ಮುಂಬೈ: ಲೋಧಾ ಸಮಿತಿ ಶಿಫಾರಸನ್ನು ಅಳವಡಿಸಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಇದೀಗ 19 ತಿಂಗಳು ಮುಗಿದು ಹೋಗಿದೆ. ಆದರೂ ಅದನ್ನು ಒಪ್ಪಿಕೊಳ್ಳಲು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅರೆ ಮನಸ್ಸು ಹೊಂದಿವೆ.
ಇದರ ಮಧ್ಯೆಯೇ ಸರ್ವೋಚ್ಚ ನ್ಯಾಯಪೀಠ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಆಶಾದಾಯಕ ಸುದ್ದಿ ಕೇಳಿ ಬಂದಿದೆ. 13 ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಶಿಫಾರಸನ್ನು ಸಂಪೂರ್ಣ ಪಾಲಿಸುವುದಾಗಿ ಲಿಖೀತ ಒಪ್ಪಿಗೆಯನ್ನು ಬಿಸಿಸಿಐಗೆ ಸಲ್ಲಿಸಿವೆ. ಇದು ಆಡಳಿತಾಧಿಕಾರಿಗಳ ಕೆಲಸವನ್ನು ಅರ್ಧದಷ್ಟು ಹಗುರಗೊಳಿಸಿದೆ.
ಇದಕ್ಕೂ ಮೊದಲೇ ಮಹರಾಷ್ಟ್ರ, ವಿದರ್ಭ, ತ್ರಿಪುರಾಗಳು ಶಿಫಾರಸನ್ನು ಜಾರಿಗೆ ತಂದಿದ್ದವು. ಅಲ್ಲಿಗೆ ಅರ್ಧದಷ್ಟು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಶಿಫಾರಸಿಗೆ ತಲೆ ಬಾಗಿದಂತಾಗಿದೆ. ಆದರೂ ಇನ್ನುಳಿದ ಕ್ರಿಕೆಟ್ ಸಂಸ್ಥೆಗಳು ಕೆಲ ಮಹತ್ವದ ಅಡ್ಡಿ ಆತಂಕಗಳನ್ನು ಮುಂದಿಟ್ಟು ಅದನ್ನು ಸರಿಪಡಿಸಿ ಎಂಬ ಹಠ ಮುಂದುವರಿಸಿವೆ. ಬಿಸಿಸಿಐ ಕೂಡ ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಲೋಧಾ ಶಿಫಾರಸಿನಲ್ಲಿರುವ ಒಂದು ರಾಜ್ಯಕ್ಕೆ ಒಂದೇ ಮತ, 70 ವರ್ಷ ವಯೋಮಿತಿ, 3 ವರ್ಷ ಅಧಿಕಾರಾವಧಿ ನಂತರ 3 ವರ್ಷ ಕಡ್ಡಾಯ ವಿಶ್ರಾಂತಿಗೆ ವಿರೋಧ ವ್ಯಕ್ತವಾಗಿದೆ. ಇದನ್ನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಪೀಠ ಕೂಡ ಹೇಳಿದೆ. ಒಂದು ವೇಳೆ ಈ ಬೇಡಿಕೆ ಈಡೇರಿದರೆ ಅವಿರೋಧವಾಗಿ ಲೋಧಾ ಶಿಫಾರಸು ಜಾರಿಯಾಗುವ ಸಂಭಾವ್ಯತೆಯಿದೆ.
13 ರಾಜ್ಯಗಳು ಪೂರ್ಣ ಬೆಂಬಲ ಸೂಚಿಸಿರುವುದಕ್ಕೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಂತಸ ವ್ಯಕ್ತಪಡಿಸಿದ್ದಾರೆ. ಫೆ.23ರಂದು ನಡೆಯಲಿರುವ ವಿಚಾರಣೆ ವೇಳೆ ಈ ಒಪ್ಪಿಗೆ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.