Advertisement

Lok Sabha; ಕರಾವಳಿ ಸಹಿತ 10 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗೆ ಕಾಂಗ್ರೆಸ್‌ ಹುಡುಕಾಟ

12:32 AM Feb 11, 2024 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಟಾರ್ಗೆಟ್‌ ಹಾಕಿಕೊಂಡಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ 10 ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿಗಳೇ ಇಲ್ಲ. ಮೂರ್ನಾಲ್ಕು ಸಮೀಕ್ಷೆಗಳು ನಡೆದರೂ ಈ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಈಗಲೂ ನಡೆದಿದೆ ಅಭ್ಯರ್ಥಿಗಳ ಶೋಧ ಕಾರ್ಯಾಚರಣೆ!

Advertisement

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಸಂಕಲ್ಪ. ಅದೇ ರೀತಿ ಒಟ್ಟಾಗಿ 25 ಕಡೆ ಗೆಲುವು ಸಾಧಿಸಬೇಕು ಎಂಬುದು ಪ್ರತಿಪಕ್ಷದ ಮೈತ್ರಿಕೂಟ ಬಿಜೆಪಿ-ಜೆಡಿಎಸ್‌ ಟಾರ್ಗೆಟ್‌. ಹೀಗಾಗಿ ಲೋಕಸಮರ ಈಗ ಆಡಳಿತ ಹಾಗೂ ಪ್ರತಿಪಕ್ಷದ ಪಾಲಿಗೆ ಪ್ರತಿಷ್ಠೆ ಹಾಗೂ ದೊಡ್ಡ ಸವಾಲಾಗಿದೆ. ಆಡಳಿತ ಪಕ್ಷವಾಗಿದ್ದರೂ ಕಾಂಗ್ರೆಸ್‌ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ.

ಯಾವ್ಯಾವ ಕ್ಷೇತ್ರಗಳು?
ಚಾಮರಾಜನಗರ, ಮೈಸೂರು, ಹಾಸನ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಚಿಕ್ಕೋಡಿ, ವಿಜಯಪುರ, ಧಾರವಾಡ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಗೆಲ್ಲಬಹುದಾದ ಅಭ್ಯರ್ಥಿಗಳೇ ಇಲ್ಲ ಎಂದು ಪಕ್ಷದ ಆಂತರಿಕ ವರದಿಗಳು ಹೇಳುತ್ತಿವೆ.

ಬೆಂಗಳೂರು ದಕ್ಷಿಣ ಹಾಗೂ ಬೆಂ.ಉತ್ತರ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ದಕ್ಷಿಣಕ್ಕೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹೆಸರು ಮುಂಚೂಣಿಯಲ್ಲಿದ್ದರೂ, ಸಾರಿಗೆ ಸಚಿವರಾಗಿರುವ ತಂದೆ ರಾಮಲಿಂಗಾರೆಡ್ಡಿ ಅವರಿಗೆ ಪುತ್ರಿಯನ್ನು ಕಣಕ್ಕಿಳಿಸಲು ಇಷ್ಟವಿಲ್ಲ.

ಅನಿವಾರ್ಯವಾದರೆ ಮಾತ್ರ ಸ್ಪರ್ಧಿಸಬಹುದೆಂದು ಹೇಳುತ್ತಿದ್ದಾರೆ. ಉತ್ತರಕ್ಕೆ ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್‌ಗೌಡರು ಆಸಕ್ತಿ ತೋರಿದ್ದರೂ ಅಲ್ಲಿ ಬಿಜೆಪಿಯಿಂದ ಈ ಸಲ ಡಿ.ವಿ.ಸದಾನಂದಗೌಡರ ಬದಲಿಗೆ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದರ ಮೇಲೆ ಅಭ್ಯರ್ಥಿತನ ನಿರ್ಧರಿಸಲು ಕಾಂಗ್ರೆಸ್‌ ತೀರ್ಮಾನಿಸಿರುವುದರಿಂದ ಅಲ್ಲೂ ಡೋಲಾಯಮಾನ ಸ್ಥಿತಿ ಇದೆ.

Advertisement

ಕರಾವಳಿಯದ್ದೇ ಸಮಸ್ಯೆ
ಇನ್ನು ಬಿಜೆಪಿಯ ಭದ್ರನೆಲೆ ಕರಾವಳಿ ತೀರದ ಮೂರು ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಕ್ಷೇತ್ರಗಳಿಗೆ ಇದುವರೆಗೆ ನಡೆಸಿದ ಪ್ರಯೋಗಗಳು ಕೈಕೊಟ್ಟಿರುವುದರಿಂದ ಯಾವ ರೀತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಚಿಂತೆ ಕಾಡುತ್ತಿದೆ. ದಕ್ಷಿಣ ಕನ್ನಡದಿಂದ ಅಲ್ಪಸಂಖ್ಯಾಕ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಹಿಂದೂ ಮತಗಳು ಒಂದೆಡೆ ಸೇರಬಹುದೆಂಬ ಆತಂಕವಿದೆ. ಹಿಂದೂಗಳನ್ನೇ ಅಭ್ಯರ್ಥಿಗಳನ್ನಾಗಿ ಮಾಡಿದರೆ ಅಲ್ಪಸಂಖ್ಯಾಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯವೂ ಇದೆ. ಅದೇ ರೀತಿ ಉತ್ತರ ಕನ್ನಡದಿಂದ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಪುತ್ರ ಪ್ರಶಾಂತ್‌ ದೇಶಪಾಂಡೆಗೆ 2014ರಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಸೋತ ಬಳಿಕ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲ ಎಂಬ ದೂರುಗಳಿದ್ದರೂ ಮತ್ತದೇ ಹೆಸರು ಚಲಾವಣೆಗೆ ಬಂದಿದೆ. ಆದರೆ ಅವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿಗಳಿವೆ. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್‌ ಹೆಸರು ಚಲಾವಣೆಗೆ ಬಂದಿದೆ. ಇಲ್ಲಿ ದೇಶಪಾಂಡೆ ತೀರ್ಮಾನವೇ ಅಂತಿಮ.

ಅರ್ಧ ಡಜನ್‌ ಆಕಾಂಕ್ಷಿಗಳು
ಹಾಸನ ಕ್ಷೇತ್ರಕ್ಕೆ ಅರ್ಧ ಡಜನ್‌ ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಬಿ.ಶಿವರಾಂ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೇಯಸ್‌ ಎಂ.ಪಟೇಲ್‌, ಮಾಜಿ ಸಚಿವ ದಿವಂಗತ ಎಚ್‌.ಸಿ.ಶ್ರೀಕಂಠಯ್ಯ ಪುತ್ರ ವಿಜಯಕುಮಾರ್‌, ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ ಹಾಗೂ ಸ್ಥಳೀಯ ಮುಖಂಡ ರಾಮಚಂದ್ರ ಆಕಾಂಕ್ಷಿಗಳಾಗಿದ್ದು ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ ಅಂಗಳದಲ್ಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next