ಮತ್ತು ದೇಶದಲ್ಲಿ ಎಲ್ಲ ಜನರಿಗೆ ಪರಿಚಯವಿದೆ ಎಂಬುದೊಂದೇ ಕಾಂಗ್ರೆಸ್‌ಗಿರುವ ಏಕೈಕ ಆಸರೆ. ಇದನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬಲ್ಲ ಸ್ಥಳೀಯ ನಾಯಕರ ಕೊರತೆ ಇದೆ. ಇದಲ್ಲದೇ ಸ್ಥಳೀಯ ನಾಯಕರಲ್ಲಿ ಇರುವ ವೈಮನಸ್ಯ ಕಾಂಗ್ರೆಸ್‌ಗೆ ಅಡ್ಡಿ ಮಾಡುವ ಸಾಧ್ಯತೆ ಇದೆ.

ಸ್ಪರ್ಧೆ ಹೇಗಿರಲಿದೆ?: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ಬಿಜೆಡಿ ನಡುವೆ ಮೈತ್ರಿ ಆಗಿಯೇ ಹೋಯಿತು ಎಂದು ಹೇಳಲಾಗಿತ್ತು. ಆದರೆ ಈ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಉಂಟಾದ ವೈಮನಸ್ಯದ ಕಾರಣ ಈ ಮೈತ್ರಿ ಮುರಿದು ಬಿದ್ದಿತು. ಹೀಗಾಗಿ ರಾಜ್ಯದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಬಿಜೆಡಿ ಸ್ಪರ್ಧೆ ಮಾಡುತ್ತಿವೆ. ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ 19 ಕ್ಷೇತ್ರಗಳಲ್ಲಿ, ಸಿಪಿಐ ಹಾಗೂ ಜೆಎಂಎಂ ತಲಾ 1 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಬಿಜೆಡಿಗೆ ನಾಯಕ ನವೀನ್‌ ಪಟ್ನಾಯಕ್‌ ಅವರ ಸಾಧನೆ ಟ್ರಂಪ್‌ ಕಾರ್ಡ್‌ ಆಗಿದ್ದರೆ, ಬಿಜೆಪಿಗೆ ಪ್ರಧಾನಿ ಮೋದಿ ಅವರ ಸಾಧನೆ ಕೈಹಿಡಿಯುವ ವಿಶ್ವಾಸವಿದೆ.

ಜಾತಿ ಲೆಕ್ಕಾಚಾರ ಹೇಗಿದೆ?: ಕರ್ನಾಟಕ, ಬಿಹಾರ, ಉತ್ತರ ಪ್ರದೇಶದಲ್ಲಿ ಜಾತಿ ಚುನಾವಣೆಯನ್ನು ನಿರ್ಧರಿಸುವಂತೆ ಒಡಿಶಾದಲ್ಲಿ ಜಾತಿ ನಿರ್ಣಾಯಕವಲ್ಲ. ಹಾಗೆಯೇ ಇಲ್ಲಿ ಧರ್ಮವೂ ಸಹ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಮುಸ್ಲಿಂ ಸಮುದಾಯದ ಪ್ರಮಾಣ ಇಲ್ಲಿ ಕನಿಷ್ಠವಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಶೇ.17ರಷ್ಟಿದ್ದು, ಪರಿಶಿಷ್ಠ ಪಂಗಡದ ಪ್ರಮಾಣ ಶೇ.24ರಷ್ಟಿದೆ. ಹಾಗೆಯೇ ಒಬಿಸಿ ಸಮುದಾಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಡಿಗೆ ಬೆಂಬಲವಾಗಿವೆ.

ಚುನಾವಣ ವಿಷಯಗಳು: 

ಕಳೆದ 24 ವರ್ಷಗಳಲ್ಲಿ ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ನಡೆಸಿರುವ ಕಳಂಕ ರಹಿತ ಆಡಳಿತ

10 ವರ್ಷಗಳಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ಮೋದಿ ಅವರ ಜನಪ್ರಿಯತೆ

ಬಿಜೆಪಿ ಹಾಗೂ ಕಾಂಗ್ರೆಸ್‌ನ ಸ್ಥಳೀಯ ನಾಯಕರಲ್ಲಿ ನಡೆಯುತ್ತಿರುವ ಒಳಜಗಳ, ಅಧಿಕಾರ ದಾಹ

ರಾಜ್ಯದಲ್ಲಿ ಜಾರಿ ಮಾಡಲಾಗಿರುವ ಮಹಿಳಾ ಸಶಕ್ತೀಕರಣ ಯೋಜನೆಗಳು, ನವೀನ್‌ ಜನಪ್ರಿಯತೆ

ಕೃಷಿ ಸಮಸ್ಯೆಗಳು, ಬಡತನ, ಆಗಾಗ್ಗೆ ಸಂಭವಿಸುವ ಪ್ರಕೃತಿ ವಿಕೋಪಕ್ಕೆ ಕೈಗೊಳ್ಳಬೇಕಾಗಿರುವ ಪರಿಹಾರ ಕ್ರಮಗಳು

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next