Advertisement

Lok Sabha Election: 543 ಕ್ಷೇತ್ರಗಳಿಗೂ ನರೇಂದ್ರ ಮೋದಿಯವರೇ ಅಭ್ಯರ್ಥಿ: ಸುಧಾಕರ್‌

10:21 PM Feb 05, 2024 | Team Udayavani |

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನೇ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಡಾ| ಕೆ.ಸುಧಾಕರ್‌ ಈಗ ಯೂ ಟರ್ನ್ ಹೊಡೆದಿದ್ದಾರೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ರವಿವಾರದ ನನ್ನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿವೆ. ಇಷ್ಟೂ ಕ್ಷೇತ್ರಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಎನ್‌ಡಿಎ ಅಭ್ಯರ್ಥಿ. ಅಭ್ಯರ್ಥಿಗಳ ಹೆಸರು ಅಂತಿಮವಾಗುವವರೆಗೂ ನಾವು ಮೋದಿ ಹೆಸರನ್ನೇ ಹೇಳಬೇಕು ಎಂದರಲ್ಲದೆ, ಮೈತ್ರಿ ಪಕ್ಷಗಳ ನಾಯಕರು ಯಾರನ್ನು ಅಂತಿಮಗೊಳಿಸಿ ಅಭ್ಯರ್ಥಿ ಮಾಡುತ್ತಾರೊ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದರು.

ಬಿರಿಯಾನಿ ಹಂಚಿ ಟಿಕೆಟ್‌ ಕೇಳುವ ಗತಿ ಬಂದಿಲ್ಲ’
ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ತಮ್ಮ ಪುತ್ರನಿಗೆ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್‌ ಕೊಡಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸುಧಾಕರ್‌, ನಾನು ವರಿಷ್ಠರನ್ನು ಭೇಟಿಯಾಗಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಬಿರಿಯಾನಿ ಊಟ ಹಾಕಿಸಿ, ತಿರುಪತಿಗೆ ಪ್ರವಾಸ ಕರೆದುಕೊಂಡು ಹೋಗಿ ಟಿಕೆಟ್‌ ಕೇಳುವ ಅಗತ್ಯ ನನಗಿಲ್ಲ. ನನ್ನ ಕೆಲಸವೇ ನನಗೆ ಶ್ರೀರಕ್ಷೆ ಎಂದರು.

ತುಮಕೂರಿಗೆ ನಾನೂ ಆಕಾಂಕ್ಷಿ: ಮಾಧುಸ್ವಾಮಿ
ತುಮಕೂರು ಲೋಕಸಭಾ ಚುನಾವಣೆಗೆ ವಿ.ಸೋಮಣ್ಣ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ. ನಾನೂ ಆಕಾಂಕ್ಷಿಯಾಗಿದ್ದು, ವರಿಷ್ಠರಲ್ಲಿ ಟಿಕೆಟ್‌ ನೀಡುವಂತೆ ಕೇಳಿದ್ದೇನೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ. ಸೋಮಣ್ಣ ತುಮಕೂರಿನಲ್ಲಿ ಓಡಾಡುತ್ತಿರಬಹುದು. ಯಾರು ಬೇಕಾದರೂ ಟಿಕೆಟ್‌ ಕೇಳಬಹುದು. ಆದರೆ ಹೊರಗಿನವರು ಬಂದು ಜಿಲ್ಲೆಯಲ್ಲಿ ಗೆದ್ದ ಉದಾಹರಣೆ ಇಲ್ಲ ಎಂದರು.

Advertisement

ತುಮಕೂರಿನಿಂದ ಕೊಂಡರಾಮಯ್ಯ ಬಂದಾಗಲೂ ಹೊರಗಿನವರನ್ನು ಜಿಲ್ಲೆಯ ಜನ ಒಪ್ಪುವುದಿಲ್ಲ ಎಂದು ಸಿದ್ದರಾಮಯ್ಯರಿಗೆ ಹೇಳಿದ್ದೆ. ಅನಂತರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಬಂದರೂ ಗೆಲ್ಲಲಾಗಿಲ್ಲ ಎಂದರು.

ಯಾರು ಸ್ಪರ್ಧಿಸಬೇಕೆಂಬುದು
ವರಿಷ್ಠರ ತೀರ್ಮಾನ: ವಿಜಯೇಂದ್ರ
ಬೆಂಗಳೂರು: ಲೋಕಸಭಾ ಅಭ್ಯರ್ಥಿಗಳ ಕುರಿತು ಪಕ್ಷದ ಪ್ರಮುಖರು ನೀಡುತ್ತಿರುವ ಹೇಳಿಕೆಗಳಿಗೆ ತಡೆ ಹಾಕಲು ಯತ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಾನೇ ಕ್ಷೇತ್ರ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದ ಮಾಜಿ ಸಚಿವ ಡಾ| ಕೆ. ಸುಧಾಕರ್‌, ನನ್ನ ಸ್ಪರ್ಧೆಗೆ ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ಹಸುರು ನಿಶಾನೆ ತೋರಿದ್ದಾರೆ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಪುತ್ರ ಸ್ಪರ್ಧಿಸಲಿದ್ದು, ಸುಧಾಕರ್‌ ಜೆಡಿಎಸ್‌ನಿಂದ ಸ್ಪರ್ಧಿಸಬಹುದು ಎಂದು ಕುಟುಕಿದ್ದಾರೆ.

ಈ ನಡುವೆ ಜೆಡಿಎಸ್‌ ಮೈತ್ರಿಗೆ ಮಾಜಿ ಸಚಿವ ಸಿ.ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ವಿರೋಧ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next