Advertisement

ಲೋಕಸಭೆ ಚುನಾವಣೆ: ಅಮಿತ್‌ ಶಾ ಗುರಿ ತಲುಪಲು ಕಾರ್ಯತಂತ್ರ ಚರ್ಚೆ

06:00 AM Jul 29, 2018 | |

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ 20 ರಿಂದ 25 ಸ್ಥಾನ ಗೆಲ್ಲಲು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೀಡಿರುವ ಗುರಿ ತಲುಪಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಕೋರ್‌ ಕಮಿಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.

Advertisement

ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿ, ವಿಧಾನಸಭೆ ಚುನಾವಣೆ ಹಾಗೂ ಸಮ್ಮಿಶ್ರ ಸರ್ಕಾರ ರಚನೆಯ ನಂತರದ ಬೆಳವಣಿಗೆಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆದು, ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಲೋಕಸಭೆ ಚುನಾವಣೆಗೆ ಹೋಗುವುದರಿಂದ ಬಿಜೆಪಿಗೆ ಆಗಬಹುದಾದ ಲಾಭ-ನಷ್ಟದ ಬಗ್ಗೆ  ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಆಗಸ್ಟ್‌ನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದು ಲೋಕಸಭೆ ಚುನಾವಣೆಗೆ ಒಂದು ರೀತಿಯಲ್ಲಿ ಚಾಲನೆ ನೀಡಲಿದ್ದಾರೆ. ಆ ನಂತರ ಪ್ರತಿ ಕ್ಷೇತ್ರಕ್ಕೆ ಇಬ್ಬರು ಉಸ್ತುವಾರಿ ನೇಮಿಸಿ ಬೂತ್‌ ಮಟ್ಟದಿಂದ ಪಕ್ಷ ಬಲಪಡಿಸಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

ಈಮಧ್ಯೆ, ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲು ಶೋಭಾ ಕರಂದ್ಲಾಜೆ ನಿರಾಸಕ್ತಿ ತೋರಿದ್ದಾರೆ. ಅವರು ವಿಧಾನಪರಿಷತ್‌ ಸದಸ್ಯೆಯಾಗಿ ರಾಜ್ಯ ರಾಜಕಾರಣಕ್ಕೆ ಮರಳಲು ಬಯಸಿದ್ದಾರೆ ಎನ್ನಲಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಡಿ.ವಿ.ಸದಾನಂದಗೌಡರು ಸಹ ಆಸಕ್ತಿ ಹೊಂದಿದ್ದಾರೆ. ಅವರ ಜತೆಗೆ ಮಾಜಿ ಸಚಿವ ಜೀವರಾಜ್‌ ಸಹ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕೋರ್‌ ಕಮಿಟಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಲೋಕಸಭೆ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಪ್ರವಾಸದ ನಂತರ ಮುಂದಿನ ಹೋರಾಟದ ರೂಪು-ರೇಷೆ ನಿಗದಿಯಾಗಲಿದೆ ಎಂದರು. ಅಭ್ಯರ್ಥಿಗಳ ಬದಲಾವಣೆ, ಶೋಭಾ ಕರಂದ್ಲಾಜೆ ಅವರು ಸ್ಪರ್ಧೆ ಮಾಡದಿರುವ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಲೋಕಸಭೆ ಚುನಾವಣೆಗೆ ಇನ್ನೂ ಸಮಯ ಇದೆ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಸಂಸದೀಯ ಸಮಿತಿ ನಿರ್ಧಾರ ಮಾಡುತ್ತದೆ.  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ. ಯಾಕೆಂದರೆ  ಚುನಾವಣೆಯಲ್ಲಿ ಮೋದಿ ವರ್ಸಸ್‌ ಮೋದಿ ಮಾತ್ರ. ಲೋಕಸಭೆ ಚುನಾವಣೆಗೆ ಅವಧಿಪೂರ್ಣ ಆಗುತ್ತೋ ಇಲ್ಲವೋ ಶೀಘ್ರದಲ್ಲೇ ರಾಜ ವಿಧಾನಸಭೆಗೆ ಚುನಾವಣೆಯಂತೂ ಬರುತ್ತದೆ.
– ಸಿ.ಟಿ.ರವಿ

ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಆಯ್ಕೆ ಅಲ್ಲ, ಅದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ಪಕ್ಷ ಎಲ್ಲಿ ನಿಲ್ಲಿ ಅಂದರೆ ಅಲ್ಲಿ ನಿಲ್ಲುತ್ತೇನೆ.  ಕ್ಷೇತ್ರ ಬದಲಾವಣೆ ಬಗ್ಗೆ ಚಿಂತನೆ ನಡೆದಿಲ್ಲ.  ಪಕ್ಷದ ಮಟ್ಟದಲ್ಲೂ ಚರ್ಚೆಯಾಗಿಲ್ಲ. ಈ ರೀತಿ ಗಾಳಿ ಸುದ್ದಿ ಹರಡುತ್ತಿರುವವರು ದೇಶದ್ರೋಹಿಗಳು.
– ಡಿ.ವಿ.ಸದಾನಂದಗೌಡ

Advertisement

Udayavani is now on Telegram. Click here to join our channel and stay updated with the latest news.

Next