Advertisement
ಸಾಮಾನ್ಯವಾಗಿ ರಾಜ್ಯ ರಾಜಕಾರಣದ ಕಹಳೆ ಮೊಳಗುವುದೇ ಇಲ್ಲಿ. ದಾವಣಗೆರೆಯಲ್ಲಿ ಚುನಾವಣ ಪ್ರಚಾರ ಆರಂಭಿಸಿದರೆ ರಾಜ್ಯದಲ್ಲಿ ಗೆಲುವು ಖಂಡಿತಾ ಎನ್ನುವ ನಂಬಿಕೆ ಹೊಂದಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ, ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆದಿದೆ. ಈ ಬಾರಿಯೂ ಅದೇ ಪರಿಸ್ಥಿತಿ ಇದೆ.
Related Articles
ಪ್ರಸ್ತುತ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಏಳು, ಬಿಜೆಪಿಯ ಓರ್ವ ಶಾಸಕರಿದ್ದಾರೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು, ಚನ್ನಗಿರಿ, ಹೊನ್ನಾಳಿ, ಮಾಯಕೊಂಡದಲ್ಲಿ 6 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಗೆದ್ದಿದ್ದು, ಅವರು ಪ್ರಸ್ತುತ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿರುವ ಕಾರಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಪರೋಕ್ಷವಾಗಿ ಏಳಕ್ಕೇರಿದೆ. ಹರಿಹರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಆರು ಶಾಸಕರನ್ನು ಹಾಗೂ ಕಾಂಗ್ರೆಸ್ ಇಬ್ಬರು ಶಾಸಕರನ್ನು ಹೊಂದಿತ್ತು.
Advertisement
ಪ್ರತಿ ಬಾರಿಯೂ ಇಲ್ಲಿ ಬಿಜೆಪಿಯಲ್ಲಿ ಸಿದ್ದೇಶ್ವರ ಕುಟುಂಬ ಹಾಗೂ ಕಾಂಗ್ರೆಸ್‌ನಲ್ಲಿ ಶಾಮನೂರು ಕುಟುಂಬವೇ ಆಯಾಯ ಪಕ್ಷದಲ್ಲಿ ನಿರ್ಣಾಯಕವಾಗಿರುವುದು ಸಾಮಾನ್ಯ. ಈ ಬಾರಿ ಬಿಜೆಪಿಯಲ್ಲಿ ಸಿದ್ದೇಶ್ವರ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಕೊಡಬೇಕೆಂಬ ಆಗ್ರಹ ಬಲವಾಗಿದೆ.ಒಂದೊಮ್ಮೆ ಈ ಬಾರಿಯೂ ಸಿದ್ದೇಶ್ವರ ಅಥವಾ ಅವರ ಕುಟುಂಬದವರಿಗೇ ಟಿಕೆಟ್ ಸಿಕ್ಕಿದರೆ ಆಕಾಂಕ್ಷಿ ಬಣದ ನಡೆ ಯಾವ ರೀತಿ ಇರಬಹುದು ಎಂಬುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಲ್ಲಿ “ಸ್ಥಳೀಯ ಹೈಕಮಾಂಡ್’ ಎನಿಸಿರುವ ಶಾಮನೂರು ಕುಟುಂಬ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹೆಸರು ತೇಲಿಬರುತ್ತಿದೆ. ಇದಕ್ಕೆ ಪೂರಕವಾಗಿ ಪ್ರಭಾ ಅವರು ತಮ್ಮ ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಕ್ಷೇತ್ರಾದ್ಯಂತ ಆರೋಗ್ಯ ಶಿಬಿರ ನಡೆಸಿ ರಾಜಕಾರಣ ಪ್ರವೇಶಿಸುವ ತಾಲೀಮು ನಡೆಸುತ್ತಿದ್ದಾರೆ. 1998ರಿಂದಲೂ ಬೀಗರ ಹಣಾಹಣಿ ಕಂಡಿದ್ದ ಈ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಬಿ.ಮಂಜಪ್ಪ ಕಣಕ್ಕಿಳಿಯುವುದರೊಂದಿಗೆ ಆ ಪರಿಪಾಠ ಮುರಿದಿತ್ತು. -ಎಚ್.ಕೆ. ನಟರಾಜ