ಬೆಂಗಳೂರು: “ಇಲ್ಲಿ ಸಲ್ಲದವರು ಅಲ್ಲಿ ಸಲ್ಲುವರಯ್ನಾ’ ಎಂಬಂತೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಲವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಮನ್ನಣೆ ನೀಡಿವೆ.
ಪಕ್ಷಗಳ ಈ ನಡೆ ಕಾರ್ಯಕರ್ತರ ಮಟ್ಟದಲ್ಲಿ ಟೀಕೆ, ಅಪಹಾಸ್ಯಕ್ಕೆ ಕಾರಣವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಗೆ ಗುರಿಯಾಗಿದೆ. ಈ ಕಾರಣಕ್ಕಾಗಿಯೇ ಕೆಲವೆಡೆ ಅಸಮಾಧಾನವೂ ಸ್ಫೋಟಗೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋತ ಐವರಿಗೆ ಬಿಜೆಪಿ ಮಣೆ ಹಾಕಿದರೆ, ಮೂವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ರಾಜ್ಯದ ಚುನಾವಣ ಅಖಾಡದಲ್ಲಿ ಸೋತ ಒಟ್ಟು 8 ಜನರು ಈ ಬಾರಿ ಲೋಕಸಭಾ ಸಮರದಲ್ಲಿ ಕಾಣಿಸಿಕೊಂಡಿದ್ದಾರೆ.ಕಾಂಗ್ರೆಸ್‌ನಿಂದ ವಿಧಾನಸಭಾ ಟಿಕೆಟ್ ಪಡೆದು ಸೋತ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಬೆಳಗಾವಿಯಲ್ಲಿ ಅವಕಾಶ ಕಲ್ಪಿಸಿದೆ.
ಶಿರಸಿಯಲ್ಲಿ ಸೋತ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಉತ್ತರಕನ್ನಡದಲ್ಲಿ, ವರುಣಾದಲ್ಲಿ ಸೋತ ಸೋಮಣ್ಣಗೆ ತುಮಕೂರಿನಲ್ಲಿ, ಬಳ್ಳಾರಿಯಲ್ಲಿ ಸೋತ ಶ್ರೀರಾಮುಲು ಅವರಿಗೆ ಬಳ್ಳಾರಿ ಲೋಕಸಭಾದಲ್ಲಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸೋತಿದ್ದ ಡಾ| ಕೆ.ಸುಧಾಕರ್‌ಗೂ ಅವಕಾಶ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಚುನಾವಣೆ ಸ್ಪರ್ಧಿಸುತ್ತಿರುವವರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದ್ದಾರೆ. ಕಾಂಗ್ರೆಸ್‌ನಿಂದ ಜಯನಗರದ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಬೆಂಗಳೂರು ದಕ್ಷಿಣ, ಖಾನಾಪುರದಲ್ಲಿ ಸೋತ ಅಂಜಲಿ ನಿಂಬಾಳ್ಕರ್‌ಗೆ ಉತ್ತರ ಕನ್ನಡ ಹಾಗೂ ಹೊಳೆನರಸಿಪುರದಲ್ಲಿ ಸೋತ ಶ್ರೇಯಸ್ ಪಟೇಲ್‌ಗೆ ಹಾಸನದಲ್ಲಿ ಟಿಕೆಟ್ ನೀಡಲಾಗಿದೆ.