ಲಂಡನ್: ಕೆಲವು ರಾಷ್ಟ್ರಗಳು ಕಡಿಮೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳ ಕಾರಣಕ್ಕೆ ಲಾಕ್‌ಡೌನ್ ಅನ್ನು ತೆಗೆದು ಹಾಕಲು ತುದಿಗಾಲಿನಲ್ಲಿ ನಿಂತಿವೆ. ಕುಸಿದು ಹೋಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಮುಂದಾಗುತ್ತಿವೆ. ಆದರೆ ಇಂಗ್ಲೆಂಡ್‌ನಲ್ಲಿ ಮಾತ್ರ ಲಾಕ್‌ಡೌನ್ ಸದ್ಯಕ್ಕೆ ತೆರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಕೋವಿಡ್ ಸೋಂಕು ಪತ್ತೆಯಾಗುತ್ತಿರುವುದು ಇದಕ್ಕೆ ಕಾರಣ.
ಲಾಕ್‌ಡೌನ್ ಜಾರಿಯಲ್ಲಿದ್ದರೂ ಯಾವ ಕಾರಣದಿಂದ ಹೊಸ ಕೋವಿಡ್ ಸೋಂಕು ಪತ್ತೆಯಾಗುತ್ತಿದೆ ಎಂಬ ಪ್ರಶ್ನೆಗಳಿಗೆ ತಜ್ಞರು ಉತ್ತರ ಕಂಡುಹಿಡಿಯುತ್ತಿದ್ದಾರೆ. ಲಾಕ್‌ಡೌನ್ ತೆರವಾದರೆ ಸೋಂಕು ಹರಡಬಹುದಾದ ಸಾಧ್ಯತೆಗಳ ಕುರಿತೂ ಅಲ್ಲಿನ ಸರಕಾರ ಗಂಭೀರವಾಗಿ ಯೋಚಿಸುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಂಡ ಬಳಿಕವೇ ಲಾಕ್‌ಡೌನ್ ತೆರವು ಮಾಡುವ ಸಾಧ್ಯತೆ ಇದೆ.
ಜನರಲ್ಲಿ ಸೋಂಕು ಹರಡುವ ಬಗೆಯ ಕುರಿತು ಇನ್ನೂ ಗೊಂದಲ ಇದ್ದು, ಅವುಗಳನ್ನು ನಿವಾರಿಸದೇ ಲಾಕ್‌ಡೌನ್ ತೆರವು ಮಾಡಿದರೆ ಅಪಾಯ ಹೆಚ್ಚಾಗಲಿದೆ ಎಂಬುದು ಸರಕಾರದ ಕೆಲವು ಮೂಲಗಳ ಅಭಿಪ್ರಾಯ. ಲಾಕ್‌ಡೌನ್ ತೆರವು ಮಾಡಿದ ಬಳಿಕ ಈ ಹಿಂದಿನ ಸಹಜ ಸ್ಥಿತಿಗೆ ಜನ ಜೀವನ ಬರಬಹುದೇ? ಒಂದು ವೇಳೆ ಸಾರ್ವಜನಿಕ ಸಭೆ ಸಮಾರಂಭಗಳು ಹೆಚ್ಚಾದರೆ ಅವುಗಳು ಸುರಕ್ಷೆಯ ಹಿತದೃಷ್ಟಿಯಿಂದ ಪೂರಕವಾಗಿರಬಹುದೇ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಇಂಗ್ಲೆಂಡಿನಲ್ಲಿ ಅತೀ ಹೆಚ್ಚು ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಬಲಿಯಾಗಿದ್ದಾರೆ. ಈ ಕುರಿತಂತೆ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಾಧನಗಳ ಹೊರತಾಗಿಯೂ ವೈರಸ್ ಹೇಗೆ ಹರಡಿತು? ಗಾಳಿಯಲ್ಲಿನ ವೈರಸ್ ಕಣಗಳು ಹೇಗೆ ಹರಡಬಹುದು. ಮೊದಲಾದ ಸರಣಿ ಸಂದೇಹಗಳಿಗೆ ಅಧ್ಯಯನಗಳು ಉತ್ತರ ನೀಡಲಿದೆ. ಆಸ್ಪತ್ರೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಕಾರ್ಯಕರ್ತರಲ್ಲಿ ಪ್ರಕರಣಗಳು ಏರಿಕೆಯಾಗಿವೆ.
ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಕಾರ್ಯಕರ್ತರಿಗೆ ಕೋವಿಡ್ -19ರ ಪ್ರಸರಣವಾಗದಂತೆ ತಡೆಯುವುದು ಪ್ರಮುಖ ಆದ್ಯತೆಯಾಗಿದೆ ಎಂದು ಲಂಡನ್ ಯೂನಿವರ್ಸಿಟಿ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಅನ್ನಿ ಜಾನ್ಸನ್ ಹೇಳಿದ್ದಾರೆ. ಕಳೆದ ವಾರ ವರದಿಯಾದ ಹೊಸ ಸೋಂಕುಗಳ ಪೈಕಿ ಅರ್ಧದಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬಂದಿವೆ. ಇದು ಮುಂಬರುವ ದಿನಗಳಲ್ಲಿ ಸೋಂಕು ಮತ್ತೂ ವ್ಯಾಪಕವಾಗಲು ಕಾರಣವಾಗಬಹುದು. ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡರೆ ಅವರ ಮೂಲಕ ಸಹೋದ್ಯೋಗಿಗಳಿಗೆ, ತಮ್ಮ ಕುಟುಂಬಗಳಿಗೆ ಮತ್ತು ಇತರ ರೋಗಿಗಳಿಗೆ ಹರಡುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮತ್ತು ಇದನ್ನು ತಡೆಯದೇ ನಾವು ಯಥಾಸ್ಥಿತಿಗೆ ಬರಲು ಸಾಧ್ಯವಿಲ್ಲ ಎಂಬುದು ಸರಕಾರದ ನಿಲುವಾಗಿದೆ.
ಇತರ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಇಂಗ್ಲೆಂಡಿನಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗುವ ಪ್ರಮಾಣ ತುಂಬಾ ನಿಧಾನವಾಗಿದೆ. ಸಾಮಾಜಿಕ ಅಂತರದ ಹೊರತಾಗಿಯೂ ಸಮುದಾಯದಲ್ಲಿ ಇದು ಹರಡುವ ಸಾಧ್ಯತೆ ಇದೆ.
ಬ್ರಿಸ್ಟಲ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಜೊನಾಥನ್ ರೀಡ್ ನೇತೃತ್ವದ ತಂಡವೊಂದು ಕೋವಿಡ್ -19 ವೈರಸ್ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹಾದುಹೋಗುವ ವಿಧಾನವನ್ನು ಅಧ್ಯಯನ ಮಾಡುತ್ತಿದೆ. ಈಗಾಗಲೇ ವಿಶ್ವಸಂಸ್ಥೆಯು ಸೋಂಕಿತ ಸೀನಿದಾಗ ಅಥವ ಕೆಮ್ಮಿದಾಗ ದೊಡ್ಡ ಹನಿಗಳು ಗಾಳಿಯ ಮೂಲಕ ಕ್ರಮಿಸಿ ಸಮೀಪದಲ್ಲಿರುವ ಮತ್ತೂಬ್ಬರ ದೇಹ ಸೇರಿಕೊಳ್ಳುವ ಅಪಾಯ ಇದೆ ಎಂದಿತ್ತು. ಈ ತಂಡ ಸಣ್ಣ ಕಣಗಳಿಂದ ವೈರಸ್ ಹರಡಬಹುದೇ ಎಂಬುದನ್ನು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಅತಿ ಸಣ್ಣ ಕಣಗಳು ಭಾರವಾದ ಹನಿಗಳಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಧ್ಯತೆಗಳಿವೆಯೇ ಎಂಬುದನ್ನು ಕಂಡುಹಿಡಿಯುವುದು ಬಹಳ ಮುಖ್ಯ ಎಂದು ತಜ್ಞರು ಹೇಳಿದ್ದಾರೆ. ಈ ಅಧ್ಯಯನದಲ್ಲಿ ವೈರಸ್‌ನ ಜೀವಿತಾವಧಿಯನ್ನು ಕಡಿಮೆ ಮಾಡಲು ಇರುವ ಸಾಧ್ಯತೆಗಳನ್ನು ಪಟ್ಟಿ ಮಾಡಲಿದೆ.