ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾ ವಣೆ ಸಿದ್ಧತೆಯನ್ನು ಬಿಜೆಪಿ ಸದ್ದಿಲ್ಲದೆ ಪ್ರಾರಂಭಿಸಿದ್ದು, ಟಿಕೆಟ್ ವಿಚಾರದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾ.5ರಂದು ಭೇಟಿ ನೀಡಲಿದ್ದು, ಕ್ಲಸ್ಟರ್ ಸಭೆಗೆ ಚಾಲನೆ ನೀಡಲಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೂರು ಲೋಕಸಭಾ ಕ್ಷೇತ್ರಗಳು ಈ ಕ್ಲಸ್ಟರ್ ವ್ಯಾಪ್ತಿಗೆ ಬರುವುದರಿಂದ ನಡ್ಡಾ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದಂಥ ಹೈ ಪ್ರೊಫೈಲ್ ಕ್ಷೇತ್ರಗಳು ಬರುತ್ತವೆ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಲ್ಲಿ ಬದಲಿಸಬೇಕೋ, ಬೇಡವೋ ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ವರಿಷ್ಠರೇ ನೇರವಾಗಿ ಮಧ್ಯ ಪ್ರವೇಶಿಸ ಬೇಕಾದ ಸ್ಥಿತಿ ಇದೆ. ನಡ್ಡಾ ಭೇಟಿ ಸಂದರ್ಭ ಒಂದಿಷ್ಟು ಸಮಾಲೋಚನೆ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ.
ಕ್ಲಸ್ಟರ್ ಸಭೆಯ ಜತೆಗೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಜತೆಗೆ ಚರ್ಚೆ, ಬೌದ್ಧಿಕ ಪ್ರಮುಖರ ಜತೆಗೆ ಮಾತುಕತೆ, ಫಲಾನುಭವಿಗಳ ಭೇಟಿಯಂಥ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದ್ದು, ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆಯೂ ಮಾಹಿತಿ ಸಂಗ್ರಹಿಸಲಿದ್ದಾರೆಂದು ತಿಳಿದು ಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿಯವರಿಗೆ ಟಿಕೆಟ್ ಕೊಡುತ್ತಾರೋ ಅಥವಾ ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಅಂಗಡಿಯವರಿಗೆ ಟಿಕೆಟ್ ನೀಡುತ್ತಾರೋ ಎಂಬುದು ಸ್ಪಷ್ಟವಿಲ್ಲ.
ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಬೇಕು ಎಂದು ರಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ತಮ್ಮ ಪುತ್ರನಿಗೆ ಅವಕಾಶ ಕೊಡಿ ಎಂದು ಪ್ರಭಾಕರ್ ಕೋರೆ ಕೂಡ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ನಿರ್ಧರಿಸುವುದು ಜಟಿಲವಾಗಿದೆ. ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಒಂದು ತಿಂಗಳಿಂದ ಜಿಲ್ಲೆಯಾದ್ಯಂತ ಚುರುಕಾಗಿ ಓಡಾಡುತ್ತಿದ್ದು, ಮರು ಆಯ್ಕೆ ಬಯಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು-ಖಾನಾಪುರ ಈ ಕ್ಷೇತ್ರದ ವ್ಯಾಪ್ತಿಗೆ ಸೇರಿರುವುದರಿಂದ ಬೆಳಗಾವಿ ಭೇಟಿ ಸಂದರ್ಭದಲ್ಲಿ ನಡ್ಡಾ ಪ್ರಮುಖರಿಂದ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ.
ಜೈಶಂಕರ್, ನಿರ್ಮಲಾ, ರಾಜೀವ್
ಪೈಕಿ ಒಬ್ಬರು ಬೆಂಗಳೂರಿನಿಂದ?
ಬೆಂಗಳೂರು ಕ್ಲಸ್ಟರ್ ಸಭೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ನಿಯೋಜಿಸಲಾಗಿದೆ.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಐಟಿ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಪೈಕಿ ಒಬ್ಬರು ಬೆಂಗಳೂರಿನಿಂದ ಸ್ಪರ್ಧೆ ನಡೆಸುವ ಸಾಧ್ಯತೆ ಹೆಚ್ಚಿದೆ.
ಈ ಪ್ರತಿಷ್ಠಿತರ ಸ್ಪರ್ಧೆಗೆ ರಾಜ್ಯ ರಾಜಧಾನಿಯ ಯಾವ ಕ್ಷೇತ್ರ ಹದವಾಗಿದೆ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಪ್ರಮೋದ್ ಸಾವಂತ್‌ಗೆ ನೀಡಲಾಗಿದೆ.
ಬಿಜೆಪಿ ವರಿಷ್ಠರಿಗೆ ಅತ್ಯಂತ ಆಪ್ತರಾಗಿರುವ ಸಾವಂತ್ ಮುಂದಿನ ವಾರಾಂತ್ಯದೊಳಗೆ ಬೆಂಗಳೂರಿಗೆ ಭೇಟಿ ನೀಡುವರು ಎನ್ನಲಾಗಿದೆ. ಜತೆಗೆ ಮಂಗಳೂರು, ಉಡುಪಿ-ಚಿಕ್ಕಮಗಳೂರು ಕ್ಲಸ್ಟರ್ ವ್ಯಾಪ್ತಿಗೆ ಸಂಬಂಧಿಸಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಹುಬ್ಬಳ್ಳಿ-ಧಾರವಾಡ ಕ್ಲಸ್ಟರ್‌ಗೆ ಕೇಂದ್ರ ಸಚಿವ ಮುರುಗನ್ ಭೇಟಿ ನೀಡುವರು.
– ರಾಘವೇಂದ್ರ ಭಟ್