Advertisement

ಲಾಕ್‌ಡೌನ್‌ ಪರಿಣಾಮ: ಉದ್ಯೋಗ ಖಾತರಿಗೆ ಬೇಡಿಕೆ

10:50 PM May 09, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದ ಮುಕ್ತಿ ಪಡೆದ ವಲಸೆ ಕಾರ್ಮಿಕರು ಹುಟ್ಟೂರು ಸೇರಿಕೊಂಡ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿಗೆ ಬೇಡಿಕೆ ಹೆಚ್ಚಾಗಿದೆ.

Advertisement

ಕೋವಿಡ್‌19 ಕರಾಳ ಅನುಭವದ ಕಹಿ ನೆನಪಿನೊಂದಿಗೆ ರಾಜಧಾನಿ ಬಿಟ್ಟು ಹೋದವರು ಸದ್ಯಕ್ಕೆ ತಮ್ಮ ತಮ್ಮ ಊರುಗಳಲ್ಲೇ ನೆಲೆ ಕಂಡುಕೊಳ್ಳಲು ಮುಂದಾಗಿದ್ದು, ಇಪ್ಪತ್ತು ಸಾವಿರದಷ್ಟು ಉದ್ಯೋಗ ಖಾತರಿ ಜಾಬ್‌ ಕಾರ್ಡ್‌ಗಳಿಗೆ ಬೇಡಿಕೆ ಬಂದಿರುವುದೇ ಇದಕ್ಕೆ ಸಾಕ್ಷಿ.

ಮೇ ತಿಂಗಳಲ್ಲಿ ಬೇಡಿಕೆ ಪ್ರಮಾಣ ದುಪ್ಪಟ್ಟು ಆಗುವ ಅಂದಾಜು ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಂದಿ ಉದ್ಯೋಗ ಖಾತರಿ ಕೂಲಿ ಕೆಲಸ ಕೇಳುತ್ತಿದ್ದಾರೆ. ನರೇಗಾ ಕೂಲಿ ಮೊತ್ತ ದಿನಕ್ಕೆ 275 ರೂ.ಗೆ ಹೆಚ್ಚಿಸಿರುವುದು ಕೂಲಿ ಬಯಸಿರುವವರಿಗೆ ಅನುಕೂಲವಾಗಿದೆ.

ಕೋವಿಡ್‌19 ಭೀತಿ ಸದ್ಯಕ್ಕೆ ನಿವಾರಣೆಯಾಗುವುದು ಅನುಮಾನ ವಾಗಿರುವ ಹಿನ್ನೆಲೆಯಲ್ಲಿ ಈಗ ತವರಿಗೆ ತೆರಳಿರುವ ವಲಸೆ ಕಾರ್ಮಿಕರಲ್ಲಿ ಬಹುತೇಕ ಮಂದಿ ಅಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಪಂಚಾಯತ್‌ ಅಧಿಕಾರಿಗಳ ಬಳಿ ಜಾಬ್‌ ಕಾರ್ಡ್‌ಗೆ ಮನವಿ ಮಾಡುವಾಗ ನಾವು ಮತ್ತೆ ವಲಸೆ ಹೋಗುವುದಿಲ್ಲ, ನಮ್ಮೂರಲ್ಲೇ ಇರುತ್ತೇವೆ ಎಂದು ಹೇಳುತ್ತಿದ್ದಾರೆ.

ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತ ಬಳಿಕ 50 ರಿಂದ 60 ಸಾವಿರ ಅಂತರ ಜಿಲ್ಲಾ ವಲಸೆ ಕಾರ್ಮಿಕರು ತಮ್ಮ ತಮ್ಮ
ಊರುಗಳಿಗೆ ತೆರಳಿದ್ದು, ಆ ಪೈಕಿ ಕಟ್ಟಡ ನಿರ್ಮಾಣ ಮತ್ತು ರಸ್ತೆ ಕಾಮಗಾರಿ ಮಾಡುತ್ತಿದ್ದವರು ನರೇಗಾ ಕೂಲಿಗೆ ಹೊಂದಿಕೊಂಡಿದ್ದಾರೆ. ಉಳಿದಂತೆ ಹೊಟೇಲ್‌, ವಾಣಿಜ್ಯ ಮಳಿಗೆ, ಮಾರುಕಟ್ಟೆ ಸಹಿತ ಇತರೆಡೆ ಕೆಲಸ ಮಾಡುತ್ತಿದ್ದವರು ಕೂಲಿ ಕೆಲಸ ಒಗ್ಗದ ಕಾರಣ ಅಲ್ಲೇ ಬೇರೆ ಕೆಲಸ ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

ನಮ್ಮೂರೇ ಲೇಸು
ಆಯಾ ಭಾಗಗಳಲ್ಲಿ ನಿರ್ಮಾಣ, ರಸ್ತೆ ಕಾಮಗಾರಿ, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ಅವಕಾಶ ಇರುವುದರಿಂದ ಇನ್ನು ಮುಂದೆ ಕಾರ್ಮಿಕರು ಆದಷ್ಟೂ ತಮ್ಮ ಊರುಗಳು ಅಥವಾ ಅಕ್ಕ ಪಕ್ಕದ ಜಿಲ್ಲೆಗಳಲ್ಲೇ ಇರಲು ಬಯಸುವುದು ಸಹಜ. ತೀರಾ ದೂರದ ಊರುಗಳಿಗೆ ಹೋಗಿ ಸಂಕಷ್ಟ ಎದುರಾದರೆ ತೊಂದರೆ ಪಡುವುದಕ್ಕಿಂತ ನಮ್ಮೂರೇ ಲೇಸು ಎಂಬ ಮನಃಸ್ಥಿತಿಗೆ ಬರಬಹುದು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಅಭಿಪ್ರಾಯ ಪಡುತ್ತಾರೆ.

ಕೊರತೆ ಆತಂಕ
ಅಂತರ್‌ ಜಿಲ್ಲೆ ಮತ್ತು ಅಂತರ್‌ ರಾಜ್ಯದ ವಲಸೆ ಕಾರ್ಮಿಕರು ತವರಿಗೆ ಮರಳಿದ್ದರಿಂದ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ಕಾರ್ಮಿಕರ ಕೊರತೆ ಎದುರಾಗುವ ಆತಂಕವನ್ನು ಗುತ್ತಿಗೆದಾರರು ವ್ಯಕ್ತಪಡಿಸುತ್ತಾರೆ. ಸರಕಾರ ಲಾಕ್‌ಡೌನ್‌ ಅಂತ್ಯದಲ್ಲಿ ಇತ್ತ ನಿರ್ಮಾಣ ವಲಯ, ಕೈಗಾರಿಕೆ ಆರಂಭಕ್ಕೆ ಅನುಮತಿ ಕೊಟ್ಟ ಬೆನ್ನಲ್ಲೇ ಸರಕಾರವೇ ಕಾರ್ಮಿಕರು ತವರಿಗೆ ಮರಳಲು ಅವಕಾಶ ಕೊಟ್ಟಿದೆ. ಇದೀಗ ಹೋಗಿರುವವರು ಕನಿಷ್ಠ ಆರೇಳು ತಿಂಗಳು ಇತ್ತ ಬರುವುದು ಅನುಮಾನ. ಇದರಿಂದ ಕಾರ್ಮಿಕರ ಕೊರತೆ ಎದುರಾಗಬಹುದು. ಇರುವವರು ದುಬಾರಿ ಕೂಲಿ ಕೇಳಬಹುದು. ಆದರೂ ಇಲ್ಲಿನ ಬೇಡಿಕೆಗೆ ತಕ್ಕಂತೆ ಕಾರ್ಮಿಕರು ಸಿಗುವುದು ಅನುಮಾನ. ಇದರಿಂದ ತೊಂದರೆ ತಪ್ಪಿದ್ದಲ್ಲ ಎಂದು ಹೇಳುತ್ತಾರೆ.

ಉತ್ತರ ಕರ್ನಾಟಕ ಭಾಗ ಸಹಿತ ರಾಜ್ಯದೆಲ್ಲೆಡೆ ನರೇಗಾ ಜಾಬ್‌ ಕಾರ್ಡ್‌ಗಳಿಗೆ ಬೇಡಿಕೆ ಜಾಸ್ತಿ ಇದೆ. ಲಾಕ್‌ಡೌನ್‌ ಇದಕ್ಕೆ ಕಾರಣ. ಎಷ್ಟೇ ಮಂದಿ ಕೂಲಿ ಕೇಳಿದರೂ ನೀಡಬೇಕು. ಎಪಿಎಲ್‌, ಬಿಪಿಎಲ್‌ ಷರತ್ತು ಹಾಕಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next