ನವದೆಹಲಿ: 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿತ್ತು. ತದನಂತರ 2014ರಿಂದ 2018ರವರೆಗೆ ನಡೆದ 27 ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು ಕೇವಲ 5 ಕ್ಷೇತ್ರಗಳಲ್ಲಿ ಮಾತ್ರ.
ಏತನ್ಮಧ್ಯೆ ಕಾಂಗ್ರೆಸ್ ಪಕ್ಷ ಕೂಡಾ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 5 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅಮೃತ್ ಸರ್ ಲೋಕಸಭಾ ಸೇರಿದಂತೆ ಉಳಿದ ಬಿಜೆಪಿ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಯಿಂದ ವಶಪಡಿಸಿಕೊಂಡಿದೆ. ಇನ್ನುಳಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡಾ ನಾಲ್ಕು ಸ್ಥಾನಗಳಲ್ಲಿ ಜಯ ಸಾಧಿಸಿದೆ.
2015ರಿಂದ 2017ರ ನಡುವೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನಗಳಲ್ಲಿ ಜಯ ಸಾಧಿಸಿಲ್ಲ. ಈ ವರ್ಷವೂ ಮೇವರೆಗೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಪಾಲ್ಘಾರ್ ಹೊರತು ಪಡಿಸಿ ಬೇರೆ ಯಾವ ಕ್ಷೇತ್ರದಲ್ಲೂ ಗೆಲುವಿನ ನಗು ಬೀರಿಲ್ಲ.
2014ರ ನಂತರ ನಡೆದ 27 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳ ಪೈಕಿ 13 ಕ್ಷೇತ್ರಗಳು ಬಿಜೆಪಿಗೆ ಸೇರಿದವು. ಬಿಜೆಪಿ ಗೆದ್ದ 5 ಕ್ಷೇತ್ರಗಳು ಬಿಜೆಪಿಯೇತರ ಪಕ್ಷಗಳ ವಶದಲ್ಲಿದ್ದ ಕ್ಷೇತ್ರಗಳಾಗಿದ್ದವು. 2014ರಲ್ಲಿ ನರೇಂದ್ರಮೋದಿ ವರ್ಚಸ್ಸಿನಲ್ಲಿಯೇ ಬಿಜೆಪಿ 2 ಕ್ಷೇತ್ರಗಳನ್ನ ಗೆದ್ದಿತ್ತು. 2014ರಲ್ಲಿ ನಡೆದ 5 ಉಪಚುನಾವಣೆಗಳಲ್ಲಿ ಆಯಾ ಪಕ್ಷಗಳೇ ತಮ್ಮ ಸ್ಥಾನಗಳನ್ನ ಉಳಿಸಿಕೊಂಡವು. ಮಹಾರಾಷ್ಟ್ರದ ಬೀಡ್ ಮತ್ತು ಗುಜರಾತಿನ ವಡೋದರ ಕ್ಷೇತ್ರವನ್ನ ಬಿಜೆಪಿ ಉಳಿಸಿಕೊಂಡಿತ್ತು. ಒಡಿಶಾದ ಕಂದಮಾಲ್ ಕ್ಷೇತ್ರವನ್ನ ಬಿಜೆಡಿ, ಉತ್ತರಪ್ರದೇಶದ ಮೈನ್ಪುರಿ ಕ್ಷೇತ್ರವನ್ನ ಸಮಾಜವಾದಿ ಪಕ್ಷ, ಆಂಧ್ರಪ್ರದೇಶದ ಮೇಧಕ್ ಕ್ಷೇತ್ರವನ್ನ ಟಿಆರ್ಎಸ್ ಉಳಿಸಿಕೊಂಡಿತ್ತು.
2016ರ ಭಾರತೀಯ ಜನತಾ ಪಕ್ಷ ಸ್ವಲ್ಪ ಚೇತರಿಕೆ ಕಂಡಿದ್ದು ಅಸ್ಸಾಂನ ಲಖೀಂಪುರ್ ಹಾಗೂ ಮಧ್ಯಪ್ರದೇಶದ ಶಾದೋಲ್ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಆದರೆ ತೃಣಮೂಲ ಕಾಂಗ್ರೆಸ್(ಕೋಚ್ ಬೆಹರ್ ಮತ್ತು ಟಾಮ್ಲುಕ್) ಭದ್ರಕೋಟೆಯಲ್ಲಿ ಪ್ರಗತಿ ಸಾಧಿಸಲು ಬಿಜೆಪಿ ವಿಫಲವಾಗಿತ್ತು. ತುರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣದಿಂದ ಹಿಂದೆ ಸರಿದು ಎನ್ಪಿಪಿಗೆ ಬೆಂಬಲ ಸೂಚಿಸಿತ್ತು. ಇಲ್ಲಿ ಎನ್ ಪಿಪಿ ಜಯ ಸಾಧಿಸಿತ್ತು.
ಬಿಜೆಪಿ ದೊಡ್ಡ ಪತನವಾಗಿದ್ದು 2018ರಲ್ಲಿ.. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದ 8 ಕ್ಷೇತ್ರಗಳು ಬಿಜೆಪಿಯಿಂದ ಈ ವರ್ಷ ಕೈತಪ್ಪಿದೆ. ಕಳೆದ ಮಾರ್ಚ್ನಲ್ಲಿ ಗೋರಖ್ ಪುರ್ ಮತ್ತು ಫುಲ್ಪುರ್ ಕ್ಷೇತ್ರ ಸೇರಿ 6 ಕ್ಷೇತ್ರಗಳನ್ನ ಬಿಜೆಪಿ ಸೋತಿದೆ.