ವಾಡಿ: ನಾಲವಾರ ವಲಯದ ಭಾವೈಕ್ಯ ತಾಣ ಲಾಡ್ಲಾಪುರ ಹಾಜಿಸರ್ವರ್ (ಆದಿ ಶರಣ) ಜಾತ್ರೆ ಶುಕ್ರವಾರ ಹಿಂದೂ-ಮುಸ್ಲಿಂ ಭಕ್ತರ ಸಹಭಾಗಿತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಕೊರೊನಾ ಸಂಕಷ್ಟದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಜಾತ್ರೆ ಪ್ರಸಕ್ತ ವರ್ಷ ಅದ್ಧೂರಿ ಚಾಲನೆ ಪಡೆಯಿತು. ಈ ಬಾರಿ ಭಕ್ತರು ಹಾಗೂ ಹರಕೆಗೆ ಬಲಿಯಾದ ಪ್ರಾಣಿಗಳ ಸಂಖ್ಯೆ ಏರಿಕೆ ಕಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೆಂಡ ಕಾರುವ ಮೆಟ್ಟಿಲುಗಳನ್ನು ಲೆಕ್ಕಿಸದೇ ಬೆಳಗ್ಗೆಯಿಂದ ಸಂಜೆವರೆಗೂ ರಣಬಿಸಿಲ ತಾಪದಲ್ಲೇ ಬರಿಗಾಲಿನಲ್ಲಿ ಹೆಜ್ಜೆಯಿಟ್ಟ ಸಾವಿರಾರು ಭಕ್ತರು, ಎತ್ತರದ ಗುಡ್ಡ ಹತ್ತಿ ಹಾಜಿರ್ವರ್ ಗದ್ದುಗೆಗೆ ಮಾದಲಿ ಮತ್ತು ಹೋಳಿಗೆಯ ಸಿಹಿ ನೈವೇದ್ಯ ಅರ್ಪಿಸಿದರು.
ಗುಡ್ಡದ ಕೆಳಗಿನ ಗದ್ದುಗೆಗೆ ಮಾಂಸದ ನೈವೇದ್ಯ ಕೊಟ್ಟು ದೇವರ ದರ್ಶನ ಪಡೆದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ಪುಣೆ, ಹೈದ್ರಾಬಾದ್, ಗೋವಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಮೂರು ವರ್ಷಗಳ ಬಳಿಕ ಹರಕೆ ತೀರಿಸಿ ಪ್ರಾಯಶ್ಚಿತ್ತ ಕೋರಿದರು.
ಮಹಾರಾಷ್ಟ್ರದಿಂದ ಆಗಮಿಸಿದ್ದ ವಿವಿಧ ತಾಂಡಾಗಳ ಸಾವಿರಾರು ಜನ ಗುಳೆ ಕಾರ್ಮಿಕರು, ಕುರಿಗಳ ಬಲಿ ನೀಡಿದರು. ಗುಡ್ಡದ ಸುತ್ತಲೂ ಹಿಂದೂ, ಮುಸ್ಲಿಂ, ಹಿಂದುಳಿದ ಸಮುದಾಯದವರು ನಿರ್ಮಿಸಿದ್ದ ಬಾಡೂಟದ ಬಿಡಾರುಗಳೇ ಹೆಚ್ಚಾಗಿ ಕಂಡುಬಂದವು.
ಕೊರೊನಾ ಕಾರಣ ಜಾತ್ರೆಗಳು ನಿಷೇಧಗೊಂಡು ವ್ಯಾಪಾರವಿಲ್ಲದೇ ಮರುಗಿದ್ದ ಫಳಾರ, ಮಿಠಾಯಿ, ಹಣ್ಣು, ಪಾನೀಯ, ಬಳೆ, ಆಟಿಕೆ ವಸ್ತುಗಳ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದರು. ಮಕ್ಕಳು ಮತ್ತು ಮಹಿಳೆಯರು ಮನೋರಂಜನಾ ತಾಣಗಳಲ್ಲಿ ಹೆಚ್ಚು ಸಮಯ ಕಳೆದರು. ಗ್ರಾಪಂ ಆಡಳಿತದಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಡಿ ಠಾಣೆ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದರು.