ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆ ಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದೆ. ಪಕ್ಷದ ಉನ್ನತ ಮೂಲಗಳ ಪ್ರಕಾರ ಈ ತಿಂಗಳ 6ರಿಂದ 10ರ ನಡುವೆ ಕನಿಷ್ಠ ಒಂದು ಡಜನ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಕೆಪಿಸಿಸಿಯಿಂದ ದಿಲ್ಲಿಗೆ ಕಳುಹಿಸಲಾಗಿರುವ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಒಬ್ಬರಂತೆ 10ರಿಂದ 12 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕೆಂಬ ಪ್ರಯತ್ನಗಳು ನಡೆದಿವೆ.
ಒಂದೆಡೆ ಬಿಜೆಪಿಯು ರಾಷ್ಟ್ರಮಟ್ಟ ದಲ್ಲಿ 195 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಮೂಲಕ ಲೋಕಸಮರಕ್ಕೆ ಮುನ್ನುಡಿ ಬರೆದಿದೆ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಮೇಲೆ ಒತ್ತಡ ಹೆಚ್ಚಿದೆ. ಕೊನೆಯ ಗಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡು ವುದರಿಂದ ವ್ಯವಸ್ಥಿತ ಪ್ರಚಾರಕ್ಕೆ ಸಮಯದ ಅಭಾವ ಉಂಟಾಗಿ ಸೋಲುವ ಪಾಠದಿಂದ ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್ ಈ ಸಲ ವಾದರೂ ಮುಂಚಿತವಾಗಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದರೆ ಹೋರಾಟ ನಡೆಸಬಹುದೆಂಬ ಲೆಕ್ಕಾಚಾರದಲ್ಲಿದೆ.
ಮೊದಲ ಕಂತಿನಲ್ಲಿ ಕ್ಷೇತ್ರಕ್ಕೆ ಒಬ್ಬರ ಹೆಸರು ಮಾತ್ರ ಶಿಫಾರಸು ಆಗಿರುವ ಹಾಗೂ ಪೈಪೋಟಿ ಇರುವ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದೆಂಬ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಚಿತ್ರ ದುರ್ಗ, ದಾವಣಗೆರೆ, ಶಿವಮೊಗ್ಗ, ವಿಜಯಪುರ, ಬೀದರ್, ರಾಯ ಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬಾಗಲಕೋಟೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರಬರಬಹುದು.