ಚಿಕ್ಕಬಳ್ಳಾಪುರ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಬಲವಾಗಿ ಟಿಕೆಟ್‌ಗೆ ಬಿಗಿ ಪಟ್ಟು ಹಿಡಿದಿರುವ ಪರಿಣಾಮ ಕಾಂಗ್ರೆಸ್ ಟಿಕೆಟ್ ಕಗ್ಗಂಟಾಗಿ ಪರಿಣಮಿಸಿದೆ.
ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಾಗದೆ ಮೋದಿ ಅಲೆಯಲ್ಲಿ ಸೋತ ಎಂ.ವೀರಪ್ಪ ಮೊಯ್ಲಿ ನಾಲ್ಕನೇ ಬಾರಿಗೆ ಈಗ ಕ್ಷೇತ್ರದಲ್ಲಿ ಸ್ಪರ್ಧಿಸಲು ದೆಹಲಿ ನಾಯಕರ ಕದ ತಟ್ಟಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಹಾಗೂ ಆನಂತರ ಕೂಡ ಮೊಯ್ಲಿಗಿಂತ ರಕ್ಷಾ ರಾಮಯ್ಯ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ ಹಲವು ದಿನಗಳಿಂದ ಮೊಯ್ಲಿ ದೆಹಲಿ ಮಟ್ಟದಲ್ಲಿ ಟಿಕೆಟ್‌ಗೆ ಕಸರತ್ತು ನಡೆಸುತ್ತಿರುವುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಂತಿಮ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್ ವರಿಷ್ಠರಿಗೆ ಸವಾಲಾಗಿದೆ.
ರಾಜ್ಯದಲ್ಲಿ ಹಿರಿಯ ತಲೆಗಳಿಗೆ ಕೊಕ್ ಕೊಡಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊಯ್ಲಿಗೆ ಟಿಕೆಟ್ ಕೊಡಲು ಒಪ್ಪದ ರಾಜ್ಯ ನಾಯಕರು ರಕ್ಷಾ ರಾಮಯ್ಯ ಹೆಸರು ಶಿಫಾರಸು ಮಾಡಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಎಚ್ಚೆತ್ತುಕೊಂಡಿರುವ ಮೊಯ್ಲಿ ಇದು ನನ್ನ ಕೊನೆಯ ಚುನಾವಣೆ.
ಚಿಕ್ಕಬಳ್ಳಾಪುರ ಟಿಕೆಟ್ ನನಗೆ ಬೇಕೆಂದು ಹಠ ಹಿಡಿದು ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ತರುವ ಕೆಲಸ ಮಾಡುತ್ತಿರುವ ಪರಿಣಾಮ ರಕ್ಷಾ ರಾಮಯ ಹೆಸರು ಅಂತಿಮಗೊಳ್ಳುವುದಕ್ಕೆ ಬ್ರೇಕ್ ಬಿದ್ದಿದೆ. ಈ ಮಧ್ಯೆ ಗೌರಿಬಿದನೂರು ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಕೂಡ ತಮ್ಮನ್ನು ಪರಿಗಣಿಸುವಂತೆ ಒತ್ತಡ ಹೇರುತ್ತಿದ್ದಾರೆ.