ಭೋಪಾಲ್: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ನಗರ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಗ್ಗೆ 6ಗಂಟೆವರೆಗೆ ಲಾಕ್ ಡೌನ್ ಹೇರುವುದಾಗಿ ಮಧ್ಯಪ್ರದೇಶ ಸರ್ಕಾರ ಗುರುವಾರ(ಏಪ್ರಿಲ್ 08) ಘೋಷಿಸಿದೆ.
ಕೋವಿಡ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಕಂಟೈನ್ ಮೆಂಟ್ ಪ್ರದೇಶಗಳನ್ನು ಗುರುತಿಸಿ, ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಚೌಹಾಣ್ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಟ್ಟಿನಲ್ಲಿ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಕೈಗಳಿಗೆ ಸ್ಯಾನಿಟೈಸ್ ಬಳಸಬೇಕು ಎಂದು ಮುಖ್ಯಮಂತ್ರಿ ಕಚೇರಿ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ಬುಧವಾರ ಸಂಜೆ, ಎಲ್ಲಾ ನಗರ ಪ್ರದೇಶಗಳಲ್ಲಿ ಭಾನುವಾರ ಮಾತ್ರ ಲಾಕ್ ಡೌನ್ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಕಳೆದ 24ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 4 ಸಾವಿರ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಕೋವಿಡ್ ಸಂಖ್ಯೆ 3.18 ಲಕ್ಷಕ್ಕೆ ಏರಿಕೆಯಾಗಿದೆ.