Advertisement

ಲಾಕ್‌ಡೌನ್‌: ಮಂಗಳೂರು ನಗರ ಬಹುತೇಕ ಸ್ತಬ್ಧ

01:47 AM Jul 06, 2020 | Sriram |

ಮಹಾನಗರ: ಕೋವಿಡ್‌-19 ಸೋಂಕು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್‌ ಜಾರಿ ಮಾಡಿದ ಕಾರಣ ಮಂಗಳೂರು ನಗರ ರವಿವಾರ ಬಹುತೇಕ ಸ್ತಬ್ಧವಾಗಿತ್ತು.

Advertisement

ಬಸ್‌ ಮತ್ತು ಇತರ ಖಾಸಗಿ ವಾಹನಗಳ ಸಂಚಾರ ಇರಲಿಲ್ಲ. ಪೊಲೀಸ್‌, ಆಸ್ಪತ್ರೆ ಮತ್ತು ಔಷಧಾಲಯ, ಆರೋಗ್ಯ ಇಲಾಖೆ, ಹಾಲು, ಮಾಧ್ಯಮ, ಅಗ್ನಿಶಾಮಕ ಸೇವೆಯ ವಾಹನ ಸಹಿತ ಆವಶ್ಯಕ ಸೇವೆಯ ಬೆರಳೆಣಿಕೆಯ ವಾಹನಗಳು ಮಾತ್ರ ಓಡಾಡಿದವು. ಪೌರ ಕಾರ್ಮಿಕರು ಎಂದಿನಂತೆ ಸ್ವತ್ಛತಾ ಕಾರ್ಯ ನಿರ್ವಹಿಸಿದರು.

ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ಪ್ರಮುಖ ರಸ್ತೆಗಳು ರವಿವಾರ ಮೌನವಾಗಿದ್ದವು. ಕಳೆದ ಬಾರಿಯ ಲಾಕ್‌ಡೌನ್‌ ಸಂದರ್ಭ ದಿನಸಿ ಅಂಗಡಿ, ಮಾಂಸದಂಗಡಿ ಮತ್ತು ಮೀನು ಮಾರಾಟಕ್ಕೆ ಅವಕಾಶವಿದ್ದರೆ, ಈ ಬಾರಿ ಅವುಗಳು ಭಣಗುಡುತ್ತಿದ್ದವು. ಹಾಲು, ಆಸ್ಪತ್ರೆ ಮತ್ತು ಔಷಧ ಅಂಗಡಿ ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಹಾಲು ಮತ್ತು ಔಷಧಕ್ಕಾಗಿ ಅಲ್ಪ ಪ್ರಮಾಣದ ಜನರಷ್ಟೇ ರಸ್ತೆಗಿಳಿದಿದ್ದರು.

ಲಾಕ್‌ಡೌನ್‌ ಜಾರಿಯಲ್ಲಿರುವ ಬಗ್ಗೆ ಪೊಲೀಸರು ನಗರ ಮತ್ತು ನಗರದ ಹೊರ ವಲಯದ ವಿವಿಧ ರಸ್ತೆಗಳಲ್ಲಿ ಉದ್ಘೋಷಣೆ ಮಾಡಿದರು. ರಸ್ತೆಗೆ ಇಳಿಯದಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

ಕಟ್ಟುನಿಟ್ಟಿನ ತಪಾಸಣೆ
ಪೊಲೀಸರು ಪ್ರಮುಖ ಜಂಕ್ಷನ್‌ಗಳು, ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರ ನಿಯಂತ್ರಿಸಿದರು. ರಸ್ತೆಗಿಳಿದ ಬೆರಳೆಣಿಕೆಯ ವಾಹನಗಳನ್ನು ತಡೆದು ವಿಚಾರಿಸಿ, ಅನಿವಾರ್ಯ ಎಂದು ದೃಢಪಡಿಸಿಕೊಂಡು ಮುಂದುವರಿಯಲು ಅನುವು ಮಾಡಿದರು. ಅನಾವಶ್ಯಕವಾಗಿ ಸಂಚರಿಸುವವರನ್ನು ತಡೆದು ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಿದರು.

Advertisement

ಚಿತ್ರಾಪುರ ದೇಗುಲ: ಭಕ್ತರಿಗಿಲ್ಲ ಪ್ರವೇಶ
ಸುರತ್ಕಲ್‌: ಸುರತ್ಕಲ್‌ ಪೇಟೆಯಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಔಷಧ ಅಂಗಡಿ, ಹಾಲು, ಪತ್ರಿಕೆ ವಿತರಣೆ ಹೊರತು ದಿನಸಿ, ತರಕಾರಿ ಸಹಿತ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಚಿತ್ರಾಪುರ, ಹೊಸಬೆಟ್ಟು ಸಹಿತಿ ವಿವಿಧೆಡೆ ಕೋವಿಡ್‌-19 ಪಾಸಿಟಿವ್‌ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಾಪುರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಅನಿ ರ್ದಿಷ್ಟಾವ ಧಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಚಿತ್ರಾಪುರ ಮಠದ  ಸ್ವಾಮೀಜಿ ತಿಳಿಸಿದ್ದಾರೆ.

ಹಳೆಯಂಗಡಿ: ಲಾಕ್‌ಡೌನ್‌ ಯಶಸ್ವಿ
ಹಳೆಯಂಗಡಿ: ಹಳೆಯಂಗಡಿ, ಪಡುಪಣಂಬೂರು ಪೇಟೆ ಸಹಿತ ಗ್ರಾಮೀಣ ಪ್ರದೇಶದಲ್ಲಿ ಲಾಕ್‌ಡೌನ್‌ ಯಶಸ್ವಿಯಾಗಿದೆ.

ಶನಿವಾರ ರಾತ್ರಿಯಾಗುತ್ತಲೇ ಮನೆ ಸೇರಿದ ಜನರು ರವಿವಾರ ಹೊರಗಿಳಿಯುವ ಯತ್ನ ಮಾಡಲಿಲ್ಲ. ಹಳೆಯಂಗಡಿ ವ್ಯಾಪ್ತಿಯಲ್ಲಿ ಎರಡು ಕೋವಿಡ್‌ ಪ್ರಕರಣಗಳು ಬೆಳಕಿಗೆ ಬಂದಿರುವ ಕಾರಣ ಸೋಮವಾರದಿಂದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕಾರ್ಯಾಚರಿಸಲು ವಾಣಿಜ್ಯ ಮಳಿಗೆಗಳ ಮಾಲಕರು ತೀರ್ಮಾನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next