Advertisement
ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ಮೇರs…ನಲ್ಲಿ ರವಿವಾರ ಲೋಕಸಭೆ ಚುನಾವಣಾ ಪ್ರಚಾರದ ಕಹಳೆ ಮೊಳಗಿಸಲಿದ್ದಾರೆ. ಮೇರs… ಕ್ಷೇತ್ರದಲ್ಲಿ ಬಿಜೆಪಿಯು ರಾಮಾಯಣ ಧಾರಾವಾಹಿಯ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್‌ಗೆ ಟಿಕೆಟ್ ನೀಡಿದ್ದು, ಅವರ ಪರ ಮೋದಿ ಮತ ಯಾಚನೆ ನಡೆಸಲಿದ್ದಾರೆ. ಇತ್ತೀಚೆಗೆ ಎನ್‌ಡಿಎ ಜತೆ ಕೈಜೋಡಿಸಿದ ರಾಷ್ಟ್ರೀಯ ಲೋಕ ದಳದ ಅಧ್ಯಕ್ಷ ಜಯಂತ್ ಚೌಧರಿ ಅವರೂ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಚುನಾವಣ ರ್ಯಾಲಿಯಲ್ಲಿ ಮೀರತ್ ಮಾತ್ರವಲ್ಲದೇ, ಸುತ್ತಮುತ್ತಲಿನ ಬಾಘಪತ್, ಬಿಜ್ನೋರ್, ಮುಜಾಫರ್‌ನಗರ ಮತ್ತು ಕೈರಾನಾದ ಜನರೂ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷ ತಿಳಿಸಿದೆ.
Related Articles
Advertisement
ಎಪ್ರಿಲ್ 2ರಂದು ಪ್ರಧಾನಿ ಮೋದಿ ಉತ್ತರಾಖಂಡದ ರುದ್ರಾಪುರದಲ್ಲಿ ಚುನಾವಣ ರ್‍ಯಾಲಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಸಿಎಂ ಪುಷ್ಕರ್ ಸಿಂಗ್ ಧಾಮಿ ರುದ್ರಾಪುರಕ್ಕೆ ತೆರಳಿ ಸಿದ್ಧತೆ ಪರಿಶೀಲಿಸಿದ್ದಾರೆ. ಉತ್ತರಾಖಂಡದ 5 ಲೋಕಸಭಾ ಕ್ಷೇತ್ರಗಳಿಗೆ ಎ.19ರಂದು ಮತದಾನ ನಡೆಯಲಿದೆ. 2014ರಿಂದಲೂ ಈ ಎಲ್ಲ 5 ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲುವು ಸಾಧಿಸಿದೆ.
ರಾಜಸ್ಥಾನದಲ್ಲಿ ಅಮಿತ್ ಶಾ
ಉತ್ತರಪ್ರದೇಶದಲ್ಲಿ ಮೋದಿ ರ್ಯಾಲಿ ನಡೆದರೆ, ರಾಜಸ್ಥಾನ ದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ರವಿವಾರ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವ ಅವರು, ಸಂಜೆ 4 ಗಂಟೆಗೆ ಜೈಪುರದಲ್ಲಿ ರೋಡ್‌ಶೋ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ಕೃಷ್ಣಾನಗರದಲ್ಲಿ ದೀದಿ ಕಹಳೆ
ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಲೋಕಸಭೆ ಚುನಾವಣೆ ಪ್ರಚಾರ ರವಿವಾರ ಶುರುವಾಗಲಿದೆ. ಮಾ.14ರಂದು ಹಣೆಗೆ ಪೆಟ್ಟಾದ ಬಳಿಕ ದೀದಿ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದು, ರವಿವಾರದಿಂದ ಚುನಾವಣ ರಣಾಂಗಣಕ್ಕೆ ಧುಮುಕಲಿದ್ದಾರೆ. ನಾದಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಪರ ರ್ಯಾಲಿ ನಡೆಸುವ ಮೂಲಕ ಮಮತಾ ಅವರು ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ.
ಈ ವಾರ ಹೈದರಾಬಾದ್‌ನಲ್ಲಿ ರಾಹುಲ್, ಖರ್ಗೆ ಗುಡುಗು
ಹೈದರಾಬಾದ್‌ನ ತುಕ್ಕುಗುಡದಲ್ಲಿ ಭರ್ಜರಿ ಸಾರ್ವಜನಿಕ ಸಭೆಯೊಂದಿಗೆ ಎಪ್ರಿಲ್ ಮೊದಲ ವಾರದಿಂದ ಕಾಂಗ್ರೆಸ್‌ನ ಪ್ರಚಾರ ಕಾರ್ಯ ಆರಂಭವಾಗಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಕಾರ್ಯಕ್ರಮದಲ್ಲಿ ಪಕ್ಷದ ಪ್ರಣಾಳಿಕೆಯ ತೆಲುಗು ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರ್ಯಾಲಿಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭಾಗವಹಿಸಲಿದ್ದು, ಭಾರೀ ಸಂಖ್ಯೆಯ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ.